ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ ರದ್ದತಿಗೆ ಆಗ್ರಹ

Published 21 ಮಾರ್ಚ್ 2024, 4:29 IST
Last Updated 21 ಮಾರ್ಚ್ 2024, 4:29 IST
ಅಕ್ಷರ ಗಾತ್ರ

ಸೋಮವಾರಪೇಟೆ: ‘ದೇಶದಲ್ಲಿ ಕೇಂದ್ರ ಸರ್ಕಾರ ತಾರತಮ್ಯದಿಂದ ಕೂಡಿರುವ ಹಾಗೂ ವಿರೋಧ ಪಕ್ಷಗಳ ವಿರೋಧದ ನಡುವೆ ಏಕಪಕ್ಷೀಯವಾಗಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಬೇಕು’ ಎಂದು ಸಿಪಿಐ (ಎಂಎಲ್)ನ ಮಾಸ್ ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ ಆಗ್ರಹಿಸಿದರು.

ಸಿಪಿಐ (ಎಂಎಲ್) ಕೊಡಗು ಜಿಲ್ಲಾ ಸಮಿತಿ ವತಿಯಿಂದ ಪಟ್ಟಣದ ಮಾನಸ ಸಭಾಂಗಣದಲ್ಲಿ ಬುಧವಾರ ನಡೆದ ಸಿಪಿಐ (ಎಂಎಲ್) ಮಾಸ್ ಲೈನ್ ಕಾರ್ಯಕರ್ತರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಂವಿಧಾನಿಕ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಬಿಜೆಪಿ ನೇತೃತ್ವದ ಸರ್ಕಾರವನ್ನು ದೇಶದಿಂದ ಕಿತ್ತೊಗೆಯಬೇಕಾದ ಅನಿವಾರ್ಯತೆ ಈಗ ಹೆಚ್ಚಾಗಿದೆ. 2 ಜಿ.ಸ್ಪೆಕ್ಟ್ರಂ ಹಗರಣಕ್ಕಿಂತ ಹತ್ತು ಪಟ್ಟು ದೊಡ್ಡದಾದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಚುನಾವಣೆ ಬಾಂಡ್ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

‘ಯಾವುದೇ ಆಸ್ತಿ ಹಕ್ಕುಗಳ ದಾಖಲಾತಿಗಳಿಲ್ಲದ ಕೋಟ್ಯಂತರ ಬಡ ಆದಿವಾಸಿಗಳನ್ನು ಮತ್ತು ಅಲ್ಪಸಂಖ್ಯಾತರಾದ ಮುಸ್ಲಿಮರನ್ನು ಎರಡನೇ ನಾಗರಿಕರನ್ನಾಗಿಸುವ ಹುನ್ನಾರವಷ್ಟೇ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಗೌರವ ಮತ್ತು ಎಲ್ಲಾ ಸಮುದಾಯಗಳಿಗೆ ಸಮಾನ ಹಕ್ಕುಗಳು ನೆಲದ ಕಾನೂನು ಅಡಿಯಲ್ಲಿ ದೊರಕಬೇಕು. ಇದು ಪ್ರಜಾಪ್ರಭುತ್ವದ ಭೌಗೋಳಿಕವಾದ ಮೂಲಭೂತ ಸಿದ್ಧಾಂತಗಳಲ್ಲಿ ಪ್ರತಿಪಾದನೆಯಾಗಿದೆ’ ಎಂದು ಹೇಳಿದರು.

‘ರಾಜ್ಯ ಸಂಘಟಕರಾದ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ‘ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಟೆಲಿಕಾಂ ಸಚಿವ ಎ.ರಾಜಾ ಅವರು 2 ಜಿ. ಸ್ಪೆಕ್ಟ್ರಂ ಪರವಾನಗಿಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾರಾಟ ಮಾಡಿದ್ದಾರೆ. ಇದರಿಂದ ಸರ್ಕಾರದ ಅದಾಯದಲ್ಲಿ 1,760 ಬಿಲಿಯನ್ ನಷ್ಟವಾಗಿದೆ ಎಂಬ ವಿಷಯದಲ್ಲಿ ಬಿಜೆಪಿ ಕೇಂದ್ರಿಯ ತನಿಖಾ ದಳದಿಂದ ತನಿಖೆ ನಡೆಸಿತ್ತು. ಅಣ್ಣ ಹಜಾರೆ ಬೀದಿಗೆ ಬಂದಿದ್ದರು. ಮಾಧ್ಯಮಗಳು ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದವು. ಈ ಕಾರಣದಿಂದ ಯುಪಿಎ ಅಧಿಕಾರ ಕಳೆದುಕೊಂಡಿತು. ಹಾಗಾಗಿ ಬಾಂಡ್ ಖರೀದಿ ಚುನಾವಣೆ ದೇಣಿಗೆ ಅಲ್ಲ. ಸರ್ಕಾರದ ಅಧಿಕೃತ ಲಂಚದ ವ್ಯವಹಾರವಾಗಿದೆ.ಈ ಕಾರಣದಿಂದ ದೇಶದ ನಾಗರಿಕ ಮತದಾರರು ಭ್ರಷ್ಟರ ವಿರುದ್ಧ ಮತಚಲಾಯಿಸಬೇಕು’ ಎಂದು ಮನವಿ ಮಾಡಿದರು.

ರಾಜ್ಯ ಸಮಿತಿಯ ಸದಸ್ಯರಾದ ಕೆ.ಬಿ.ಗೋನಾಳ, ಬಿ.ಎನ್.ಯರದಿಹಾಳ, ರಮೇಶ ಪಾಟೀಲ, ಬಸವರಾಜ ನರೇಗಲ್, ಚಿಟ್ಟಿಬಾಬು, ಕೊಡಗು ಜಿಲ್ಲಾ ಸಮಿತಿಯ ಸುರೇಶ್, ಮಂಜುನಾಥ, ಸಿದ್ದಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT