ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಎರಡಂಕಿ ದಾಟದ ಸಂತಾನಹರಣ ಶಸ್ತ್ರಚಿಕಿತ್ಸೆ

ಮಹಿಳೆಯರ ಹೆಗಲಿಗೆ ಸಂತಾನಶಕ್ತಿ ನಿಯಂತ್ರಣದ ಹೊರೆ
Published 11 ಜುಲೈ 2023, 6:34 IST
Last Updated 11 ಜುಲೈ 2023, 6:34 IST
ಅಕ್ಷರ ಗಾತ್ರ

ಕೆ.ಎಸ್.ಗಿರೀಶ

ಮಡಿಕೇರಿ: ಶಾಶ್ವತವಾಗಿ ಗರ್ಭಧಾರಣೆ ತಡೆಯುವ ಉದ್ದೇಶದಿಂದ ಪುರುಷರಿಗೆ ‘ಸಂತಾನಹರಣ ಶಸ್ತ್ರಚಿಕಿತ್ಸೆ’ ಇದ್ದರೂ ಕೊಡಗು ಜಿಲ್ಲೆಯಲ್ಲಿ 2020ರಿಂದ ಇಲ್ಲಿಯವರೆಗೆ ಈ ಶಸ್ತ್ರಚಿಕಿತ್ಸೆಗೆ ಒಳಗಾದವರ ಸಂಖ್ಯೆ ಎರಡಂಕಿ ದಾಟಿಲ್ಲ. ಆದರೆ, ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ.

ಇಂದಿಗೂ ಗರ್ಭ ನಿರೋಧಕಗಳ ಬಳಕೆ ವಿಚಾರ ಬಂದಾಗ ಅದರ ಜವಾಬ್ದಾರಿ ಮಹಿಳೆಯದೇ ಎಂಬ ಧೋರಣೆ ಪುರುಷರಲ್ಲಿದೆ. ಅದರಲ್ಲೂ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ವಿಚಾರ ಬಂದಾಗಲಂತೂ ಪುರುಷರು ಮಾರು ದೂರ ಸರಿಯುತ್ತಾರೆ. ಇದರಿಂದ ಮಗು ಹೆರುವಾಗಲೂ, ಅದನ್ನು ತಡೆಯುವಾಗಲೂ ಮಹಿಳೆಯರೇ ನೋವು ಅನುಭವಿಸುವ ಸ್ಥಿತಿ ಮುಂದುವರಿದಿದೆ.

ಪುರುಷರಿಗೆ ಇದೀಗ ಬಹುತೇಕ ಎಲ್ಲ ಆಸ್ಪತ್ರೆಗಳಲ್ಲೂ ಅತ್ಯಂತ ಸರಳವಾದ ‘ನೋ ಸ್ಕಾಲ್‌ಪೆಲ್ ವ್ಯಾಸೆಕ್ಟಮಿ’ ಶಸ್ತ್ರಚಿಕಿತ್ಸೆ ಲಭ್ಯವಿದೆ. ಗಾಯ, ಹೊಲಿಗೆ ಇಲ್ಲದೇ ಕೇವಲ 5ರಿಂದ 10 ನಿಮಿಷದಲ್ಲಿ ಈ ಚಿಕಿತ್ಸೆ ಮಾಡಬಹುದು. ಕೇವಲ ಅರ್ಧ ಗಂಟೆಯಲ್ಲೇ ಮನೆಗೆ ತೆರಳಲೂಬಹುದು. ಜತೆಗೆ, ಸರ್ಕಾರ ಬಿಪಿಎಲ್‌ ಮತ್ತು ಎಪಿಎಲ್‌ ಪಡಿತರ ಚೀಟಿ ಹೊಂದಿರುವ ಎಲ್ಲರಿಗೆ ₹ 1,100 ಹಣ ನೀಡುತ್ತಿದೆ. ಪುರುಷರನ್ನು ಈ ಚಿಕಿತ್ಸೆಗೆ ಒಳಗಾಗಲು ಕೌನ್ಸಿಲಿಂಗ್ ಮಾಡಿ ಮನವೊಲಿಸುವ ಆಶಾ ಕಾರ್ಯಕರ್ತೆಯರಿಗೂ ಪ್ರೋತ್ಸಾಹಧನವನ್ನೂ ಸರ್ಕಾರ ನೀಡುತ್ತಿದೆ. ಇಷ್ಟಾದರೂ, ಕೊಡಗು ಜಿಲ್ಲೆಯಲ್ಲಿ ಪುರುಷರ ಚಿತ್ತ ವ್ಯಾಸಕ್ಟಮಿಯತ್ತ ಒಲಿಯುತ್ತಿಲ್ಲ.

ಈ ಶಸ್ತ್ರಚಿಕಿತ್ಸೆಯಿಂದ ಪುರುಷರ ದೈಹಿಕ ಅಥವಾ ಮಾನಸಿಕ ಶಕ್ತಿ ಕುಂದುವುದಿಲ್ಲ. ಮೊದಲಿನಂತೆ ಎಲ್ಲ ಕೆಲಸವನ್ನೂ ಮಾಡಬಹುದು. ಲೈಂಗಿಕ ಶಕ್ತಿಯೂ ಕುಂದುವುದಿಲ್ಲ. ಈ ಕುರಿತು ಸಾಕಷ್ಟು ಅರಿವು ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. 2022ರ ಏಪ್ರಿಲ್‌ನಿಂದ 2023ರ ಮಾರ್ಚ್‌ವರೆಗೆ ಕೇವಲ 19 ಮಂದಿ ಮಾತ್ರವೇ ಈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ, ಇದೇ ಅವಧಿಯಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಮಹಿಳೆಯರು 1,720.

ಮಗು ಹೆರುವಾಗಲೂ ಬಹುತೇಕ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮಹಿಳೆಯರು ಅಸಾಧ್ಯ ನೋವನ್ನು ಅನುಭವಿಸುತ್ತಾರೆ. ಮಗುವಿನ ಲಾಲನೆ, ಪಾಲನೆಯ ಹೊರೆಯೂ ಅವರದ್ದೇ ಅಧಿಕ. ಕೊನೆಗೆ, ಸಂತಾನಶಕ್ತಿ ಹರಣದ ವಿಷಯ ಬಂದಾಗ ಪುರುಷರಿಗೆ ಅತ್ಯಂತ ಸರಳ, ನೋವು ರಹಿತ ವಿಧಾನವಿದ್ದರೂ ಪುರುಷರು ಈ ಸಣ್ಣ ನೋವನ್ನೂ ಸಹಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT