ಸೋಮವಾರಪೇಟೆ: ಪ್ರಕೃತ್ತಿಯಲ್ಲಿ ಯಾವುದೇ ಅನಾಹುತಗಳು ನಡೆಯುವ ಮುನ್ನ ಮಾಹಿತಿ ಸಿಗುವುದಿಲ್ಲ, ಘಟನೆಗಳು ನಡೆದ ನಂತರ ಯಾವ ರೀತಿಯಲ್ಲಿ ಪರಿಹಾರ ಕಾರ್ಯಗಳನ್ನು ಮಾಡಬಹುದೆಂದು ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಎಂ.ಎಂ. ರುದ್ರಕುಮಾರ್ ಹೇಳಿದರು.
ಸಮೀಪದ ಯಡೂರು ಗ್ರಾಮದ ಸರ್ಕಾರಿ ಬಿಟಿಸಿಜಿ ಪ್ರಥಮ ದರ್ಜೆ ಕಾಲೇಜು ಮತ್ತು ಐಕ್ಯೂಎಸಿ ಮತ್ತು ವಾಣಿಜ್ಯ ವಿಭಾಗದ ಸಹಯೋಗದಲ್ಲಿ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣೆಯ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
2001ರ ನಂತರ ದೇಶದಲ್ಲಿ ಹಲವು ಪ್ರಾಕೃತ್ತಿಕ ವಿಕೋಪಗಳು ನಿರಂತರವಾಗಿ ನಡೆಯುತ್ತಿವೆ. ಇದರಿಂದಾಗಿ ಸಾಕಷ್ಟು ಜೀವ, ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಇಂತಹ ಘಟನೆಗಳಿಂದ ಆಗಬಹುದಾದ ಪರಿಣಾಮವನ್ನು ನಾವು ಇತ್ತೀಚಿನ ವರ್ಷಗಳಲ್ಲಿ ಕಣ್ಣಾರೆ ಕಾಣುತ್ತಿದ್ದೇವೆ. ಆದುದರಿಂದ ಭವಿಷ್ಯದಲ್ಲಿ ನಡೆಯಬಹುದಾದ ಯಾವುದೇ ದುರ್ಘಟನೆಗಳನ್ನು ಎದುರಿಸಲು ಸರ್ಕಾರ, ಜಿಲ್ಲಾಡಳಿತ ಹಾಗೂ ಯುವ ಸಮೂಹ ಸಿದ್ಧವಿರಬೇಕು ಎಂದರು.
2018 ನಾವು ಮರೆಯಲಾಗದ ವರ್ಷವಾಗಿದೆ. ಕೇರಳ, ಕರ್ನಾಟಕ ಸೇರಿದಂತೆ ಹಲವೆಡೆ ಭಾರಿ ವರ್ಷಧಾರೆಯಿಂದ ಜನ ಜೀವನ ಅಸ್ತವ್ಯಸ್ತವಾಗಿತ್ತು. ಕೇರಳದ ಹೆಚ್ಚಿನ ಪ್ರದೇಶಗಳು ನೀರಿನಿಂದ ಮುಳುಗಿತ್ತು. ಹಲವು ಬೆಟ್ಟ ಗುಡ್ಡಗಳು ಕುಸಿದು ಸಾವಿರಾರು ಜನರು ಮನೆ ಮಠಗಳನ್ನು ಕಳೆದುಕೊಳ್ಳುವುದರೊಂದಿಗೆ, ಜೀವ ಹಾನಿಯೂ ಆಗಿತ್ತು. ಅದೇ ರೀತಿಯಲ್ಲಿ ಕರ್ನಾಟದಕ ಮಲೆನಾಡು ಪ್ರದೇಶಗಳಲ್ಲಿ ಹಲವಾರು ಬೆಟ್ಟಗುಡ್ಡಗಳು ಕುಸಿದು ಸಾಕಷ್ಟು ಕಷ್ಟ ನಷ್ಟವಾಗಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಮುಂದಿನ ದಿನಗಳಲ್ಲಿ ಯಾವುದೇ ಪ್ರಾಕೃತ್ತಿಕ ಅನಾಹುತಗಳು ನಡೆದರೂ, ಅದರಿಂದಾಗುವ ನಷ್ಟವನ್ನು ತಡೆಯಲು ಯುವ ಸಮೂಹ ಯೋಜನೆಗಳನ್ನು ಮಾಡಿಕೊಳ್ಳಬೇಕು. ಯಾವುದೇ ಅನಾಹುತಗಳಾದರೂ, ತಕ್ಷಣ ಯುವಜನರು ಸ್ಥಳಕ್ಕೆ ದಾವಿಸಿ ಜನರ ನೆರವಿಗೆ ನಿಲ್ಲಬೇಕಿದೆ. ಜನರಲ್ಲಿ ಅನಾಹುತಗಳು ಮತ್ತು ಅದರಿಂದ ಪಾರಾಗುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕೆಂದರು.
ಕಾಲೇಜಿನ ಪ್ರಾಂಶುಪಾಲರಾದ ಧನಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕ ಶಿವಮೂರ್ತಿ, ಕಾರ್ಯಕ್ರಮ ವ್ಯವಸ್ಥಾಪನಾ ಸಮಿತಿಯ ಸಹಾಯಕ ಪ್ರಾಧ್ಯಾಪಕರಾದ ಡಾ. ಕುಸುಮ ಮತ್ತು ಎಂ.ಎಂ. ಸುನಿತ, ಪಿ. ಪಾವನ ಇದ್ದರು.
ಮೈಸೂರು, ಸುಳ್ಯ ಸೇರಿದಂತೆ ಜಿಲ್ಲೆಯ ಹಲವು ಕಾಲೇಜಿನ ವಿದ್ಯಾರ್ಥಿಗಳು ವಿಪತ್ತು ನಿರ್ವಹಣೆಯ ಬಗ್ಗೆ ನಡೆದ ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.