ಸೋಮವಾರಪೇಟೆ: ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ರೂ. 10 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಾಲಕಿಯರ ವಸತಿ ನಿಲಯ ಮತ್ತು ತುರ್ತು ಹೃದ್ರೋಗ ಚಿಕಿತ್ಸಾಲಯಕ್ಕೆ ಶನಿವಾರ ದೇವಸ್ಥಾನ ರಸ್ತೆಯಲ್ಲಿನ ಸಂಘದ ಜಾಗದಲ್ಲಿ ಭೂಮಿಪೂಜೆ ನಡೆಸಲಾಯಿತು.
ಚಾಲನೆ ನೀಡಿದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ರಾಜ್ಯ ಒಕ್ಕಲಿಗರ ಸಂಘ ಸಂಘಟನೆ, ಸಮುದಾಯವರಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡಲು ಮೊದಲ ಆದ್ಯತೆ ನೀಡಿ ಕೆಲಸ ಮಾಡುತ್ತಿದೆ. ಒಕ್ಕಲಿಗರ ಸಂಘದ ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, 250 ಹಾಸಿಗೆಯ ಬಾಲಕಿಯರ ವಸತಿ ನಿಲಯ ಆರಂಭಿಸಲಾಗುವುದು. ಮುಂದಿನ ಒಂದು ತಿಂಗಳಿನಲ್ಲಿ ಎಲ್ಲ ಸೌಲಭ್ಯಗಳನ್ನೊಳಗೊಂಡ ಬೃಹತ್ ಆರೋಗ್ಯ ಶಿಬಿರ ನಡೆಸಿ, ಔಷಧಿಯನ್ನು ನೀಡಲಾಗುವುದು’ ಎಂದರು.
‘ರಾಜ್ಯ ಸರ್ಕಾರ ನಡೆಸಿದ ಜಾತಿ ಗಣತಿ ಸಮೀಕ್ಷೆ ತಪ್ಪಿನಿಂದ ಕೂಡಿದ್ದು, ಒಕ್ಕಲಿಗರ ಸಮುದಾಯಕ್ಕೆ ಅನ್ಯಾಯವಾಗಿದ್ದು, 1.30 ಕೋಟಿ ನಮ್ಮ ಜನಾಂಗವರಿದ್ದು, ಅವೈಜ್ಞಾನಿಕ ಗಣತಿಯಿಂದ ಕಡಿಮೆ ಸಂಖ್ಯೆ ತೋರಿಸಲಾಗಿದೆ. ಮತ್ತೊಮ್ಮೆ ಸರ್ಕಾರ ಹೊಸ ಸಮೀಕ್ಷೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯಕ್ಕೆ, ದೇಶಕ್ಕೆ ಒಕ್ಕಲಿಗರ ಕೊಡುಗೆ ದೊಡ್ಡದಿದೆ. ನಾಡಪ್ರಭು ಕೆಂಪೇಗೌಡ ಬೆಂಗಳೂರನ್ನು ಕಟ್ಟಿ, ಜಾತ್ಯಾತೀತ ಆಡಳಿತ ನೀಡಿದರು. ಇವತ್ತು ಬೆಂಗಳೂರು ಐಟಿ, ಬಿಟಿಯಲ್ಲಿ ಇಡೀ ಪ್ರಪಂಚದಲ್ಲಿ ಗುರುತಿಸಿಕೊಂಡಿದೆ’ ಎಂದು ಹೇಳಿದರು.
‘ರಾಜ್ಯ ಸರ್ಕಾರ ಬೆಂಗಳೂರನ್ನು ನಾಲ್ಕು ಭಾಗಗಳನ್ನಾಗಿ ಮಾಡಿ ಅಭಿವೃದ್ಧಿ ಮಾಡುವುದಾಗಿ ತಿಳಿಸಿದೆ. ನಾಲ್ಕು ಭಾಗಗಳನ್ನು ಮಾಡಿದರೂ, ಸ್ಥಳದ ಮೂಲ ಆಶಯಕ್ಕೆ ಧಕ್ಕೆ ಬಾರದ ಹಾಗೆ ವಿಂಗಡಿಸಬೇಕು. ತಪ್ಪಿದಲ್ಲಿ ಅದರ ವಿರುದ್ಧ ಹೋರಾಡಲಾಗುವುದು’ ಎಂದು ಎಚ್ಚರಿಸಿದರು.
ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ‘ಇಲ್ಲಿಯವರೆಗೆ ರಾಜ್ಯ ಒಕ್ಕಲಿಗರ ಸಂಘದಿಂದ ಜಿಲ್ಲೆಗೆ ಯಾವುದೇ ದೊಡ್ಡಮಟ್ಟದ ಅನುದಾನ ಸಿಕ್ಕಿಲ್ಲ. ಈಗ ಬಾಲಕಿಯರ ವಸತಿ ಗೃಹದ ಕನಸು ನನಸಾಗುತ್ತಿದೆ. ಸಂಘದ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಅನುದಾನ ದೊರೆತಿದೆ. ವಸತಿ ಗೃಹದೊಂದಿಗೆ ಹೃದ್ರೋಗಕ್ಕೆ ಸಂಬಂಧಿಸಿ ಹೈಟೆಕ್ ಕ್ಲಿನಿಕ್ ಸ್ಥಾಪಿಸಲು ಕ್ರಮ ವಹಿಸಲಾಗುವುದು. ಗ್ರಾಮೀಣ ಭಾಗದ ರೈತರಿಗೆ ಸೂಕ್ತ ಪ್ರಥಮ ಚಿಕಿತ್ಸೆ ಸಿಗದೇ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೃದಯಾಘಾತವಾದ ಸಂದರ್ಭ ಪ್ರಥಮ ಚಿಕಿತ್ಸೆ ಸಿಕ್ಕರೆ ಒಂದಷ್ಟು ಜೀವಗಳನ್ನು ಉಳಿಯುತ್ತವೆ ಎಂಬ ದೃಷ್ಟಿಯಿಂದ ಇಸಿಜಿ, ಇಕೋ ಸೇರಿದಂತೆ ಇತರ ಉಪಕರಣಗಳನ್ನೊಳಗೊಂಡ ಚಿಕಿತ್ಸಾಲಯ ಆರಂಭಿಸಲಾಗುವುದು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್ ಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ತಾಲ್ಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ, ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಬಿ.ಸುರೇಶ್, ಕೊಡಗು ಗೌಡ ಫೆಡರೇಷನ್ ಅಧ್ಯಕ್ಷ ಸುರ್ತಲೆ ಸೋಮಣ್ಣ, ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ಪುಟ್ಟಸ್ವಾಮಿ, ಪ್ರಕಾಶ್, ಸಿ.ದೇವರಾಜ್, ಹನುಮಂತರಾಯಪ್ಪ, ಎಸ್.ಎನ್.ರಘು, ಶ್ರೀನಿವಾಸ್, ಚಂದ್ರಶೇಖರ್, ಡಾ.ಟಿ.ಎಚ್. ಅಂಜನಪ್ಪ, ಪೂರ್ಣೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.