ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಸೌದೆ ಒಲೆಗಳತ್ತ ಬಡವರ ಚಿತ್ತ

ದುಬಾರಿಯಾಗುತ್ತಲೇ ಇರುವ ಅಡುಗೆ ಅನಿಲ ಸಿಲಿಂಡರ್; ಹಾಡಿ ಜನರು, ಬಡವರಿಗೆ ಸಂಕಷ್ಟ
Last Updated 26 ಮಾರ್ಚ್ 2023, 16:36 IST
ಅಕ್ಷರ ಗಾತ್ರ

ಮಡಿಕೇರಿ: ಹೊಗೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸರ್ಕಾರ ಜಾರಿಗೊಳಿಸಿದ ಯೋಜನೆಗಳು ನಿಧಾನವಾಗಿ ಜೀವ ಕಳೆದುಕೊಳ್ಳುತ್ತಿವೆ. ದುಬಾರಿಯಾಗುತ್ತಿರುವ ಅಡುಗೆ ಅನಿಲ ಸಿಲಿಂಡರ್‌ನಿಂದಾಗಿ ಬಡವರು ಹಾಗೂ ಕಾಡಂಚಿನ ಜನರು ಹಳ್ಳಿಗಾಡಿನಲ್ಲಿ ವಾಸಿಸುವ ಕೂಲಿ ಕಾರ್ಮಿಕರು ಸೌದೆಒಲೆಗಳ ಬಳಕೆಯನ್ನು ಆರಂಭಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ದುಪ್ಪಟ್ಟಾಗಿದೆ. 2020ರಲ್ಲಿ ಒಂದು ಎಲ್‌ಪಿಜಿ ಗೃಹಬಳಕೆಯ ಸಿಲಿಂಡರ್ ಬೆಲೆ ₹581 ಇದ್ದದ್ದು, ಮಾರ್ಚ್ 2023ರ ಹೊತ್ತಿಗೆ ₹ 1,150ಕ್ಕೆ ಏರಿಕೆಯಾಗಿದೆ. ಅದೇ ರೀತಿ ₹ 1,917ಕ್ಕೆ ಸಿಗುತ್ತಿದ್ದ 19 ಕೆಜಿಯ ವಾಣಿಜ್ಯ ಬಳಕೆ ಸಿಲಿಂಡರ್ ₹ 2,268ಕ್ಕೆ ಏರಿಕೆಯಾಗಿದೆ. ಕೇವಲ ಬಡವರು ಮಾತ್ರವಲ್ಲ ಸಣ್ಣ ಪುಟ್ಟ ವ್ಯಾಪಾರಿಗಳು, ಮಧ್ಯಮ ವರ್ಗದವರಿಗೂ ಇದು ಹೊರೆಯಾಗಿ ಪರಿಣಮಿಸಿದೆ.

ಕೇಂದ್ರ ಸರ್ಕಾರ ಹೊಗೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಉಜ್ವಲ ಯೋಜನೆಯನ್ನು ಜಾರಿಗೊಳಿಸಿ ಬಡ ಕುಟುಂಬಗಳಿಗೆ ಉಚಿತ ಸಂಪರ್ಕ ನೀಡಿತು. ಅದನ್ನು ಪಡೆದ ಸಾಕಷ್ಟು ಬಡ ಕುಟುಂಬಗಳು ರಿಫೀಲ್ ಮಾಡಿಸುತ್ತಿಲ್ಲ. ಅದಕ್ಕೆ ಬದಲಾಗಿ ಸೌದೆ ಒಲೆಯನ್ನೇ ಬಳಸುತ್ತಿದ್ದಾರೆ.

ಪಡಿತರ ವಿತರಣೆ ವ್ಯವಸ್ಥೆಯಡಿ ಸೀಮೆಎಣ್ಣೆ ವಿತರಣೆ ನಿಲ್ಲಿಸಿರುವುದೂ ಗ್ರಾಮೀಣರ ಪಾಲಿಗೆ ತೊಂದರೆ ಎನಿಸಿದೆ. ಸೌದೆ ಹೊತ್ತಿಸಬೇಕಾದರೆ ಪೆಟ್ರೋಲ್, ಡಿಸೇಲ್‌ನ್ನೇ ಬಳಕೆ ಮಾಡಬೇಕಾದ ಅನಿವಾರ್ಯತೆ ಇದೆ.

ಪೆಟ್ರೋಲ್, ಡಿಸೇಲ್ ದುಬಾರಿಯಾಗಿರುವುದಿರಂದ ಹಲವು ಮಂದಿ ಕಾಗದ, ಪ್ಲಾಸ್ಟಿಕ್‌ ಕವರ್‌ಗಳನ್ನು ಹೊತ್ತಿಸಲು ಬಳಕೆ ಮಾಡುತ್ತಿದ್ದಾರೆ. ಪ್ಲಾಸ್ಟಿಕ್‌ನಿಂದ ಹೊರಹೊಮ್ಮುವ ರಾಸಾಯನಿಕಗಳು ಆರೋಗ್ಯಕ್ಕೆ ಮಾರಕವಾಗಿದ್ದು, ಗ್ರಾಮೀಣ ಪ್ರದೇಶದ ಬಡವರ ಸ್ಥಿತಿ ತೀರಾ ಶೋಚನೀಯ ಸ್ಥಿತಿಗೆ ತಲುಪಿದೆ.

ಕಳೆದ 3 ವರ್ಷಗಳಿಂದ ಈಚೆಗೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಹೆಚ್ಚಾಗಿರುವ ಪ್ರಮಾಣದಲ್ಲಿ ಕೂಲಿಯ ದರ ಏರಿಕೆಯಾಗಿಲ್ಲ. ಇದರಿಂದ ಕೂಲಿಕಾರ್ಮಿಕರಾದಿಯಾಗಿ ಬಡವರ ಖರೀದಿ ಶಕ್ತಿ ಕಡಿಮೆಯಾಗುತ್ತಿದೆ. ಬಹುತೇಕ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಇದ್ದರೂ ಅದನ್ನು ಕೇವಲ ತುರ್ತು ಬಳಕೆಗೆ ಮಾತ್ರವೇ ಇರಿಸಲಾಗಿದೆ. ನಿತ್ಯದ ಸಾಮಾನ್ಯ ಅಡುಗೆಗೆ ಕಟ್ಟಿಗೆ ಒಲೆ, ಮಣ್ಣಿನ ಒಲೆಯನ್ನೇ ಆಶ್ರಯಿಸಲಾಗಿದೆ.

ಇತ್ತೀಚಿನ ತಿಂಗಳುಗಳಲ್ಲಿ ಜಿಲ್ಲೆಯಲ್ಲಿ ನಡೆಯುವ ಸಂತೆಗಳಲ್ಲಿ ಮಣ್ಣಿನ ಒಲೆಗಳ ಮಾರಾಟವೂ ಅಧಿಕವಾಗಿದೆ. ಲೈನ್‌ಮನೆಗಳಲ್ಲಿ ವಾಸ ಇರುವವರು, ಬಡವರು, ಕೂಲಿ ಕಾರ್ಮಿಕರು ಇಂತಹ ಒಲೆಯಲ್ಲಿ ಕಟ್ಟಿಗೆಯನ್ನಿರಿಸಿ ಅಡುಗೆ ಮಾಡುತ್ತಿದ್ದಾರೆ.

ಉಜ್ವಲ ಯೋಜನೆಯ ಆರಂಭವಾದಾಗ ಬಹುತೇಕ ಮಂದಿ ಕಟ್ಟಿಗೆ ಸಂಗ್ರಹವನ್ನು ಕಡಿಮೆ ಮಾಡಿದ್ದರು. ಆದರೆ, ಈಗ ಕಟ್ಟಿಗೆ ಸಂಗ್ರಹ ಕಾರ್ಯ ಚುರುಕುಗೊಂಡಿದೆ. ಕಾಡಂಚಿನ ಪ್ರದೇಶಗಳಲ್ಲಿ, ಬಯಲು ಪ್ರದೇಶಗಳಲ್ಲಿ ಒಣಗಿ
ರುವ ಕಡ್ಡಿಗಳನ್ನು, ಸೌದೆಗಳನ್ನು ಸಂಗ್ರಹಿಸಿ ಅದರಲ್ಲೇ ಅಡುಗೆ ಮಾಡುವುದು, ಬಿಸಿನೀರು ಕಾಯಿಸಿಕೊಳ್ಳುತ್ತಿದ್ದಾರೆ.

ಉಜ್ವಲ್ ಯೋಜನೆಯೂ ಸ್ಥಗಿತ!

ಕಳೆದ 2 ವರ್ಷಗಳಿಂದ ಬಡವರಿಗೆ ಉಚಿತ ಸಂಪರ್ಕ ನೀಡುವ ಉಜ್ವಲ್ ಯೋಜನೆಯನ್ನೂ ಸ್ಥಗಿತಗೊಳಿಸಲಾಗಿದೆ. ಒಂದು ಮನೆಯಲ್ಲಿರುವ ಮಕ್ಕಳು ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರೆ ಅಂಥವರಿಗೆ ಈ ಯೋಜನೆಯಡಿ ಹೊಸ ಸಂಪರ್ಕ ನೀಡುತ್ತಿಲ್ಲ. ಹೀಗಾಗಿ, ಪ್ರತ್ಯೇಕವಾಗಿ ವಾಸಿಸುತ್ತಿರುವ ಬಡವರು, ಕೂಲಿಕಾರ್ಮಿಕರ ಮಕ್ಕಳು, ಆದಿವಾಸಿಗಳ ಮಕ್ಕಳು ಉಚಿತ ಯೋಜನೆಯ ಸಂಪರ್ಕ ಸಿಗದೇ ಸೌದೆ ಒಲೆಯನ್ನೇ ನೆಚ್ಚಿಕೊಂಡಿದ್ದಾರೆ.

ಸಿಲಿಂಡರ್‌ ಖರೀದಿ ಪ್ರಮಾಣವೂ ಕಡಿಮೆ

ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ ಹೆಚ್ಚುತ್ತಿದ್ದಂತೆ ಅದರ ರೀಫಿಲಿಂಗ್‌ ಸಹ ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದು ಬಹಳಷ್ಟು ಗ್ಯಾಸ್ ಏಜೆನ್ಸಿಯ ಮಾಲೀಕರು ಹೇಳುತ್ತಾರೆ. ಸಿಲಿಂಡರ್‌ ಖರೀದಿಸದಿದ್ದರೆ ಅವರು ಅಡುಗೆ ಮಾಡಲು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿರಬೇಕು. ಬಹುಶಃ ಕಟ್ಟಿಗೆ ಒಲೆಯನ್ನೇ ಆಶ್ರಯಿಸಿರಬಹುದು. ಇಂತಹ ಪರಿಸ್ಥಿತಿ ಕಾಡಂಚಿನ ಭಾಗಗಳಲ್ಲಿ, ಹಾಡಿಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಕಂಡು ಬರುತ್ತಿದೆ ಎಂದು ಅವರು ಹೇಳುತ್ತಾರೆ.

ಬಡವರ ಪಾಲಿಗೆ ಉರಿ ಬೆಂಕಿಯಾದ ಬೆಲೆ ಏರಿಕೆ

ಗೋಣಿಕೊಪ್ಪಲು: ಇಲ್ಲಿನ ನಾಗರಹೊಳೆಯ ಕಾಡಂಚಿನ ಪ್ರದೇಶ ಮಾತ್ರವಲ್ಲ ಆಸುಪಾಸಿನ ಗ್ರಾಮಾಂತರ ಪ್ರದೇಶಗಳಲ್ಲೂ ಇತ್ತೀಚಿನ ತಿಂಗಳುಗಳಲ್ಲಿ ಸೌದೆ ಒಲೆಯಲ್ಲೇ ಅಡುಗೆ ಮಾಡುವುದು ಹೆಚ್ಚಾಗಿದೆ. ಉಜ್ವಲ್ ಯೋಜನೆ ಜಾರಿಗೆ ಬಂದ ಹೊಸತರಲ್ಲಿ ಸೌದೆ ಒಲೆಯನ್ನು ಇಲ್ಲಿನ ಬಹಳಷ್ಟು ಜನರು ಕಿತ್ತೆಸೆದರು.ಆದರೆ, ಕಾಲಕ್ರಮೇಣ ಉಜ್ವಲ್ ಯೋಜನೆಯಡಿ ಬರುವ ಉಚಿತ ಸಿಲಿಂಡರ್ ಕಡಿಮೆಯಾಗ ತೊಡಗಿತು. ಕಾಡಂಚಿನ ಭಾಗಗಳಲ್ಲಿ ಸಿಲಿಂಡರ್ ಪೂರೈಕೆಯೂ ಅಸಮರ್ಪಕ ವಾಗಿರುವುದರಿಂದ ಅನಿವಾರ್ಯವಾಗಿ ಎಲ್ಲರೂ ಸೌದೆ ಒಲೆಗಳನ್ನೇ ಹೆಚ್ಚಾಗಿ ಬಳಕೆ ಮಾಡತೊಡಗಿದ್ದಾರೆ.

ಉತ್ತರ ಕೊಡಗಿನಲ್ಲೂ ಸೌದೆ ಒಲೆಯೇ ಅಧಿಕ

ಸೋಮವಾರಪೇಟೆ: ದಕ್ಷಿಣ ಕೊಡಗು ಮಾತ್ರವಲ್ಲ ಉತ್ತರ ಕೊಡಗಿನಲ್ಲೂ ಜನರು ಸೌದೆ ಒಲೆಯನ್ನೇ ಹೆಚ್ಚಾಗಿ ಬಳಕೆ ಮಾಡಲು ತೊಡಗಿದ್ದಾರೆ.

ಆರಂಭದಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಕಡಿಮೆ ಇದ್ದಾಗ ಮನೆಮನೆಗಳಲ್ಲಿದ್ದ ಸೌದೆ ಒಲೆಯನ್ನು ತೆರವುಗೊಳಿಸಲಾಯಿತು. ಆದರೆ, ಈಗ ಪ್ರತಿ ಸಿಲಿಂಡರ್‌ನ ಬೆಲೆ ನಿರಂತರವಾಗಿ ಹೆಚ್ಚಾಗುತ್ತಲೇ ಇರುವುದರಿಂದ ಮತ್ತೆ ವಾಪಸ್ ಹಿಂದಿನಂತೆ ಸೌದೆ ಒಲೆಯನ್ನೇ ಬಳಕೆ ಮಾಡಲು ಆರಂಭಿಸಿದ್ದಾರೆ.

ಎಲ್ಲ ವಸ್ತುಗಳ ಬೆಲೆ ಹೆಚ್ಚಳದಿಂದ ಮೊದಲೇ ಜನಸಾಮಾನ್ಯರು ಖರೀದಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಇದರೊಂದಿಗೆ ದಿನಬಳಕೆಯ ವಸ್ತುಗಳ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸಾಮಾನ್ಯ ಜನರು ಬದುಕುವುದೇ ಕಷ್ಟವಾಗಿದೆ ಎಂದು ಜನರು ದೂರುತ್ತಿದ್ದಾರೆ.

ಅನಿಲ ಬಳಕೆ ಕಮ್ಮಿ; ಸೌದೆ ಬಳಕೆ ಹೆಚ್ಚು

ಗ್ರಾಮೀಣ ಭಾಗದ ಜನರು ಈಗ ಕಡಿಮೆ ಅನಿಲ ಬಳಕೆ ಮಾಡಿಕೊಂಡು ಅಡುಗೆ ಮಾಡುತ್ತಿದ್ದಾರೆ. ಅನಿಲದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣ. ಎಲ್ಲ ವಸ್ತುಗಳ ಬೆಲೆ ಏರಿಕೆಯಿಂದ ಮೊದಲೇ ಸಂಕಷ್ಟದಲ್ಲಿರುವ ಜನರಿಗೆ ಅನಿಲ ಬೆಲೆ ಏರಿಕೆ ಮತ್ತೊಂದು ಹೊರೆಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಉಚಿತವಾಗಿ ಸಿಗುವ ಸೌದೆ ಬಳಸಿ ಅಡುಗೆ ಮಾಡಲು ಜನರು ಮುಂದಾಗುತ್ತಿದ್ದಾರೆ.

ಶ್ಯಾಮ್,ಸಜ್ಜಳ್ಳಿ ಹಾಡಿ ನಿವಾಸಿ

ಹಿಂದಿನಂತೆ ಸೌದೆ ಒಲೆ ಬಳಕೆ

ಕೆಲವು ತಿಂಗಳುಗಳಿಂದ ಅಡುಗೆ ಅನಿಲ ಬೆಲೆ ವಿಪರೀತ ಹೆಚ್ಚಾಗಿದೆ. ಕೂಲಿ ಕೆಲಸ ಮಾಡಿಕೊಂಡು ದುಬಾರಿ ಬೆಲೆಗೆ ಗ್ಯಾಸ್ ಖರೀದಿ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಈ ಹಿಂದಿನಂತೆ ಸೌದೆ ಒಲೆಯಲ್ಲೇ ಅಡುಗೆ ಮಾಡುತ್ತಿದ್ದೇವೆ. ಕಾಫಿ ತೋಟಗಳಲ್ಲಿ ಕಡಿಮೆ ಬೆಲೆಗೆ ಸೌದೆ ಸಿಗುತ್ತಿದೆ.

ಯಮುನಾ, ಗೃಹಿಣಿ, ಕರಡಿಗೋಡು.

ಅನಿಲ ಸಿಲಿಂಡರ್ ಖರೀದಿ ಪ್ರಮಾಣ ಕಡಿಮೆ

ಅನಿಲದ ಬೆಲೆ ಏರಿಕೆಯಿಂದ ಜನರು ಕಡಿಮೆ ಪ್ರಮಾಣದಲ್ಲಿ ಅನಿಲದ ಸಿಲೀಂಡರ್ ಖರೀದಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಉಜ್ವಲ ಯೋಜನೆಯಡಿಯಲ್ಲಿ ಉಚಿತವಾಗಿ ಅನಿಲ ಸಂಪರ್ಕ ನೀಡಲಾಗಿತ್ತು. ಸಿಲಿಂಡರ್ ಬೆಲೆ ಹೆಚ್ಚಳದಿಂದಾಗಿ ಜನರು ಖರೀದಿಯನ್ನು ಸರಿಯಾಗಿ ಮಾಡುತ್ತಿಲ್ಲ. ತಮ್ಮಲ್ಲಿರುವ ಸಂಪರ್ಕದ ಹೊಸ ಪೈಪ್ ಹಾಗೂ ಪರಿಶೀಲನೆಗೆ ಹಣ ನೀಡಬೇಕಿದೆ. ಆದರೆ, ಜನರು ಹಣ ನೀಡುತ್ತಿಲ್ಲ.

ಎಸ್.ಎ.ಮುರಳೀಧರ್, ಐಗೂರಿನ ಪಾರ್ವತಿ ಗ್ಯಾಸ್ ಏನ್ಸಿಯ ಮಾಲೀಕ

ಹಾಡಿಗಳಿಗೆ ಸಮರ್ಪಕ ಪೂರೈಕೆ ಇಲ್ಲ

ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಾಗಿರುವುದರ ಜತೆಗೆ ಹಾಡಿಗಳಿಗೆ ಸಮರ್ಪಕವಾಗಿ ಪೂರೈಕೆಯೂ ಆಗುತ್ತಿಲ್ಲ. ನಾಗರಹೊಳೆ, ತಿತಿಮತಿ ಸುತ್ತಮುತ್ತಲಿನ ಹಾಡಿಗಳವರು ಗೋಣಿಕೊಪ್ಪಲು ಪಟ್ಟಣಕ್ಕೆ ಬಂದು ಅಡುಗೆ ಅನಿಲ ಸಿಲಿಂಡರ್ ತೆಗೆದುಕೊಳ್ಳಬೇಕು. ಆಟೊ ಬಾಡಿಗೆ ₹ 600 ಕೇಳುತ್ತಾರೆ. ಇದರಿಂದ ಹಾಡಿಗಳಲ್ಲಿ ಬಹಳಷ್ಟು ಮಂದಿ ಮತ್ತೆ ಸೌದೆಒಲೆಯಿಂದಲೇ ಅಡುಗೆ ಮಾಡಲು ತೊಡಗಿದ್ದಾರೆ.

ತಮ್ಮಯ್ಯ, ಯರವ

ಬೆಲೆ ಏರಿಕೆ ಬಿಸಿ

ಅಡುಗೆ ಅನಿಲ ಸಿಲಿಂಡರ್ ಮೇಲಿನ ಸಬ್ಸಿಡಿ ತೆಗೆದಿದ್ದು ನೇರವಾಗಿ ಬಡವರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ನಿರಂತರವಾಗಿ ಏರಿಕೆ ಕಾಣುತ್ತಿರುವ ಅಡುಗೆ ಅನಿಲ ಸಿಲಿಂಡರ್‌ ಬೆಲೆಯು ನಮ್ಮನ್ನು ಇನ್ನಿಲ್ಲದಂತೆ ಬಾಧಿಸಿದೆ. ಇದರಿಂದ ಸೌದೆ ಒಲೆಯಿಂದ ಅಡುಗೆ ಮಾಡುವಂತಾಗಿದೆ.

ಜೆ.ಕೆ.ರಾಮು, ಚೋತ್ತೆಪಾರಿ ಹಾಡಿ ನಿವಾಸಿ.

ನಿರ್ವಹಣೆ:
ಕೆ.ಎಸ್.ಗಿರೀಶ್

ಪೂರಕ ಮಾಹಿತಿ: ಡಿ.ಪಿ.ಲೋಕೇಶ್, ಜೆ.ಸೋಮಣ್ಣ, ರೆಜಿತ್‌ಕುಮಾರ್ ಗುಹ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT