ಗುರುವಾರ , ಮೇ 13, 2021
18 °C
ವಿರಾಜಪೇಟೆ ಪಟ್ಟಣದಲ್ಲಿ ನಡೆದ ರೋಮನ್ ಕ್ಯಾಥೋಲಿಕ್ ಫುಟ್‌ಬಾಲ್ ಟೂರ್ನಿ

ಅಮ್ಮತ್ತಿ ‘ಎ’ ತಂಡ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿರಾಜಪೇಟೆ: ಪಟ್ಟಣದ ಸಂತ ಅನ್ನಮ್ಮ ಚರ್ಚ್‌ ಹಾಗೂ ಕ್ರೈಸ್ತ ಸ್ನೇಹಿತರ ಸಂಘದ ವತಿಯಿಂದ ನಡೆದ ಟೈಗರ್ ಫೈ ಫುಟ್‌ಬಾಲ್ ಟೂರ್ನಿಯಲ್ಲಿ ಅಮ್ಮತ್ತಿ ‘ಎ’ ತಂಡವು ಪ್ರಶಸ್ತಿ ಪಡೆದುಕೊಂಡಿತು.

ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಮೈದಾನದಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ರೋಮನ್ ಕ್ಯಾಥೋಲಿಕ್ ಫುಟ್‌ಬಾಲ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಅಮ್ಮತ್ತಿ ‘ಎ’ ತಂಡವು ಅಮ್ಮತ್ತಿ ‘ಸಿ’ ತಂಡವನ್ನು 3-1 ಗೊಲುಗಳಿಂದ ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ವಿಜೇತ ತಂಡದ ಪರ ಮೈಕಲ್ 2 ಹಾಗೂ ಜೈಸನ್ 1 ಗೊಲು ಗಳಿಸಿ ಗೆಲುವಿನ ರೂವಾರಿಯೆನಿಸಿದರು. ಪರಾಜಿತ ತಂಡದ ಪರವಾಗಿ ಅಮಲ್ 1 ಗೋಲು ಗಳಿಸಿದರು.

ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಅಮ್ಮತ್ತಿ ‘ಡಿ’ ತಂಡ ಅಮ್ಮತ್ತಿಯ ‘ಬಿ’ ತಂಡವನ್ನು 4-2 ಗೊಲುಗಳಿಂದ ಮಣಿಸಿ ಮೂರನೇ ಸ್ಥಾನವನ್ನು ಪಡೆದುಕೊಂಡಿತು. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಲಾಯಿತು.

ಟೂರ್ನಿಯಲ್ಲಿ ಜಿಲ್ಲೆಯ ವಿವಿಧೆಡೆಯ ಒಟ್ಟು 19 ತಂಡಗಳು ಭಾಗವಹಿಸಿದ್ದವು. ಮೊದಲ ನಾಲ್ಕು ಸ್ಥಾನಗಳನ್ನು ಅಮ್ಮತ್ತಿ ಧರ್ಮ ಕೇಂದ್ರಕ್ಕೆ ಸೇರಿದ ತಂಡಗಳೆ ಪಡೆದಿರುವುದು ವಿಶೇಷ. ಅಂತಿಮ ಪಂದ್ಯವನ್ನು ಪಟ್ಟಣದ ಉದ್ಯಮಿ ಮಾರ್ಟಿನ್ ಬರ್ನಾಡ್ ಉದ್ಘಾಟಿಸಿದರು.

ಮಹಿಳೆಯರಿಗಾಗಿ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಆರ್ಜಿ ಧರ್ಮ ಕೇಂದ್ರಕ್ಕೆ ಸೇರಿದ ತಂಡವು ಪ್ರಥಮ ಸ್ಥಾನ ಪಡೆಯಿತು. ಪಟ್ಟಣದ ಅರಸುನಗರ ವಠಾರ ತಂಡವು ದ್ವಿತೀಯ ಸ್ಥಾನ ಪಡೆಯಿತು.

ಫುಟ್‌ಬಾಲ್ ಟೂರ್ನಿಯ ಭರವಸೆಯ ಆಟಗಾರ ಪ್ರಶಸ್ತಿ ಶಾಮ್ ಅಂಥೋನಿ, ಅತ್ಯಧಿಕ ಗೋಲು ದಾಖಲಿಸಿದ ಪ್ರಶಸ್ತಿ ವಿನ್ಸೆಂಟ್, ಉತ್ತಮ ಮುನ್ನಡೆಯ ಆಟಗಾರನಾಗಿ ಸೈಮನ್, ಉತ್ತಮ ಗೋಲ್‌ ಕೀಪರ್ ಆ್ಯಂಡ್ರೂ, ಉದಯೋನ್ಮುಖ ಆಟಗಾರನಾಗಿ ಶಿಬಿನ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಅಮ್ಮತ್ತಿ ತಂಡದ ಮೈಕಲ್ ಪಡೆದುಕೊಂಡರು. ಟೂರ್ನಿಯ ತೀರ್ಪುಗಾರರಾಗಿ ಅಶ್ವಥ್ ಮತ್ತು ಗಣೇಶ್ ಕಾರ್ಯನಿರ್ವಹಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತ ಅನ್ನಮ್ಮ ಚರ್ಚ್‌ನ ಧರ್ಮಗುರು ಮದಲೈ ಮುತ್ತು,   ಧರ್ಮಕೇಂದ್ರದ ಯುವಕರನ್ನು ಕ್ರೀಡೆಯ ಮುಖಾಂತರ ಒಂದೂಗೂಡಿಸಿ ಸನ್ಮಾರ್ಗದ ಪಥದಲ್ಲಿ ಸಾಗುವಂತೆ ಮಾಡುವುದು ಕ್ರೀಡಾಕೂಟದ ಮುಖ್ಯ ಉದ್ದೇಶವಾಗಿದೆ. ಶಾಂತಿ ಸಹಬಾಳ್ವೆಯಿಂದ ಜೀವನ ಸಾಗಿಸುವಂತೆ ಸಂದೇಶವನ್ನು ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್. ಮಚ್ಚಾಡೋ ಮಾತನಾಡಿದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಅಗಸ್ಟೀನ್ ಕ್ಸೇವಿಯರ್, ಉದ್ಯಮಿ ಸಿಬಿ ಕುರಿಯನ್, ಪಿ.ಟಿ.ಜೋಸೆಫ್, ಜೋಕಿಂ ರೋಡ್ರಿಗಸ್, ರೇನ್ಸಿ ವರ್ಗಿಸ್, ಮರ್ವಿನ್ ಲೋಬೊ ಮತ್ತು ಕಾಫಿ ಬೆಳೆಗಾರ ಜೆ.ಎಸ್ ಪಿಂಟೋ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಜ್ಯೂಡಿ ವಾಜ್ ಸ್ವಾಗತಿಸಿ, ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು