ಅದ್ಯಶ್ಯ ಅಮೂರ್ತ ಕ್ಷೇತ್ರಕ್ಕಾಗಿ ಒತ್ತಾಯ!
‘ಸಿಕ್ಕಿಂನ ವಿಧಾನಸಭೆಯಲ್ಲಿ ‘ಸಂಘ’ ಎಂಬ ಅಗೋಚರ ಮತ ಕ್ಷೇತ್ರವಿದೆ. ಬೌದ್ಧ ಭಿಕ್ಷುಗಳಷ್ಟೇ ಸ್ಪರ್ಧಿಸಿ ಅವರಷ್ಟೇ ಮತದಾನ ಮಾಡುವಂತಹ ಈ ಕ್ಷೇತ್ರಕ್ಕೆ ಯಾವುದೇ ಭೌಗೋಳಿಕ ಗೆರೆಗಳಿಲ್ಲ. ಇಡೀ ಸಿಕ್ಕಿಂನಲ್ಲಿ ನೆಲೆಸಿರುವ ಬೌದ್ಧ ಭಿಕ್ಷುಗಳು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತಾರೆ. ಇಂತಹ ಕ್ಷೇತ್ರವನ್ನು ಕೊಡವರಿಗೆ ನೀಡಬೇಕು’ ಎಂಬ ಹೋರಾಟವನ್ನು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ)ನಡೆಸುತ್ತಿದೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ‘ಪ್ರತ್ಯೇಕ ಲೋಕಸಭಾ ಸ್ಥಾನಕ್ಕಿಂತ ಕೊಡವರಿಗೆಂದೇ ಮೀಸಲಾದ ಅಗೋಚರ ಕ್ಷೇತ್ರವನ್ನು ಸಿಕ್ಕಿಂನ ‘ಸಂಘ’ ಕ್ಷೇತ್ರದ ಮಾದರಿಯಲ್ಲಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಸೃಜಿಸಬೇಕು. ಅದಕ್ಕಾಗಿ ವರ್ಷದಲ್ಲಿ ಕನಿಷ್ಠ 25 ದಿನ ಸತ್ಯಾಗ್ರಹ ಮಾಡಿ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ ಚುನಾವಣಾ ಆಯೋಗಗಳಿಗೆ ಸಲ್ಲಿಸುತ್ತಿದ್ದೇವೆ’ ಎಂದು ಹೇಳಿದರು.