ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗಮಂಡಲ: ₹35.86 ಕೋಟಿ ವೆಚ್ಚದ ಮೇಲ್ಸೇತುವೆ ಕಾಮಗಾರಿ ಪೂರ್ಣ; ಶೀಘ್ರ ಲೋಕಾರ್ಪಣೆ

Published 7 ಮೇ 2024, 6:39 IST
Last Updated 7 ಮೇ 2024, 6:39 IST
ಅಕ್ಷರ ಗಾತ್ರ

ನಾಪೋಕ್ಲು: ಧಾರ್ಮಿಕ ಕ್ಷೇತ್ರ ಭಾಗಮಂಡಲದಲ್ಲಿ ಸಂಚಾರ ವ್ಯವಸ್ಥೆಗೆ ಕೈಗೊಳ್ಳಲಾದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿದೆ.

ಪ್ರತೀ ವರ್ಷ ಮಳೆಗಾಲದಲ್ಲಿ ಭಾಗಮಂಡಲ ಜಲಾವೃತವಾಗಿ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದರು. ಮೇಲ್ಸೇತುವೆ ಕಾಮಗಾರಿ ಪೂರ್ಣ ಗೊಂಡಿರುವುದರಿಂದ ಈ ಸಮಸ್ಯೆ ಇರುವುದಿಲ್ಲ. ಜಿಲ್ಲೆಯ ಏಕೈಕ ಮೇಲ್ಸೇತುವೆ ಆರು ವರ್ಷಗಳ ಬಳಿಕ ವಾಹನ ಸಂಚಾರಕ್ಕೆ ಮುಕ್ತಗೊಂಡಿರುವುದರಿಂದ ಜನ ಹರ್ಷಗೊಂಡಿದ್ದಾರೆ.

2018ರಲ್ಲಿ ಮೇಲ್ಸೇತುವೆ ಕಾಮಗಾರಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತ. ದಕ್ಷಿಣದ ಪ್ರಯಾಗ ಎಂದು ಹೆಸರುವಾಸಿಯಾದ ಭಾಗಮಂಡಲಕ್ಕೆ ಸಹಸ್ರಾರು ಭಕ್ತರು ಆಗಮಿಸುತ್ತಿರುತ್ತಾರೆ. ಅಕ್ಟೋಬರ್ ತಿಂಗಳಲ್ಲಿ ತುಲಾ ಸಂಕ್ರಮಣದಿಂದ ಕಿರು ಸಂಕ್ರಮಣದವರೆಗೆ ಇಲ್ಲಿ ಜಾತ್ರೆಯ ಸಂಭ್ರಮ ಇರುತ್ತದೆ. ಆದರೆ ಮಳೆಗಾಲದಲ್ಲಿ ಮಾತ್ರ ಭಾಗಮಂಡಲದಲ್ಲಿ ಸಂಚಾರ ಸಮಸ್ಯೆ ಉದ್ಭವಿಸುತ್ತಿತ್ತು. ಬೆಟ್ಟಶ್ರೇಣಿಗಳಲ್ಲಿ ಮಳೆಯಾದಾಗ ಜಲಾವೃತವಾಗುತ್ತಿತ್ತು. ತ್ರಿವೇಣಿ ಸಂಗಮ ಮುಳುಗಡೆಯಾಯಿತೆಂದರೆ ತಲಕಾವೇರಿ, ಕೋರಂಗಾಲ ಮತ್ತು ಚೇರಂಗಾಲ ಸೇರಿದಂತೆ ವಿವಿಧ ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತಿತ್ತು. ಇದರ ಪರಿಹಾರಕ್ಕಾಗಿ ಮೇಲ್ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.

2018ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ ಚಾರ್ಜ್ ಭಾಗಮಂಡಲದಲ್ಲಿ ಮೇಲ್ಸೇತುವೆ ನಿರ್ಮಿಸುವುದಾಗಿ ಘೋಷಿಸಿದರು. ₹26.86 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಕಾಮಗಾರಿಗೆ ಹಸಿರು ನಿಶಾನೆ ನೀಡಲಾಯಿತು. ತೇಜಸ್ ಇನ್ಫ್ರೋ ಪ್ರೈವೇಟ್ ಲಿಮಿಟೆಡ್  ಕಂಪೆನಿಯು 2019ರ ಜನವರಿಯಲ್ಲಿ ಮೇಲ್ಸೆತುವೆ ಕಾಮಗಾರಿ ಆರಂಭಿಸಿತು.

ವರ್ಷದೊಳಗೆ ಮುಗಿಯಬೇಕಾಗಿದ್ದ ಕಾಮಗಾರಿ ಮುಕ್ತಾಯಗೊಳ್ಳಲು ಆರು ವರ್ಷ ತೆಗೆದುಕೊಂಡಿತು. ನಿರ್ಮಾಣಕ್ಕೆ ₹35.86 ಕೋಟಿ ವೆಚ್ಚವೂ ಆಯಿತು. ಮೇಲ್ಸೇತುವೆ ಡಾಮರೀಕರಣ ಹಾಗೂ ಲೈಟಿಂಗ್ ವ್ಯವಸ್ಥೆಗಳು ಮುಕ್ತಾಯಗೊಂಡಿವೆ. ಮಳೆಗಾಲದ, ಕೊರೊನಾ ಸಮಸ್ಯೆ, ಸ್ಥಳದ ಸಮಸ್ಯೆ ಹಾಗೂ ಗುತ್ತಿಗೆದಾರರ ಕೆಲಸ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗಿದ್ದು ಹಲವು ಬಾರಿ ಸಾರ್ವಜನಿಕರಿಂದ ವಿರೋಧವೂ ವ್ಯಕ್ತವಾಗಿತ್ತು.

‘ಹಲವು ವರ್ಷಗಳಿಂದ ಭಾಗಮಂಡಲ ಮಳೆಗಾಲದಲ್ಲಿ ದ್ವೀಪವಾಗಿ ಮಾರ್ಪಾಡಾಗುತ್ತಿತ್ತು. ಇದರಿಂದ ಜನಸಾಮಾನ್ಯರು ಸಮಸ್ಯೆ ಎದುರಿಸುತ್ತಿದ್ದರು. ಮೇಲ್ಸೇತುವೆಯಿಂದಾಗಿ ಭಾಗಮಂಡಲ ಜನತೆಗೆ ಹಾಗೂ ಭಕ್ತರಿಗೆ ಅನುಕೂಲವಾಗಿದೆ’ ಎಂದು ಭಾಗಮಂಡಲ ನಿವಾಸಿ ಭರತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT