ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ: ಕೊಡವರಿಗೆ ಕಳಂಕ ತರುವ ಹುನ್ನಾರ ಎಂದ ನಾಚಪ್ಪ

ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಹೇಳಿಕೆ
Last Updated 21 ಆಗಸ್ಟ್ 2022, 15:37 IST
ಅಕ್ಷರ ಗಾತ್ರ

ಮಡಿಕೇರಿ: 'ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕೋಳಿಮೊಟ್ಟೆ ಎಸೆದ ಪ್ರಕರಣದ ಹಿಂದೆ ಕೊಡವರನ್ನು ಕಳಂಕಿತರು, ದುರ್ಜನರೆಂದು ಬಿಂಬಿಸುವ ಕ್ರೂರ ಹುನ್ನಾರ ಅಡಗಿದೆ" ಎಂದು 'ಕೊಡವ ನ್ಯಾಷನಲ್ ಕೌನ್ಸಿಲ್ 'ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

‘ಕೊಡವರು ದೇಶದ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳುವ ನಿಷ್ಕಳಂಕ ಜನರಾಗಿದ್ದಾರೆ. ಕೊಡವರಿಗೆ ಮೊಟ್ಟೆ ಎಸೆಯುವ ಅಗತ್ಯ ಇಲ್ಲ. ಕ್ಷಮೆಯಾಚಿಸುವವರಿಗೆ ದಯೆ ತೋರಿಸುವ ಕೊಡವರು, ಯಾವುದೇ ನೋವು, ದುರಂತಗಳಿಗೆ ಸೇಡು ತೀರಿಸುವ ಜನರಲ್ಲ. ಕೋಳಿಮೊಟ್ಟೆ ಎಸೆತದ ವಿಚಾರದಲ್ಲಿ ಕೊಡವರನ್ನು ಎಳೆದು ತರಬಾರದು’ ಎಂದು ಅವರು ಹೇಳಿದ್ದಾರೆ.

‘ಕೊಡವರಿಗೆ ಇಂದು ಬೇಕಾಗಿರುವುದು ರಾಜಕೀಯ, ಸಂವಿಧಾನಾತ್ಮಕ ಪರಿಹಾರಗಳು ಮಾತ್ರವೇ ಹೊರತು ಮೊಟ್ಟೆ ಎಸೆತವಲ್ಲ. ಇತ್ತೀಚೆಗೆ ಸಿದ್ದರಾಮಯ್ಯ ಅವರಿಗೆ ಮೊಟ್ಟೆ ಎಸೆದ ಪ್ರಕರಣದಲ್ಲಿ ರಾಜಕೀಯ ಪಕ್ಷಗಳು ಮೇಲಾಟ ಮಾಡುತ್ತಾರೆ. ಕೊಡವರನ್ನು ಮತ್ತು ಕೊಡವ ಪೊಲೀಸ್ ಅಧಿಕಾರಿಯನ್ನು ಬಲಿ ಪಡೆದುಕೊಳ್ಳಲು ಈ ಮೂಲಕ ಪಿತೂರಿ ನಡೆಸಲಾಗಿದೆ. ಮೊಟ್ಟೆ ಎಸೆತ ಪ್ರಕರಣ ದುರದೃಷ್ಟಕರ ಮತ್ತ ವಿಲಕ್ಷಣ ಘಟನೆಯಾಗಿದೆ. ಕೊಡಗು ಸೇರಿದಂತೆ ದೇಶದ ಗಡಿಗಳಲ್ಲಿ ನಡೆದ ಘನಘೋರ ಯುದ್ಧಗಳಲ್ಲಿ ಭಾಗವಹಿಸಿ ಪರಾಕ್ರಮ ಮೆರೆದ ಕೊಡವರು ಹೇಡಿಯಂತೆ ಮೊಟ್ಟೆ ಎಸೆಯುವಂತಹ ಕ್ಷುಲ್ಲಕ ಕಾರ್ಯಕ್ಕೆ ಇಳಿದಿಲ್ಲ’ ಎಂದು ಹೇಳಿದ್ದಾರೆ.

‘1956ರಲ್ಲಿ ಪ್ರತ್ಯೇಕ ರಾಜ್ಯದ ಸ್ಥಾನಮಾನ ಕಳೆದುಕೊಳ್ಳಲು ಕಾರಣರಾದವರ ಮೇಲೂ ಕೊಡವರು ಮೊಟ್ಟೆ ಎಸೆದಿಲ್ಲ. ಗೋಪ್ಯ ಕಾರ್ಯಸೂಚಿ, ಸಂಚು, ಕಿಡಿಗೇಡಿತನ ಕೊಡವರಲ್ಲಿ ಇಲ್ಲ. 1956ರಲ್ಲಿ ಕಳೆದುಕೊಂಡ ಪ್ರತ್ಯೇಕ ರಾಜ್ಯದ ಸ್ಥಾನಮಾನಕ್ಕೆ ಬದಲಿಯಾಗಿ ಭೂ–ರಾಜಕೀಯ ಸ್ವಾಯತ್ತತೆ ಬೇಕಿದೆ. ಅರಮನೆ ಹತ್ಯಾಕಾಂಡ ಮತ್ತು ದೇವಟ್‌ ಪರಂಬು ದುರಂತದಲ್ಲಿ ಹತ್ಯೆಯಾದ ಅಸಂಖ್ಯಾತ ಕೊಡವರಿಗೆ ಅಂತರರಾಷ್ಟ್ರೀಯ ಸ್ಮಾರಕ ಬೇಕಿದೆ. ಜತೆಗೆ, ಎಸ್‌.ಟಿ.ಟ್ಯಾಗ್ ಬೇಕಾಗಿದೆ. ಇದರಿಂದ ದಿಕ್ಕು ತಪ್ಪಿಸಲು ಇಂತಹ ಕ್ಷುಲ್ಲಕ ಕಾರ್ಯ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT