ಮಡಿಕೇರಿ: ಬೀಳುತ್ತಿದ್ದ ಮಳೆ ಹನಿಗಳು, ಶಿಸ್ತುಬದ್ಧವಾದ ಕವಾಯತು, ಕಿವಿಗಿಂಪಾದ ಪೊಲೀಸ್ ವಾದ್ಯವೃಂದದ ನಡುವೆ ಇಲ್ಲಿನ ಅರಣ್ಯ ಭವನದಲ್ಲಿ ಬುಧವಾರ ಅರಣ್ಯ ಇಲಾಖೆಯ 61 ಮಂದಿ ಹುತಾತ್ಮರನ್ನು ನೆನೆಯಲಾಯಿತು. ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಪೊಲೀಸ್ ವಾದ್ಯ ವೃಂದವು ‘ಅಬೈಡ್ ವಿತ್ ಮಿ’ ಹಾಗೂ ‘ಲಾಸ್ಟ್ ಪೋಸ್ಟ್’ ಎಂಬ ಗೀತೆಗಳಿಗೆ ವಾದ್ಯ ನುಡಿಸುವ ಮೂಲಕ ಗೌರವ ಸಮರ್ಪಿಸಿತು.
ಕೊಡಗು ಜಿಲ್ಲೆಯ ಎಂ.ವೈ.ಗಿರೀಶ್, ಕೆ.ಎಸ್.ವಿಠ್ಠಲ್, ಕೆ.ಎಂ.ಪೃತುಕುಮಾರ್ ಸೇರಿದಂತೆ ರಾಜ್ಯದಲ್ಲಿ 1966ರಿಂದ 2024ರವರೆಗೆ ಹುತಾತ್ಮರಾದ ಇಲಾಖೆಯ ನೌಕರರ ಹೆಸರುಗಳನ್ನು ಡಿಸಿಎಫ್ ಭಾಸ್ಕರ್ ವಾಚಿಸಿದರು. ಇವರ ಹೆಸರುಗಳನ್ನು ಹೇಳುತ್ತಿದ್ದಂತೆ ಹುತಾತ್ಮರ ಸ್ನೇಹಿತರು, ಬಂಧುಗಳ ಕಣ್ಣಾಲಿಗಳು ತುಂಬಿ ಬಂದವು.
ಈ ವೇಳೆ ಮಾತನಾಡಿದ ಭಾಸ್ಕರ್, ‘ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದ ನೌಕರರಿಗೆ ₹ 30 ಲಕ್ಷ ಪರಿಹಾರ ನೀಡಲಾಗುತ್ತಿದೆ. ಹುತಾತ್ಮರ ಕುಟುಂಬಕ್ಕೆ ನೆರವಾಗಲು ಅರಣ್ಯ ಹುತಾತ್ಮರ ದಿನಾಚರಣೆ ಸಮಿತಿ ಸ್ಥಾಪಿಸಿದ್ದು, ಈ ಸಮಿತಿಗೆ ವಿವಿಧ ಅರಣ್ಯ ವೃತ್ತಗಳಿಂದ ಹಾಗೂ ವೈಯಕ್ತಿಕವಾಗಿ ದೇಣಿಗೆಗಳು ಬಂದಿವೆ. ಇದನ್ನು ಹುತಾತ್ಮರ ಅವಲಂಬಿತರ ಏಳಿಗೆಗಾಗಿ ಬಳಸಲಾಗುತ್ತದೆ’ ಎಂದರು.
ಇದೇ ದಿನ ಅಂದರೆ ಸೆ. 11, 1730ರಲ್ಲಿ ಜೋಧಪುರ್‌ನ ಮಹಾರಾಜ ಅಭಯಸಿಂಗ್‌ನ ಹೊಸ ಅರಮನೆ ನಿರ್ಮಾಣಕ್ಕಾಗಿ ಕೆಜ್ರಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ಕಡಿಯಲು ವಿರೋಧಿಸಿದ ಬಿಷ್ಣೋಯಿ ಸಮುದಾಯದ 363 ಪುರುಷ, ಮಹಿಳೆ ಮತ್ತು ಮಕ್ಕಳನ್ನು ಹತ್ಯೆ ಮಾಡಲಾಯಿತು. ಮರಗಳ ರಕ್ಷಣೆಗಾಗಿ ಬಲಿದಾನಗೈದ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಕೇಂದ್ರ ಸರ್ಕಾರ ಇದೇ ದಿನವನ್ನು ರಾಷ್ಟ್ರೀಯ ಹುತಾತ್ಮರ ದಿನ ಎಂದು ಘೋಷಿಸಿದೆ ಎಂದು ಹೇಳಿದರು.
ಕಾಡುಗಳ್ಳ ವೀರಪ್ಪನ್‌ನಿಂದ ಹುತಾತ್ಮರಾದ ಪಿ.ಶ್ರೀನಿವಾಸ್, ಬಿ.ಸಿ.ಮೋಹನಯ್ಯ, ಶಿರಸಿಯ ಮರಗಳ್ಳರ ಕ್ರೌರ್ಯಕ್ಕೆ ಬಲಿಯಾದ ಅರವಿಂದ್ ಹೆಗಡೆ ಅವರ ಬಲಿದಾನವನ್ನು ಅವರು ಇದೇ ವೇಳೆ ನೆನೆದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ‘ಮಾನವ– ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಸದಾ ಅಪಾಯದಲ್ಲೇ ಕೆಲಸ ಮಾಡುವಂತಾಗಿದೆ. ಇದರೊಂದಿಗೆ ಹವಾಮಾನ ಬದಲಾವಣೆ ಸಹ ಬಲು ದೊಡ್ಡ ಸವಾಲಾಗಿದೆ. ಕೊಡಗಿನಲ್ಲಿ ರಾಜಾಸ್ಥಾನದಲ್ಲಿ ದಾಖಲಾಗುವಂತಹ ತಾಪಮಾನ ಈ ಬೇಸಿಗೆಯಲ್ಲಿ ದಾಖಲಾಗಿತ್ತು’ ಎಂದು ಹೇಳಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಟಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎನ್.ಎಚ್.ಜಗನ್ನಾಥ, ಕೆ.ಎ.ನೆಹರು, ಸೈಯದ್ ಅಹಮದ್ ಷಾ ಹುಸೈನಿ, ಸಂದೀಪ್ ಪಿ.ಅಭಯಂಕರ್ ಹಾಗೂ ಇತರರು ಅರಣ್ಯ ಹುತಾತ್ಮ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ, ಗೌರವ ಸಲ್ಲಿಸಿದರು.
ಎಸಿಎಫ್ ಗಾನಶ್ರೀ ಕಾರ್ಯಕ್ರಮ ನಿರ್ವಹಿಸಿದರು.
ಕಾಡಾನೆ ದಾಳಿಗೆ ಸಿಲುಕಿ ಹುತಾತ್ಮರಾದ ಗಿರೀಶ್
ಕಳೆದ ವರ್ಷ ಸೆ. 4ರಂದು ಮಡಿಕೇರಿ ವಿಭಾಗದ ಹೊರಗುತ್ತಿಗೆ ನೌಕರ ಎಂ.ವೈ.ಗಿರೀಶ್ ಅವರು ಕಾಡಾನೆ ದಾಳಿಗೆ ಸಿಲುಕಿ ಹುತಾತ್ಮರಾದ ಪ್ರಸಂಗವನ್ನು ಡಿಸಿಎಫ್ ಭಾಸ್ಕರ್ ನೆನೆದರು. ‘ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಸುತ್ತಿದ್ದಾಗ ಆನೆಯು ತನ್ನ ದಿಕ್ಕು ಬದಲಿಸಿ ಏಕಾಏಕಿ ಸಿಬ್ಬಂದಿಯ ಕಡೆಗೆ ನುಗ್ಗಿತು. ಆಗ ಸಿಬ್ಬಂದಿಗಳೆಲ್ಲ ತಪ್ಪಿಸಿಕೊಂಡರೂ ಗಿರೀಶ್ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಕಾಡಾನೆ ದಾಳಿಗೆ ಸಿಲುಕಿ ಹುತಾತ್ಮರಾದರು’ ಎಂದು ಅವರು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.