ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿ ಕಡಿತಕ್ಕಿಂತ ನಿರ್ಲಕ್ಷ್ಯವೇ ಅಪಾಯ!

ನಿತ್ಯವೂ ಹೆಚ್ಚುತ್ತಿದೆ ನಾಯಿ ಕಡಿತ, ರೇಬಿಸ್‌ ನಿರೋಧಕ ಕ್ಲಿನಿಕ್‌ ತೆರೆಯಲು ಸಿದ್ಧತೆ
Published 28 ಸೆಪ್ಟೆಂಬರ್ 2023, 6:08 IST
Last Updated 28 ಸೆಪ್ಟೆಂಬರ್ 2023, 6:08 IST
ಅಕ್ಷರ ಗಾತ್ರ

ವರದಿ – ಕೆ.ಎಸ್.ಗಿರೀಶ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಿತ್ಯವೂ ಹೆಚ್ಚುತ್ತಿರುವ ಬೀದಿ ನಾಯಿಗಳಿಗಿಂತ ನಾಯಿ ಕಡಿತ ಕುರಿತು ಜನರು ತೋರುತ್ತಿರುವ ನಿರ್ಲಕ್ಷ್ಯವೇ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ. ನಾಯಿ ಕಚ್ಚಿದ ಒಂದೆರಡು ದಿನಗಳ ನಂತರ ಜನರು ಬಂದು ಆಸ್ಪತ್ರೆಗಳಲ್ಲಿ ರೇಬಿಸ್‌ ನಿರೋಧಕ ಲಸಿಕೆ ಪಡೆಯುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.

ಒಮ್ಮೆ ಲಸಿಕೆ ಪಡೆದ ನಂತರ ಮತ್ತೊಂದು ಡೋಸ್‌ ಪಡೆಯಲು ನಿಗದಿತ ದಿನಗಳಂದು ಬಾರದ ಜನರು ತಡವಾಗಿ ಬರುತ್ತಿರುವುದೂ ಆತಂಕವನ್ನು ಇಮ್ಮಡಿಸಿದೆ.

ಬೀದಿನಾಯಿಯೇ ಇರಲಿ, ಸಾಕು ನಾಯಿಯೇ ಇರಲಿ, ಯಾವುದೇ ನಾಯಿ ಕಚ್ಚಿದರೂ ತಕ್ಷಣವೇ ಬಂದು ಲಸಿಕೆ ಪಡೆಯುತ್ತಿಲ್ಲ. ಜನಸಾಮಾನ್ಯರು ನಿರ್ಲಕ್ಷ್ಯ ವಹಿಸಿ, ಸಾಕಷ್ಟು ತಡವಾಗಿ ಲಸಿಕೆ ಪಡೆಯುತ್ತಿದ್ದಾರೆ. ಒಂದು ಬಾರಿ ಲಸಿಕೆ ಪಡೆದವರು ನಿಯಮಿತವಾಗಿ ನಿಗದಿತ ಅವಧಿಗೆ ಲಸಿಕೆ ಪಡೆಯಲು ಬಾರದೇ ತಡವಾಗಿ ಬರುತ್ತಿದ್ದಾರೆ ಎಂದು ವೈದ್ಯರೇ ಹೇಳುತ್ತಾರೆ.

ಈ ಕುರಿತು ‘‍ಪ‍್ರಜಾವಾಣಿ’ ರೇಬಿಸ್ ನಿಯಂತ್ರಣ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ಕೆ.ಕೃತಿಕಾ ಅವರನ್ನು ಸಂಪರ್ಕಿಸಿದಾಗ ಅವರು ‘ನಾಯಿ ಕಡಿತಕ್ಕಿಂತ ನಿರ್ಲಕ್ಷ್ಯವೇ ಅಪಾಯ’ ಎಂದರು.

‘ನಾಯಿ ಕಚ್ಚಿ ಸಾಕಷ್ಟು ಸಮಯವಾದ ನಂತರ ಲಸಿಕೆ ಪಡೆಯುತ್ತಿರುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಕೆಲವೊಮ್ಮೆ ಒಂದು ದಿನ ಕಳೆದ ನಂತರ ಬಂದು ಲಸಿಕೆ ಪಡೆಯುತ್ತಿದ್ದಾರೆ. ಇಂತಹ ನಿರ್ಲಕ್ಷ್ಯ ಸರಿಯಲ್ಲ’ ಎಂದು ತಿಳಿಸಿದರು.

