ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೊನ್ನಂಪೇಟೆ | ಅರಣ್ಯ ಶಾಸ್ತ್ರ ಕಾಲೇಜು: ಮುಂದುವರಿದ ವಿದ್ಯಾರ್ಥಿಗಳ ಮುಷ್ಕರ

Published 11 ಫೆಬ್ರುವರಿ 2024, 16:32 IST
Last Updated 11 ಫೆಬ್ರುವರಿ 2024, 16:32 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಸೂಕ್ತ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂಬ ದೃಢ ನಿರ್ಧಾರದೊಂದಿಗೆ ಅರಣ್ಯಶಾಸ್ತ್ರ ವಿದ್ಯಾರ್ಥಿಗಳು ನಾಲ್ಕು ದಿನಗಳಿಂದ ಪೊನ್ನಂಪೇಟೆ ಅರಣ್ಯ ಕಾಲೇಜಿನ ಮುಂದೆ ಧರಣಿ ಮುಂದುವರಿಸಿದ್ದಾರೆ.

ತರಗತಿಗಳನ್ನು ಬಹಿಷ್ಕರಿಸಿ ಡೀನ್ ಕಚೇರಿಮುಂದೆ ಘೋಷಣೆಗಳನ್ನು ಕೂಗುತ್ತಾ ನೂರಾರು ವಿದ್ಯಾರ್ಥಿಗಳು ಬೆಳಗಿನಿಂದ ಸಂಜೆವರೆಗೂ ಹೋರಾಟ ನಡೆಸುತ್ತಿದ್ದಾರೆ. ವಿದ್ಯಾರ್ಥಿ ನಾಯಕ ಕಿಶಾನ್ ಗೌಡ ಮಾತನಾಡಿ, ‘ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ಅರಣ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಲ್ಲಿದ್ದ ಇದ್ದ ಶೇ 75ರಷ್ಟು ಮೀಸಲಾತಿಯನ್ನು ತೆಗೆದುಹಾಕಿ ಶೇ 50 ಕಡಿತಗೊಳಿಸಿತು. 50 ರಷ್ಟು ಮೀಸಲಾತಿಯಲ್ಲಿಯೂ ಶೇ 25 ರಷ್ಟು ಅರಣ್ಯಶಾಸ್ತ್ರ ಪದವೀಧರರಿಗೆ ಲಭಿಸಿದರೆ ಉಳಿದ 25 ರಷ್ಟು ಬಿಎಸ್‌ಸಿ ಪದವೀಧರರಿಗೆ ನೀಡಲಾಗುತ್ತಿದೆ. ಇದರಿಂದ ಅರಣ್ಯಶಾಸ್ತ್ರ ಅಧ್ಯಯನ ಮಾಡಿದ ಪದವೀಧರರಿಗೆ ಘೋರ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸುವವರೆಗೂ ಹೋರಾಟವನ್ನು ನಿಲ್ಲಿಸುವುದಿಲ್ಲ’ ಎಂದು ಹೇಳಿದರು.

ಸರ್ಕಾರದ ನಿಯಮದಂತೆ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಕೃಷಿ ಹಾಗೂ ತೋಟಗಾರಿಕೆ ಪದವೀಧರರೇ ಅಗಬೇಕು. ಆದರೆ ಇದೇ ರೀತಿಯ ನಿಯಮವನ್ನು ಅರಣ್ಯಶಾಸ್ತ್ರ ಅಧ್ಯಯನ ಮಾಡಿದವರಿಗೆ ಹಾಗೂ ಅರಣ್ಯ ಇಲಾಖೆಗೆ ಏಕೆ ಜಾರಿಗೊಳಿಸಿಲ್ಲ ಎಂದು ಪ್ರಶ್ನಿಸಿದ ಅವರು ಇಂಥ ಅನ್ಯಾಯವನ್ನು ಸರಿಪಡಿಸಲು ಒತ್ತಾಯಿಸಿ ಧರಣಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಹಿಂದಿನ ಸರ್ಕಾರ ಮಾಡಿದ ಇಂಥ ಅನ್ಯಾಯವನ್ನು ಸರಿಪಡಿಸಿ ಶೇ 100 ರಷ್ಟು ಹುದ್ದೆಗಳನ್ನು ಅರಣ್ಯಶಾಸ್ತ್ರ ಪದವೀಧರರಿಗೆ ನೀಡಬೇಕು ಎಂದು ಅರಣ್ಯ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಲು ಅನೇಕ ಬಾರಿ ಪ್ರಯತ್ನಿಸಿದರೂ ಅವರು ನಮಗೆ ಸಮಯ ನೀಡುತ್ತಿಲ್ಲ. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಭರವಸೆ ನೀಡುತ್ತಿದ್ದಾರೆಯೇ ಹೊರತು ನ್ಯಾಯ ದೊರಕಿಸಿಕೊಡುವಂತೆ ಕಾಣುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಪೊನ್ನಂಪೇಟೆ ಅರಣ್ಯ ಕಾಲೇಜು ಸೇರಿದಂತೆ ಶಿವಮೊಗ್ಗದ ಇರುವಕ್ಕಿ, ಶಿರಸಿ ಅರಣ್ಯ ಕಾಲೇಜಿನಲ್ಲಿಯೂ ಧರಣಿ ಸತ್ಯಾಗ್ರಹ ನಡೆಯುತ್ತಿದೆ. ಅರಣ್ಯ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಹಾಗೂ ಸ್ಥಳೀಯ ಶಾಸಕ ಎ.ಎಸ್.ಪೊನ್ನಣ್ಣ ಅವರು ಸ್ಥಳಕ್ಕೆ ಬಂದು ನಮ್ಮ ಬೇಡಿಕೆಯನ್ನು ಆಲಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು. ನವನೀತ್, ಚೇತನ್ ಗೌಡ, ಶ್ರೀವತ್ಸ ಜತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT