ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಸೀಟ್‌ನಲ್ಲೇ ಸಭೆ ನಡೆಸಿದ ಕೊಡಗು ಜಿಲ್ಲಾಧಿಕಾರಿ

ಫಲಪುಷ್ಪ ಪ್ರದರ್ಶನ: ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ
Last Updated 5 ಫೆಬ್ರುವರಿ 2020, 13:23 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ರಾಜಾಸೀಟ್‌ ಉದ್ಯಾನದಲ್ಲಿ ಫೆ.7ರಿಂದ 10ರ ವರೆಗೆ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಯಿತು.

ರಾಜಾಸೀಟ್ ಉದ್ಯಾನಕ್ಕೆ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿದ್ದು ವಿಶೇಷ. ಇಡೀ ರಾಜಾಸೀಟ್ ಉದ್ಯಾನ ಅಡ್ಡಾಡಿದ ಜಿಲ್ಲಾಧಿಕಾರಿ ಬಳಿಕ ನಡೆದ ಸಭೆಯಲ್ಲಿ ಹಲವು ಸೂಚನೆ ನೀಡಿದರು.

ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್‌ ಮಾತನಾಡಿ, ‘ವಿವಿಧ ಇಲಾಖೆಗಳು ಹಾಗೂ ಅಕಾಡೆಮಿಗಳ ಸಹಕಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ವಾಹನ ನಿಲುಗಡೆ ವ್ಯವಸ್ಥೆ, ಬ್ಯಾರಿಕೇಡ್ ನಿರ್ಮಾಣ ಮತ್ತಿತರ ಬಗ್ಗೆ ಪೊಲೀಸ್ ಇಲಾಖೆಯ ಸಹಕಾರ ಅಗತ್ಯ’ ಎಂದು ಅವರು ಕೋರಿದರು.

ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಬಿ.ಬೆಳ್ಯಪ್ಪ, ‘ಫಲಪುಷ್ಪ ಪ್ರದರ್ಶನ ಸಂದರ್ಭದಲ್ಲಿ ಜನದಟ್ಟಣೆ ಇರುವುದರಿಂದ ಖಾಸಗಿ ವಾಹನಗಳನ್ನು ಸಂಜೆ 5ರಿಂದ ರಾತ್ರಿ 9 ಗಂಟೆ ತನಕ ತಾತ್ಕಾಲಿಕವಾಗಿ ಹಳೇ ಖಾಸಗಿ ಬಸ್ ನಿಲ್ದಾಣದವರೆಗೆ ನಿಲ್ಲಿಸಲು ಅವಕಾಶ ಮಾಡಿ, ನಂತರ ಎಪಿಎಂಸಿ ಆವರಣದಲ್ಲಿ ಖಾಸಗಿ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಬೇಕಿದೆ’ ಎಂದು ಸಭೆಯ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ‘ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗಮನಹರಿಸಬೇಕು. ಈ ಸಂಬಂಧ ಚರ್ಚಿಸಿ ಅಗತ್ಯ ಮಾಹಿತಿಯನ್ನು ಮುಂಚಿತವಾಗಿ ನೀಡುವಂತೆ’ ಜಿಲ್ಲಾಧಿಕಾರಿ ಅವರು ಸಲಹೆ ನೀಡಿದರು.

ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲಾಗಿದೆ. ಯಾರೂ ಸಹ ಪ್ಲಾಸ್ಟಿಕ್ ತರುವಂತಿಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. ಫಲಪುಷ್ಪ ಪ್ರದರ್ಶನ ಸಂದರ್ಭದಲ್ಲಿ ಆಹಾರ ಮಳಿಗೆ ಏರ್ಪಡಿಸಲು ಅಗತ್ಯ ಕ್ರಮ ವಹಿಸುವಂತೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.

ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಮೋದ್, ಫಲಪುಷ್ಪ ಪ್ರದರ್ಶನ ಬಗ್ಗೆ ಹಲವು ಮಾಹಿತಿ ನೀಡಿದರು.ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಜು, ಪೌರಾಯುಕ್ತರಾದ ಎಂ.ಎಲ್.ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂಜುನಾಥ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT