ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿಯಲ್ಲಿ ಗಾಂಧೀಜಿ ಸ್ಮಾರಕ ಉದ್ಯಾನ ಶೀಘ್ರ: ಡಾ.ಮಂತರ್‌ಗೌಡ

Published 2 ಅಕ್ಟೋಬರ್ 2023, 14:29 IST
Last Updated 2 ಅಕ್ಟೋಬರ್ 2023, 14:29 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀ ಅವರ ಜನ್ಮದಿನವನ್ನು ಸೋಮವಾರ ಆಚರಿಸಲಾಯಿತು. ಎಲ್ಲಾ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ಉಭಯ ನಾಯಕರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.

ಜಿಲ್ಲಾಡಳಿತ ವತಿಯಿಂದ ಗಾಂಧಿ ಮಂಟಪದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಶಾಸಕ ಡಾ.ಮಂತರ್ ಗೌಡ, ‘ಅತಿ ಶೀಘ್ರದಲ್ಲಿ ಮಡಿಕೇರಿಯಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಉದ್ಯಾನ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

ಬಳಿಕ ಗಾಂಧಿ ಭವನದಲ್ಲಿ ಇದೇ ಮೊದಲ ಬಾರಿಗೆ ನಡೆದ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಅವರು ಉಭಯ ನಾಯಕರ ಮೌಲ್ಯಗಳನ್ನು ಕುರಿತು ಮಾತನಾಡಿದರು.

ಮಹಾತ್ಮ ಗಾಂಧೀಜಿ ಅವರ ತ್ಯಾಗವನ್ನು ಯಾರೂ ಮರೆಯಲಾಗದು ಅವರು ವಿಶ್ವದಲ್ಲಿ ಶಾಂತಿಗಾಗಿ ನಿರಂತರವಾಗಿ ಶ್ರಮಿಸಿದರು. ಅವರ ಬದುಕಿನ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.

ಮಹಾತ್ಮ ಗಾಂಧೀಜಿ ಅವರು ‘ನನ್ನ ಜೀವನವೇ, ನನ್ನ ಸಂದೇಶ’ ಎಂಬುದನ್ನು ಸಾರಿದರು. ಮಹಾತ್ಮ ಗಾಂಧೀಜಿ ಅವರ ಸರಳ ಮತ್ತು ಶಾಂತಿಯುತ ಜೀವನವನ್ನು ನಾವೆಲ್ಲರೂ ಅನುಸರಿಸಬೇಕು. ಮಹಾತ್ಮ ಗಾಂಧೀಜಿ ಅವರು ನಡೆದು ಬಂದ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿಯಾಗಿ ರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ‘ಜೈಜವಾನ್ ಜೈಕಿಸಾನ್’ ಎಂಬ ಸಂದೇಶ ಸಾರುವ ಮೂಲಕ ರಾಷ್ಟ್ರದಲ್ಲಿ ಸೇನೆ ಹಾಗೂ ಕೃಷಿಯ ಮಹತ್ವದ ಬಗ್ಗೆ ತಿಳಿಸಿದರು ಎಂದು ಅವರು ಹೇಳಿದರು.

ಸರ್ವೋದಯ ಸಮಿತಿ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ‘ಜಗತ್ತಿನಲ್ಲೇ ವಿಶ್ವಸಂಸ್ಥೆಯಿಂದ ಗಾಂಧಿ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವಿಶ್ವ ಸಂಸ್ಥೆಯು ಗಾಂಧೀಜಿ ಜನ್ಮ ದಿನವನ್ನು ವಿಶ್ವ ಅಹಿಂಸಾ ದಿನವನ್ನಾಗಿ ಘೋಷಿಸಿದೆ’ ಎಂದು ಹೇಳಿದರು.

ಲಾಲ್ ಬಹದ್ದೂರು ಶಾಸ್ತ್ರಿ ಅವರು ಭಾರತದ ಎರಡನೇ ಪ್ರಧಾನ ಮಂತ್ರಿಯಾಗಿ ಸರಳ, ಸಜ್ಜನಿಕೆಗೆ ಹೆಸರು ವಾಸಿಯಾಗಿದ್ದರು. ಸೇನೆ ಮತ್ತು ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದು ಹೇಳಿದರು.

ಮಹಾತ್ಮ ಗಾಂಧೀಜಿ ಅವರ 154ನೇ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ‘ಬಾಪೂಜಿ ಪ್ರಬಂಧ ಸ್ಪರ್ಧೆ’ಯಲ್ಲಿ ವಿಜೇತರಾದವರಿಗೆ ಪ್ರಥಮ ₹ 3,000, ದ್ವಿತೀಯ ₹ 2,000 ಹಾಗೂ ತೃತೀಯ ₹ 1000 ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.

ಲಿಯಾಕತ್ ಆಲಿ ಗಾಂಧೀಜಿಗೆ ಪ್ರಿಯವಾದ ವೈಷ್ಣವೋ ಜಯತೊ ಗೀತೆ ಹಾಡಿದರು.

ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಹಿರಿಯ ಕಲಾವಿದ ರಾಣಿ ಮಾಚಯ್ಯ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ತಹಶೀಲ್ದಾರ್ ಪ್ರವೀಣ್ ಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ನಗರಸಭೆ ಸದಸ್ಯ ರಾಜೇಶ್ ಯಲ್ಲಪ್ಪ, ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮುನಿರ್ ಅಹಮದ್, ತಾಲ್ಲೂಕು ಘಟಕದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ನಗರಸಭೆ ಪೌರಾಯುಕ್ತ ವಿಜಯ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪ ನಿರ್ದೇಶಕಿ ಸೌಮ್ಯ ಪೊನ್ನಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಕಾಲೇಜು ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ವೆಂಕಟೇಶ್ ಪ್ರಸನ್ನ, ಉಪನ್ಯಾಸಕರಾದ ಉ.ರಾ.ನಾಗೇಶ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್ ಇದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಪದವಿಪೂರ್ವ ಶಿಕ್ಷಣ, ಕಾಲೇಜು ಶಿಕ್ಷಣ ಇಲಾಖೆಗಳ ಹಾಗೂ ಸರ್ವೋದಯ ಸಮಿತಿ, ಸ್ಕೌಟ್ಸ್ ಮತ್ತು ಗೈಡ್ಸ್ ಇವರ ಸಹಕಾರದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT