ಶನಿವಾರ, ಜೂನ್ 25, 2022
26 °C
ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ

ಸುಂಟಿಕೊಪ್ಪ: ಜಾನುವಾರುಗಳಿಗೆ ಕಾಲುಬಾಯಿ ಜ್ವರ, ರೈತರಲ್ಲಿ ಆತಂಕ

ಸುನಿಲ್ ಎಂ.ಎಸ್. Updated:

ಅಕ್ಷರ ಗಾತ್ರ : | |

Prajavani

ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, ರೈತರು
ಆತಂಕಗೊಂಡಿದ್ದಾರೆ.

ಸುಂಟಿಕೊಪ್ಪ ಸಮೀಪದ ಕೆದಕಲ್ ಪಂಚಾಯಿತಿ ವ್ಯಾಪ್ತಿಯ ಹೊರೂರು, ಪೊನ್ನತ್ ಮೊಟ್ಟೆ, ಭೂತನಕಾಡು, ಈರಳೆ ಗ್ರಾಮಗಳಲ್ಲಿ ಹಲವು ದಿನಗಳಿಂದ ಜಾನುವಾರಗಳಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡು ಹೊಲಗದ್ದೆಗಳಿಗೆ ತೆರಳುವುದಕ್ಕೆ ಸಾಧ್ಯವಾಗದೆ ನರಳುತ್ತಿವೆ.

ಈಗಾಗಲೇ ಹೊರೂರು, ಭೂತನಕಾಡು ಸೇರಿದಂತೆ ಕಾಲುಬಾಯಿ ಜ್ವರ ಕಾಣಿಸಿಕೊಂಡ ಜಾನುವಾರುಗಳಿಗೆ ಪಶು ಚಿಕಿತ್ಸಾಲಯದ ವೈದ್ಯರು ತೆರಳಿ ಔಷಧಿ ಮತ್ತು ಚುಚ್ಚುಮದ್ದುಗಳನ್ನು ನೀಡುತ್ತಿದ್ದಾರೆ. ಆದರೂ ರೋಗ ಕಾಣಿಸಿಕೊಂಡ ಜಾನುವಾರುಗಳ ಕೆಚ್ಚಲು, ಪಾದ, ಬಾಯಿ, ಕಾಲುಗಳಲ್ಲಿ ನೀರಿನ ಬೊಬ್ಬೆಗಳು ಕಾಣಿಸಿಕೊಂಡಿದ್ದು, ಇದರಿಂದ ಹಾಲು ಪಡೆಯಲು ಸಹ ಕಷ್ಟವಾಗುತ್ತಿದೆ. ಅಲ್ಲದೆ, ಹೆಚ್ಚಿನ ಹಸುಗಳಲ್ಲಿ ಬಾಯಿಯಿಂದ ಬಿಳಿ ಜೊಲ್ಲು ಸೋರುತ್ತಿದೆ. ಕೆಲವು ದನಕರುಗಳು ನಿತ್ರಾಣಗೊಂಡು ಮೇಲೆಳುವುದಕ್ಕೂ ಸಾಧ್ಯವಾಗದ ಸ್ಥಿತಿ
ಉಂಟಾಗಿದೆ.

‘ಕಳೆದ ವರ್ಷ ಜಾನುವಾರುಗಳಿಗೆ ನೀಡಿರುವ ಲಸಿಕೆ ಗುಣಮಟ್ಟದಿಂದ ಕೂಡಿರದೇ ಇರುವುದರಿಂದ ಈ ಬಾರಿ ರೋಗ ಕಾಣಿಸಿಕೊಂಡಿದೆ. ನಮ್ಮ ಮನೆಯ 6 ಹಸುಗಳು ಮತ್ತು 2 ಕರುಗಳಿಗೆ ಕಾಲುಬಾಯಿ ಜ್ವರ ಬಂದಿದೆ. ಯಾವತ್ತೂ ದನಕರುಗಳು ಇಷ್ಟೊಂದು ಕಾಯಿಲೆಗೆ ತುತ್ತಾಗಿರಲಿಲ್ಲ, ಚಿಕಿತ್ಸೆ ಕೊಡಿಸುತ್ತಿದ್ದೇವೆ’ ಎಂದು ಕೆದಕಲ್ ಗ್ರಾಮದ ಹೊರೂರು ಮಠದ ಕಾಫಿ ಬೆಳೆಗಾರ ದೇವಿ ಪ್ರಸಾದ್ ಕಾಯಾರ್‌ಮಾರ್ ಹೇಳುತ್ತಾರೆ.

‘ಇದೊಂದು ಅಂಟುರೋಗವಾಗಿದ್ದು, ರೋಗ ಲಕ್ಷಣವಿರುವ ಹಸುಗಳೊಂದಿಗೆ ಆರೋಗ್ಯವಂತ ದನಗಳು ಬೆರೆತರೆ ಕಾಯಿಲೆ ಬೇಗ ಹರಡುತ್ತದೆ. ಆದ್ದರಿಂದ ಆರೋಗ್ಯವಂತ ದನಗಳನ್ನು ದೂರ ಇರಿಸಬೇಕು. ಬಾಯಿ ಹುಣ್ಣುಗಳಿಗೆ ಪೌಡರ್, ಗ್ಲಿಸರಿನ್ ಹಾಕಿ ತೊಳೆದು, ಆನಂತರ ಲಸಿಕೆ ನೀಡಬೇಕಾಗುತ್ತದೆ. 6 ತಿಂಗಳಿಗೊಮ್ಮೆ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕು’ ಎಂದು ಚೆಟ್ಟಳಿ ಮತ್ತು ಕೂಡಿಗೆ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಂಜೀವ ಕುಮಾರ್ ಆರ್. ಶಿಂಧೆ ಸಲಹೆ ನೀಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು