ಸೋಮವಾರ, ಜೂನ್ 21, 2021
23 °C
ಆಕ್ಸಿಜನ್ ಸಂಗ್ರಹಣಾ ಘಟಕ: ಒಮ್ಮೆಲೇ 13 ಸಾವಿರ ಲೀಟರ್ ಆಮ್ಲಜನಕ ಸರಬರಾಜಿಗೆ ಮುಖ್ಯಮಂತ್ರಿ ಬಳಿ ಮನವಿ

ನಿತ್ಯ 4 ಸಾವಿರ ಲೀಟರ್ ಆಮ್ಲಜನಕ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರತಿದಿನ ಸುಮಾರು 1,800ಕ್ಕಿಂತಲೂ ಅಧಿಕ ಆರ್‌ಟಿಪಿಸಿಆರ್ ಮತ್ತು ಆಂಟಿಜನ್ ಟೆಸ್ಟ್ ಮಾಡಲಾಗುತ್ತಿದೆ. ಕೋವಿಡ್ ಪರೀಕ್ಷೆ ನಡೆಸುವ ಸಲುವಾಗಿ ಜಿಲ್ಲೆಯಲ್ಲಿ 9 ಸಂಚಾರಿ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆಯಲ್ಲಿ 200 ಅಮ್ಲಜನಕ ಹಾಸಿಗೆ ವ್ಯವಸ್ಥೆ ಮಾಡಿಕೊಂಡಿದ್ದು, ಸುಸಜ್ಜಿತವಾದ 56 ಐ.ಸಿ.ಯು ಬೆಡ್ ಮತ್ತು 43 ವೆಂಟಿಲೇಟರ್‌ ಇದೆ. ಜಿಲ್ಲೆಯಲ್ಲಿ 32 ಆಂಬುಲೆನ್ಸ್‌ಗಳಿದ್ದು, ಗಂಟಲು/ಮೂಗು ದ್ರವ ಸಂಗ್ರಹಣೆಗಾಗಿ 5 ಹಾಗೂ ಶವ ಸಾಗಾಣಿಕೆಗಾಗಿ 4 ವಾಹನಗಳನ್ನು ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಗಂಭೀರ ಸ್ವರೂಪದ ಸೋಂಕಿತರ ಸೇವೆಗಾಗಿ ಹೈಟೆಕ್ ಮಾದರಿಯ ಆಂಬುಲೆನ್ಸ್ ವಾಹನಗಳನ್ನು ಸಜ್ಜುಗೊಳಿಸಲು ಕ್ರಮ ವಹಿಸಲಾಗುತ್ತಿದೆ.

‘ಜಿಲ್ಲೆಯಲ್ಲಿ 5 ಡಿಸಿಎಚ್‍ಸಿಗಳು ಸೋಂಕಿತರ ಚಿಕಿತ್ಸೆಗೆ ಲಭ್ಯವಿವೆ. ಜಿಲ್ಲಾ ಆಸ್ಪತ್ರೆ 150 ಬೆಡ್‍ಗಳು, ಸೋಮವಾರಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ 50 ಬೆಡ್‍ಗಳು, ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ 50 ಬೆಡ್‍ಗಳು, ಪಾಲಿಬೆಟ್ಟ 30 ಬೆಡ್‍ಗಳು ಹಾಗೂ ಕುಟ್ಟ 30 ಬೆಡ್‍ಗಳು ಒಟ್ಟಾರೆ 310 ಬೆಡ್‍ಗಳು ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.

ಮಡಿಕೇರಿ ಮೆಡಿಕಲ್ ಕಾಲೇಜಿನಲ್ಲಿ 100 ಹಾಸಿಗೆಗಳ ಡಿ.ಸಿ.ಎಚ್.ಸಿ ಕೇಂದ್ರವನ್ನು ಉದ್ಘಾಟಿಸಲಾಗಿದ್ದು, ಇದಕ್ಕಾಗಿ 87 ಆಕ್ಸಿಜನ್ ಕಾನ್ಸಂಟ್ರೇಟರ್‌ ಒದಗಿಸಲಾಗಿದೆ ಎಂದರು.

ಐ.ಸಿ.ಯು ಘಟಕದಲ್ಲಿ ನವಜಾತ ಶಿಶುಗಳಿಗೆ ಹಾಗೂ ನಾನ್ ಕೋವಿಡ್ ರೋಗಿಗಳ ಡಯಾಲಿಸಿಸ್‍ಗೆ ಪ್ರತ್ಯೇಕವಾದ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ 13 ಸಾವಿರ ಲೀಟರ್ ಸಾಮರ್ಥ್ಯದ ಲಿಕ್ವಿಡ್ ಆಕ್ಸಿಜನ್ ಸಂಗ್ರಹಣಾ ಘಟಕವನ್ನು ಸ್ಥಾಪಿಸಲಾಗಿದ್ದು, ಪ್ರತಿನಿತ್ಯ ಸರಾಸರಿ 4 ಸಾವಿರ ಲೀಟರ್ ಆಮ್ಲಜನಕ ಅವಶ್ಯವಿದೆ. ಹಾಗಾಗಿ, ಒಂದೇ ಬಾರಿಗೆ 13 ಸಾವಿರ ಲೀಟರ್ ಸರಬರಾಜು ಮಾಡಿ ನಂತರ ಬಳಕೆಗೆ ಅನುಗುಣವಾಗಿ ಸರಬರಾಜು ಮಾಡಿಕೊಡಲು ಮಾನ್ಯ ಮುಖ್ಯಮಂತ್ರಿ ಅವರನ್ನು ಕೋರಲಾಗಿದೆ ಎಂದರು.

ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ಅಗತ್ಯವಿರುವ ವೈದ್ಯಕೀಯ ಹಾಗೂ ಇತರೆ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಕೋವಿಡ್ ತುರ್ತು ಕಾರ್ಯಕ್ಕೆ ನೇಮಿಸಿಕೊಂಡ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿ ಮಾಡಲು ಸೂಚಿಸಲಾಗಿದೆ. ಹಾಲಿ ಇದ್ದ 3 ಕೋವಿಡ್ ಕೇರ್ ಸೆಂಟರ್‌ಗಳ ಜೊತೆಗೆ, ಹೆಚ್ಚುವರಿಯಾಗಿ 3 ಕೋವಿಡ್ ಕೇರ್ ಸೆಂಟರ್‌ ತೆರೆಯಲಾಗಿದೆ. ಪ್ರಸ್ತುತ ಕೊಡಗು ವಿದ್ಯಾಲಯ 100 ಬೆಡ್‍ಗಳು, ನವೋದಯ ವಿದ್ಯಾಲಯ 200 ಬೆಡ್‍ಗಳು, ಕೂಡಿಗೆ 100 ಬೆಡ್‍ಗಳು, ಬಸವನಹಳ್ಳಿ 100 ಬೆಡ್‍ಗಳು, ಅರ್ಜಿ 100 ಬೆಡ್‍ಗಳು, ಬಾಳಗುಂದ 100 ಬೆಡ್‍ಗಳು ವ್ಯವಸ್ಥೆ ಮಾಡಲಾಗಿದೆ. ಹೋಮ್ ಐಸೊಲೇಶನ್‍ನಲ್ಲಿರುವ ವ್ಯಕ್ತಿಗಳು, ಮನೆಗಳಿಂದ ಹೊರಬಂದು ಅಡ್ಡಾಡದಂತೆ ನಿಗಾವಹಿಸಲು ಹೋಬಳಿಗೆ ಒಬ್ಬರಂತೆ 16 ಮಂದಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 3,530 ಜನರು ಹೋಮ್ ಐಸೋಲೇಶನ್‍ನಲ್ಲಿ ಇದ್ದಾರೆ ಎಂದು ಸಚಿವರು ಹೇಳಿದರು.

ಹೋಮ್ ಐಸೊಲೇಷನ್‍ನಲ್ಲಿರುವ ವ್ಯಕ್ತಿಗಳನ್ನು ಗುರುತಿಸುವ ಸಲುವಾಗಿ ಅವರ ಕೈಗೆ ಸೀಲ್ ಹಾಕಲಾಗುತ್ತಿದೆ. ಹೊರ ರಾಜ್ಯ, ಜಿಲ್ಲೆಯಿಂದ ಬಂದ ವ್ಯಕ್ತಿಗಳು 14 ದಿನ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‍ನಲ್ಲಿರಲು ಆದೇಶಿಸಲಾಗಿದೆ. ಅವರಿಗೂ ಕೂಡ ಸೀಲ್ ಹಾಕಲು ಸೂಚಿಸಲಾಗಿದೆ. ಸುಮಾರು 2,500 ಜನರು ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ವಾರದಲ್ಲಿ ಮೂರು ದಿನಗಳಲ್ಲಿ ಅಂದರೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ಅಗತ್ಯ ದಿನಸಿ ಪದಾರ್ಥಗಳನ್ನು ಬೆಳಿಗ್ಗೆ 6ರಿಂದ 10 ಗಂಟೆ ವರೆಗೆ ಖರೀದಿಸಲು ಅವಕಾಶ ಕಲ್ಪಿಸಲಾಗಿದ್ದು, ಉಳಿದೆಲ್ಲಾ ದಿನಗಳಲ್ಲಿ ಸಂಪೂರ್ಣ ಲಾಕ್‍ಡೌನ್ ಮಾಡಲಾಗಿದೆ. ಜಿಲ್ಲೆಗೆ ಸಂಪರ್ಕ ಕಲ್ಪಿಸುವ 13 ಗಡಿಗಳಲ್ಲಿ ಚೆಕ್‍ಪೋಸ್ಟ್‌ಗಳನ್ನು ತೆರೆದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಸಹಾಯವಾಣಿ ಕೇಂದ್ರಗಳ ಸ್ಥಾಪನೆ, ಆಂಬುಲೆನ್ಸ್ ಹಾಗೂ ಆಕ್ಸಿಜನ್ ನಿರ್ವಹಣೆ, ಔಷಧಿಗಳು, ಇಂಜೆಕ್ಷನ್‍ಗಳ ಹಾಗೂ ವ್ಯಾಕ್ಸಿನೇಷನ್ ಕೇಂದ್ರಗಳ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡಲು ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ನಿಗಾ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಗ್ರಾಮ ಮಟ್ಟದಲ್ಲಿ ಹಾಗೂ ವಾರ್ಡ್ ಮಟ್ಟದಲ್ಲಿ ಆರೋಗ್ಯ ತಪಾಸಣಾ ತಂಡಕ್ಕೆ ಸಹಕರಿಸುವ ನಿಟ್ಟಿನಲ್ಲಿ ಟಾಸ್ಕ್‌ಪೋರ್ಸ್‌ ರಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 37 ಲಸಿಕಾ ಕೇಂದ್ರಗಳಿದ್ದು, ಸುಮಾರು 2 ಲಕ್ಷ ಲಸಿಕೆಗಳನ್ನು ಶೇಖರಿಸಿಡುವ ಸಾಮರ್ಥ್ಯವಿದೆ. ಇದರ ಜೊತೆಗೆ ಪೊನ್ನಂಪೇಟೆಯಲ್ಲಿ ಜನರ ಬೇಡಿಕೆಯಾಧರಿಸಿ ಮತ್ತೊಂದು ಲಸಿಕಾ ಕೇಂದ್ರ ತೆರೆಯಲು ಸೂಚಿಸಲಾಗಿದೆ ಎಂದರು.

ಗೋಣಿಕೊಪ್ಪಲಿನಲ್ಲಿ ಕರುಣ ಟ್ರಸ್ಟ್ ಹಾಗೂ ಎಲ್.ಎಂ.ಸಿ ಸಹಯೋಗದೊಂದಿಗೆ ನಡೆಸಲ್ಪಡುತ್ತಿರುವ ಲೋಪಮುದ್ರ ಆಸ್ಪತ್ರೆಯವರು ತಮ್ಮ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೊನಾ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದಕ್ಕಾಗಿ ಮೀಸಲಿಡಲು ಮುಂದೆಬಂದಿದ್ದು, ಈ ಬಗ್ಗೆ ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ತುರ್ತು ನಿರ್ಧಾರ ಕೈಗೊಳ್ಳಲು ಜಿಲ್ಲಾಧಿಕಾರಿ ಅವರಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುತ್ತಿರುವ ಊಟದ ವ್ಯವಸ್ಥೆಯಲ್ಲಿ ಒಂದಷ್ಟು ಗೊಂದಲಗಳಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸರಿಪಡಿಸಲಾಗಿದೆ. ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ನಿಯಮಿತವಾಗಿ ರೋಗಿಗಳನ್ನು ಭೇಟಿಯಾಗುತ್ತಿರುವ ಬಗ್ಗೆ ನಿಗಾವಹಿಸಲು ಆಸ್ಪತ್ರೆಗಳಲ್ಲಿ ಸಿಸಿ ಟಿವಿಗಳನ್ನು ಮತ್ತು ಮೈಕ್‌ಗಳನ್ನು ತುರ್ತಾಗಿ ಅಳವಡಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಆಸ್ಪತ್ರೆ ಉದ್ಘಾಟನೆ: ಕೊಡಗು ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ನೂತನವಾಗಿ 100 ಹಾಸಿಗೆಯ ಡಿಸಿಎಚ್‍ಸಿ ಕೇಂದ್ರವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಉದ್ಘಾಟಿಸಿದರು.

ಶಾಸಕ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ, ಅಧೀಕ್ಷಕ ಡಾ.ಲೋಕೇಶ್, ಆಡಳಿತಾಧಿಕಾರಿ ನಂಜುಂಡೇಗೌಡ, ಡಿಎಚ್‍ಒ ಡಾ.ಕೆ.ಮೋಹನ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.