ಇದುವರೆಗೂ ಕೊಡಗು ಜಿಲ್ಲೆಯಲ್ಲಿ ರೇಬಿಸ್‌ ರೋಗಕ್ಕೆ ತುತ್ತಾಗಿ ಮೃತಪಟ್ಟ ಉದಾಹರಣೆಗಳು ಕಡಿಮೆ. ಆದರೆ, ಶಂಕಿತ ಪ್ರಕರಣಗಳು ಕಂಡು ಬರುತ್ತಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಇಲ್ಲವೇ ಬೆಂಗಳೂರಿನ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ.

ರೇಬಿಸ್‌ ವೈರಸ್ ಪತ್ತೆ ಹಚ್ಚುವ ಪ್ರಯೋಗಾಲಯ ಬೆಂಗಳೂರಿನಲ್ಲಿ ಮಾತ್ರವೇ ಇದೆ. ನೀರನ್ನು ಕಂಡರೆ ಭಯಪಡುವಂತಹ ರೇಬಿಸ್‌ ರೋಗದ ಲಕ್ಷಣಗಳು ಇನ್ನೂ ಕೆಲವು ಕಾಯಿಲೆಗಳಲ್ಲೂ ಕಂಡು ಬರುತ್ತವೆ. ಹಾಗಾಗಿ, ಶಂಕಿತ ಪ್ರಕರಣಗಳನ್ನು ಮೈಸೂರು, ಬೆಂಗಳೂರಿಗೆ ಕಳುಹಿಸಿಕೊಡಲಾಗುತ್ತಿದೆ. ತಿಂಗಳಿಗೆ ಇಂತಹ 2 ಪ್ರಕರಣಗಳು ಕಂಡು ಬರುತ್ತಿವೆ.

ಸಾಕುನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ಹಾಕಿಸಿದ್ದರೂ ಆ ನಾಯಿ ಕಚ್ಚಿದರೆ ಲಸಿಕೆ ತೆಗೆದುಕೊಳ್ಳಲೇ ಬೇಕು. ನಾಯಿ ಕಚ್ಚುವುದು ಮಾತ್ರವಲ್ಲ, ಗಾಯಗಳ ಮೇಲೆ ಕೇವಲ ನೆಕ್ಕಿದರೂ ಲಸಿಕೆ ತೆಗೆದುಕೊಳ್ಳಬೇಕು. ಹಾವು ಕಡಿತಕ್ಕೆ ಒಳಗಾದರೆ ಯಾವ ಪರಿಯಲ್ಲಿ ಮುಂಜಾಗ್ರತೆ ವಹಿಸುತ್ತೇವೋ ಅದೆ ಬಗೆಯಲ್ಲಿ ನಾಯಿ, ಕುದುರೆ, ಮಂಗ, ಬೆಕ್ಕು ಸೇರಿದಂತೆ ಯಾವುದೇ ಪ್ರಾಣಿಯ ಕಡಿತಕ್ಕೆ ಒಳಗಾದರೂ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.

ಡಾ.ಕೆ.ಎಂ.ಸತೀಶ್‌ ಕುಮಾರ್‌
ಡಾ.ಕೆ.ಎಂ.ಸತೀಶ್‌ ಕುಮಾರ್‌
ಡಾ.ಕೆ.ಕೃತಿಕಾ
ಡಾ.ಕೆ.ಕೃತಿಕಾ
ನಾಯಿ ಕಡಿತಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಲಸಿಕೆ ಲಭ್ಯ ಎಲ್ಲೆಡೆ ಉಚಿತವಾಗಿ ಲಸಿಕೆ ನೀಡಿಕೆ ನಾಯಿ, ಬೆಕ್ಕು ಕಚ್ಚಿದರೆ ನಿರ್ಲಕ್ಷ್ಯ ವಹಿಸದಂತೆ ಸಲಹೆ
ಕೊಡಗು ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರ ರೇಬಿಸ್ ರೋಗ ನಿರೋಧಕ ಲಸಿಕೆ ಲಭ್ಯವಿದೆ. ನಾಯಿ ಕಡಿತಕ್ಕೆ ನಿರ್ಲಕ್ಷ್ಯಉಚಿತ ಲಸಿಕೆ ಪಡೆಯಬಹುದು
ಡಾ.ಕೆ.ಎಂ.ಸತೀಶ್‌ಕುಮಾರ್ ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ
ಹಾವು ಕಡಿತಕ್ಕೆ ಒಳಗಾದರೆ ಹೇಗೆ ಗಂಭೀರವಾಗಿ ಪರಿಗಣಿಸುತ್ತೇವೆಯೋ ಅಷ್ಟೇ ಗಂಭೀರವಾಗಿ ನಾಯಿ ಬೆಕ್ಕು ಕಡಿತವನ್ನೂ ಪರಿಗಣಿಸಬೇಕು. ತಕ್ಷಣ ವೈದ್ಯರನ್ನು ಭೇಟಿ ಮಾಡಿ ನಿಯಮಿತವಾಗಿ ಲಸಿಕೆ ಪಡೆಯಬೇಕು
ಡಾ.ಕೆ.ಕೃತಿಕಾ ರೇಬಿಸ್ ನಿಯಂತ್ರಣ ಕಾರ್ಯಕ್ರಮದ ನೋಡಲ್ ಅಧಿಕಾರಿ.
ಮುಂಜಾಗ್ರತಾ ಕ್ರಮಗಳು
* ಸಾಕು ನಾಯಿ ಬೀದಿ ನಾಯಿ ಬೆಕ್ಕು ಸೇರಿದಂತೆ ಯಾವುದೇ ಪ್ರಾಣಿಗಳು ಕಚ್ಚಿದರೆ ಗಾಯಗಳನ್ನು ನೆಕ್ಕಿದರೆ ನಿರ್ಲಕ್ಷ್ಯ ವಹಿಸದೇ ತಕ್ಷಣವೇ ಸಾಬೂನಿನಿಂದ ಗಾಯವನ್ನು ಚೆನ್ನಾಗಿ ತೊಳೆಯಬೇಕು * ತಕ್ಷಣವೇ ಆಸ್ಪತ್ರೆಯಲ್ಲಿ ವೈದ್ಯರನ್ನು ಕಾಣಬೇಕು * ವೈದ್ಯರು ನೀಡುವ ಲಸಿಕೆಯನ್ನು ನಿಯಮಿತವಾಗಿ ಪಡೆದುಕೊಳ್ಳಬೇಕು * ವೈದ್ಯರು ಹೇಳಿದ ದಿನಕ್ಕೆ ಬಂದು ನಿರ್ಲಕ್ಷ್ಯ ವಹಿಸದೇ ಲಸಿಕೆಯ ಸಂಪೂರ್ಣ ಡೋಸ್ ಪಡೆಯಬೇಕು
ಆ್ಯಂಟಿ ರೇಬಿಸ್‌ ಕ್ಲಿನಿಕ್ ತೆರೆಯಲು ಸಿದ್ಧತೆ
ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಆ್ಯಂಟಿ ರೇಬಿಸ್ ಕ್ಲಿನಿಕ್‌ ತೆರೆಯಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದಿಂದ ಅಗತ್ಯ ಮೂಲಸೌಕರ್ಯ ದೊರೆತ ಕೂಡಲೇ ಪ್ರತ್ಯೇಕವಾದ ಕ್ಲಿನಿಕ್ ಜಿಲ್ಲಾಸ್ಪತ್ರೆಯಲ್ಲೇ ಆರಂಭವಾಗಲಿದೆ. ಒಂದು ತಿಂಗಳಿಗೆ ಕನಿಷ್ಠ ಎಂದರೂ 70 ಮಂದಿಗೆ ರೇಬಿಸ್ ನಿರೋಧಕ ಲಸಿಕೆ ನೀಡಲಾಗುತ್ತಿದೆ. ಮುಖ ಕುತ್ತಿಗೆ ಭಾಗದಲ್ಲಿ ನಾಯಿ ಕಡಿತಕ್ಕೆ ಒಳಗಾದವರು ಹಾಗೂ ಕಡಿತದಿಂದ ತುಂಬಾ ಆಳವಾದ ಗಾಯವಾದವರಿಗೆ ವಿಶೇಷವಾದ ಇಮ್ಯುನ್ಯು ಗ್ಲೋಬಲಿನ್ ಲಸಿಕೆಯನ್ನೂ ನೀಡಲಾಗುತ್ತಿದೆ. ಇಂತಹ ಲಸಿಕೆಯನ್ನು ತಿಂಗಳಿಗೆ ಕನಿಷ್ಠ ಎಂದರೂ ಇಬ್ಬರಿಗೆ ನೀಡಲಾಗುತ್ತಿದೆ ಎಂದು ಜಿಲ್ಲಾಸ್ಪತ್ರೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT