ಶುಕ್ರವಾರ, ಜುಲೈ 1, 2022
21 °C
ಕಾವೇರಿ ನಿಸರ್ಗಧಾಮದಲ್ಲಿ ಗಮನ ಸೆಳೆಯುತ್ತಿರುವ ಮಿಯಾವಾಕಿ ವನ

ಭೂಕುಸಿತ ತಡೆಗೆ ‘ಮಿಯಾವಾಕಿ ವನ‌’ ನಿರ್ಮಾಣಕ್ಕೆ ಚಿಂತನೆ

ರಘು ಹೆಬ್ಬಾಲೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಕೊಡಗು ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕಾವೇರಿ ನಿಸರ್ಗಧಾಮದಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ‘ಮಿಯಾವಾಕಿ ವನ’ ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಜಲಪ್ರಳಯ ಉಂಟಾಗಿ ಬೆಟ್ಟಗುಡ್ಡಗಳು ಕುಸಿದು ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. ಜೊತೆಗೆ, ಬೆಟ್ಟಗಳ ತಪ್ಪಲಿನಲ್ಲಿ ವಾಸಿಸುತ್ತಿದ್ದ ಅನೇಕ ಜನರು, ಪ್ರಾಣಿ, ಪಕ್ಷಿಗಳು ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡರು. ಪ್ರತಿ ವರ್ಷ ಆಗಸ್ಟ್‌ನಲ್ಲಿ ಸಂಭವಿಸುವ ಈ ದುರಂತವನ್ನು ತಪ್ಪಿಸಲು ವಿಶೇಷ ಹಾಗೂ ಶಾಶ್ವತ ಯೋಜನೆ ಕಾರ್ಯರೂಪಕ್ಕೆ ತರಬೇಕು ಎಂಬ ಕೂಗು ಕೇಳಿ ಬಂದಿತು.

ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ ಭೂಕುಸಿತ ತಡೆಗಟ್ಟಲು ವಿನೂತನವಾದ ಪ್ರಯೋಗಕ್ಕೆ ಮುಂದಾಗಿದೆ. ಅದುವೇ ‘ಮಿಯಾವಾಕಿ ಪದ್ಧತಿ’ಯಲ್ಲಿ ಸಮೃದ್ಧವಾಗಿ ಅರಣ್ಯ ಬೆಳೆಸುವ ಮೂಲಕ ಮಣ್ಣಿನ ಸಡಿಲಿಕೆ ತಡೆಗಟ್ಟಲು ಪ್ರಾಯೋಗಿಕ ಪ್ರಯೋಗ ನಡೆಸುತ್ತಿದೆ.

ಪ್ರಥಮ ಹಂತವಾಗಿ ಅರಣ್ಯ ಇಲಾಖೆಯು ಬಿಡದಿಯ ಟೊಯೊಟಾ ಕಿಲೋಸ್ಕರ್ ಆಟೋ ಪಾರ್ಟ್ಸ್ ಸಹಯೋಗದೊಂದಿಗೆ ಕಾವೇರಿ ನಿಸರ್ಗಧಾಮದ ಆವರಣದಲ್ಲಿ 1 ಎಕರೆ ಪ್ರದೇಶದಲ್ಲಿ ‘ಮಿಯಾವಾಕಿ ಮಾದರಿ ಅರಣ್ಯೀಕರಣ ಯೋಜನೆ’ ತಲೆ ಎತ್ತಿ ನಿಂತಿದೆ. ಜಪಾನ್ ಸಸ್ಯ ಶಾಸ್ತ್ರಜ್ಞ ಡಾ.ಅಕಿರ ಮಿಯಾವಾಕಿ ಅವರು ಆವಿಷ್ಕಾರ ಮಾಡಿರುವ ವಿಶೇಷ ತಳಿಯ ಗಿಡಗಳಾಗಿದ್ದು, ಇವು ಭೂಕುಸಿತ ಮಣ್ಣಿನ ಸಡಿಲಿಕೆ ಆಗದಂತೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ.

ಸುಮಾರು 10 ಸಾವಿರ ವಿವಿಧ ಜಾತಿಯ ಸಸ್ಯಗಳನ್ನು ಬೆಳೆದಿರುವ ಮಿಯಾವಾಕಿ ವನದ ಸಂಪೂರ್ಣ ನಿರ್ವಹಣೆಯನ್ನು ಟೊಯೊಟೊ ಕಿರ್ಲೋಸ್ಕರ್ ಸಂಸ್ಥೆ ನೋಡಿಕೊಳ್ಳುತ್ತಿದೆ. ಕೊಡಗು ಜಿಲ್ಲೆಯ ಬೆಟ್ಟದ ಸಾಲಿನಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾಗದಲ್ಲಿ ಇಂತಹ ಅರಣ್ಯೀಕರಣ ಬೆಳೆಸುವುದಾದರೆ ನೆರವು ನೀಡಲೂ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ. ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲೂ ಬಿಸಿಲಿನ ತಾಪಮಾನ ಏರಿಕೆ ಕಂಡುಬಂದಿದೆ. ಇಂತಹ ಪರಿಸ್ಥಿತಿಯನ್ನು ಎದುರಿಸಲು ಮಿಯಾವಾಕಿ ವನಗಳ ತುಂಬ ಅನುಕೂಲಕರವಾಗಿವೆ.

ಜಿಲ್ಲೆಯಲ್ಲಿ ಮುಂದೆ ದುಬಾರೆಯಲ್ಲಿ 5 ಎಕರೆ, ಹಾರಂಗಿ ಹಿನ್ನೀರಿನ ಟ್ರೀ ಪಾರ್ಕ್‌ನಲ್ಲಿ 5 ಎಕರೆ ಪ್ರದೇಶದಲ್ಲಿ ಮಿಯಾವಾಕಿ ಅರಣ್ಯ ಬೆಳೆಸುವ ಯೋಜನೆಯಿದೆ. 2018ರ ಈಚೆಗೆ ಪ್ರತಿ ಮಳೆಗಾಲ ಹಾಗೂ ಆಗಸ್ಟ್‌ನಲ್ಲಿ ಸಂಭವಿಸುವ ಜಲಪ್ರಳಯವನ್ನು ಜಿಲ್ಲೆಯ ಜನರಲ್ಲಿ ಆತಂಕವನ್ನು ತರುತ್ತಿದೆ.

ಜೊತೆಗೆ ಜೀವಭಯದಿಂದ ದಿನಗಳನ್ನು ಕಳೆಯುವಂತಹ ವಾತಾವರಣ ನಿರ್ಮಾಣ ಆಗಿದೆ. ಆಗಸ್ಟ್ ಕಂಟಕ ಭೂಕುಸಿತದ ರೂಪದಲ್ಲಿ ಮೊದಲ ವರ್ಷ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಜನರ ಬದುಕನ್ನು ನರಕ ಮಾಡಿದರೆ, 2019ರಲ್ಲಿ ವಿರಾಜಪೇಟೆ ತಾಲ್ಲೂಕಿನ ತೋರ, ಭಾಗಮಂಡಲದ ಕೋರಂಗಾಲದಲ್ಲಿ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿತು.

2020ರಲ್ಲಿ ತಲಕಾವೇರಿಯಲ್ಲಿ ಐವರು ಭೂಸಮಾಧಿಯಾದರು. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಾಫಿ ತೋಟ, ಪ್ರೀತಿಯಿಂದ ಸಾಕಿದ್ದ ಜಾನುವಾರುಗಳೂ ಮಣ್ಣಿನ ಅಡಿಗೆ ಸೇರಿಕೊಂಡವು.

ಸ್ವಯಂ ಸೇವಾ ಸಂಸ್ಥೆಗಳು ಭೂಕುಸಿತದ ಪ್ರದೇಶಗಳಲ್ಲಿ ಈಗಾಗಲೇ ‘ವೆಟ್ಟಿವೆರ್ ಹುಲ್ಲು’ ನಾಟಿ ಮಾಡಿದ್ದಾರೆ. ಮತ್ತೊಂದು ಕಡೆ ಅರಣ್ಯ ಇಲಾಖೆಯೂ ಭೂಕುಸಿತ ತಡೆಯುವ ನಿಟ್ಟಿನಲ್ಲಿ ಪರಿಹಾರೋಪಾಯಗಳನ್ನು ಕಂಡು ಹುಡುಕುವ ಬಗ್ಗೆ ಪ್ರಯತ್ನಗಳನ್ನು ನಡೆಸುತ್ತಿದೆ. ‘ಮಿಯಾವಾಕಿʼ ಪದ್ಧತಿಯ ಅರಣ್ಯ ಬೆಳೆಸುವುದರಿಂದ ಬೆಟ್ಟ ಜರಿದು ಬರುವ ಸಮಸ್ಯೆಗೆ ಕಡಿವಾಣ ಹಾಕುವ ಸಾಧ್ಯತೆ ಪರೀಕ್ಷಿಸುತ್ತಿದೆ.

ಬಿಡದಿಯ ಟೊಯಯೊಟಾ ಕಿಲೋಸ್ಕರ್ ಆಟೋ ಪಾರ್ಟ್ಸ್ ಸಂಸ್ಥೆ ಸಹಯೋಗದಲ್ಲಿ ಕುಶಾಲನಗರದ ಕಾವೇರಿ ನಿಸರ್ಗಧಾಮದ ಒಂದು ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ‘ಮಿಯಾವಾಕಿ’ ಅರಣ್ಯದ ಮಾದರಿ ಬೆಳೆಸಲಾಗಿದೆ.

ಈ ನವದಲ್ಲಿ ಹೆಬ್ಬೇವು, ಹಲಸು, ನೇರಳೆ, ಕಾಡುಮಾವು, ದಿಂಡಲ್, ತಡಸಲು ಸೇರಿದಂತೆ ಕೊಡಗಿನಲ್ಲಿ ಸಾಮಾನ್ಯವಾಗಿ ಕಾಣಸಿಗುವಂತಹ ಮರಗಳನ್ನೇ ಇಲ್ಲಿ ಬೆಳೆಯಲಾಗಿದೆ. ಜಿಲ್ಲೆಯ ವಾತಾವರಣಕ್ಕೆ ‘ಮಿಯಾವಾಕಿ’ ಪದ್ಧತಿ ಹೊಂದಿಕೊಳ್ಳುವ ಸೂಚನೆ ಸಿಕ್ಕಿದೆ.

‘ಮಿಯಾವಾಕಿʼ ಪದ್ಧತಿಯಲ್ಲಿ ಒತ್ತೊತ್ತಾಗಿ ಮರಗಳನ್ನು ಬೆಳೆಸುವುದರಿಂದ ಬೇರುಗಳ ಜಾಲ ನೆಲವನ್ನು ಗಟ್ಟಿಯಾಗಿ ಹಿಡಿದುಕೊಂಡು ಹರಡುತ್ತದೆ. ಇದರಿಂದ ಭೂಮಿಯ ಪದರಗಳು ಬಲಿಷ್ಠವಾಗಲಿದ್ದು, ಭೂಕುಸಿತಕ್ಕೆ ಅವಕಾಶ ನೀಡಲಿಕ್ಕಿಲ್ಲ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಹಾಗಾಗಿ ಇಲಾಖೆಯ ಜಾಗದಲ್ಲಿ ‘ಮಿಯಾವಾಕಿʼ ಪದ್ಧತಿಯಲ್ಲಿ ಅರಣ್ಯ ಬೆಳೆಸಲು ಚಿಂತನೆ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು