ಸೋಮವಾರ, ಜುಲೈ 26, 2021
26 °C
ಜಿಲ್ಲೆಯಲ್ಲಿ ನಿರಂತರವಾಗಿ ಬೀಳುತ್ತಿರುವ ಮಳೆ, ಶುಂಠಿ ಮಡಿ ಸಿದ್ಧತೆಯಲ್ಲಿ ರೈತರು

ನಾಪೋಕ್ಲು: ಶುಂಠಿ ಕೃಷಿ ಬಿರುಸು

ಸಿ.ಎಸ್‌. ಸುರೇಶ್‌ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು (ಕೊಡಗು ಜಿಲ್ಲೆ): ಶುಂಠಿ ಬೆಲೆಯಲ್ಲಿ ಕುಸಿತ ಕಂಡರೂ ಕೃಷಿಯಲ್ಲಿ ರೈತರ ಉತ್ಸಾಹ ತಗ್ಗಿಲ್ಲ. ಹೊಸ ಕಾಫಿ ತೋಟ ಮಾಡುವವರು ಶುಂಠಿ ಕೃಷಿಗೆ ಆದ್ಯತೆ ನೀಡುತ್ತಿದ್ದಾರೆ. ಭತ್ತದ ಗದ್ದೆಗಳನ್ನು ಗುತ್ತಿಗೆಗೆ ಪಡೆದು ಶುಂಠಿ ಕೃಷಿಯಲ್ಲಿ ತೊಡಗಿರುವ ರೈತರ ದೃಶ್ಯಗಳು ಅಲ್ಲಲ್ಲಿ ಕಂಡು ಬರುತ್ತಿವೆ.

ಹೋಬಳಿ ವ್ಯಾಪ್ತಿಯಲ್ಲಿ ಶುಂಠಿ ಮಡಿಗಳನ್ನು ಸಿದ್ಧಪಡಿಸಲಾಗಿದ್ದು, ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಮೊಳಕೆಯೊಡೆದ ಶುಂಠಿ ಸಸಿಗಳಿಗೆ ರಾಸಾಯನಿಕ ಗೊಬ್ಬರ ಒದಗಿಸುವಲ್ಲಿ ರೈತರು ನಿರತರಾಗಿದ್ದಾರೆ. ಉತ್ತಮ ಮಳೆ ಆಗುತ್ತಿರುವುದರಿಂದ ಶುಂಠಿ ಕೃಷಿ ಆರೈಕೆ ಬಗ್ಗೆ ರೈತರು ಗಮನ ಹರಿಸುತ್ತಿದ್ದಾರೆ. ಮಂಗಳವಾರ ರಾತ್ರಿ ಉತ್ತಮ ಮಳೆ ಬಿದ್ದಿದ್ದರಿಂದ ಬುಧವಾರ ಶುಂಠಿ ಕೃಷಿ ಕೆಲಸ ಬಿರುಸಿನಿಂದ ಸಾಗಿತು.

ಲಾಭದಾಯಕ ಬೆಳೆಯಾದ ಶುಂಠಿ ಯಿಂದಾಗಿ ಭತ್ತ ಬೆಳೆಯಲು ರೈತರು ನಿರಾಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ, ಜಿಲ್ಲೆಯಲ್ಲಿ ಭತ್ತದ ಉತ್ಪಾದನೆಯಲ್ಲಿ ಗಣನೀಯ ಇಳಿಕೆ ಉಂಟಾಗಿದೆ. ಕೆಲ ವರ್ಷಗಳ ಹಿಂದೆ ಪಶ್ಚಿಮಘಟ್ಟದ ಮಲೆನಾಡಿನಾದ್ಯಂತ ಶುಂಠಿಗೆ ಸಿಕ್ಕ ವಾಣಿಜ್ಯಿಕ ತಿರುವು ರೈತರ ಆಸಕ್ತಿಯನ್ನು ಬದಲಿಸಿತ್ತು. ಎಲ್ಲೆಲ್ಲಿಯೂ ಶುಂಠಿ ಬೆಳೆಯುವ ಪ್ರಯತ್ನ ಮಾಡಲಾಗಿತ್ತು. ಮೊದಲು ಕೇರಳದ ರೈತರು ಕೊಡಗಿನಲ್ಲಿ ಶುಂಠಿ ಬೆಳೆದು ಲಾಭ ಗಳಿಸಿದ್ದರು. ಈಗ ಅದೇ ಜಾಡನ್ನು ಹಿಡಿದು ಸ್ಥಳೀಯರು ಕೂಡ ಶುಂಠಿ ಬೆಳೆಯುವತ್ತ ಮುಂದಾಗಿದ್ದಾರೆ.

‘20 ವರ್ಷಗಳಿಂದ ಶುಂಠಿ ಕೃಷಿ ಮಾಡಿ ಸಾಕಷ್ಟು ಅನುಭವ ಹೊಂದಿ ದ್ದೇನೆ. ಅಧಿಕ ಮಳೆಯಿಂದ ಶುಂಠಿಗೆ ಹಾನಿಯಾಗುತ್ತಿದೆ. ಈ ವರ್ಷ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಶುಂಠಿ ಕೃಷಿ ಕೈಗೊಂಡಿದ್ದೇನೆ. ರೈತರು ಶುಂಠಿ ಕೃಷಿಗೆ ಬಂಡವಾಳ ಹೂಡುವಾಗ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕು. ಮಾರುಕಟ್ಟೆ ಧಾರಣೆಯತ್ತಲೂ ಗಮನ ಹರಿಸಬೇಕು’ ಎಂದು ಬೇತು ಗ್ರಾಮದ
ರೈತ ಕೊಂಡೀರ ಕೃತಿಕಾಳಯ್ಯ ಸಲಹೆ ನೀಡಿದರು.

ಮಾರುಕಟ್ಟೆಯಲ್ಲಿ ಈಗ ಹಳೆಯ ಶುಂಠಿಗೆ 60 ಕೆ.ಜಿ ಚೀಲಕ್ಕೆ ₹1,600ರಿಂದ 1,800 ದರ ಲಭಿಸುತ್ತಿದೆ. ಹೊಸ ಶುಂಠಿಗೆ ₹600ರಿಂದ ₹700 ದರವಿದೆ. ಉತ್ತಮ ದರದ ನಿರೀಕ್ಷೆಯಲ್ಲಿ ರೈತರು ಶುಂಠಿ ಕೃಷಿ ಕೈಗೊಳ್ಳುತ್ತಿದ್ದಾರೆ. ದರ ಕುಸಿತ, ಮಳೆಗಾಲದಲ್ಲಿ ಕೊಳೆರೋಗ ಮತ್ತಿತರ ಅಂಶಗಳತ್ತಲೂ ಕೃಷಿಕರು ಗಮನ ಹರಿಸಿದಲ್ಲಿ ಶುಂಠಿ ಕೃಷಿಯಲ್ಲಿ ಲಾಭ ಗಳಿಸಬಹುದು ಎಂದರು.

ಎಚ್ಚರಿಕೆಯ ಹೆಜ್ಜೆ ಇಡಲಿ

ಶುಂಠಿ ಬೆಳೆಯತ್ತ ಕೃಷಿಕರು ಒಲವು ತೋರುತ್ತಿರುವುದು ಸಹಜ. ಆದರೆ, ಕೃಷಿಯಲ್ಲಿ ಅಷ್ಟೇ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಾದದ್ದು ಅಗತ್ಯ ಎನ್ನುತ್ತಾರೆ ಅನುಭವಿ ಬೆಳೆಗಾರರು. ನಿರಂತರ ಆರೈಕೆಯ ಹೊರತಾಗಿಯೂ ಶುಂಠಿ ಬೆಳೆಗೆ ರೋಗಗಳು ಅಧಿಕವಾಗಿ ಕಾಡುತ್ತವೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹಕ್ಕೆ ಸಿಲುಕಿ ಬೆಳೆ ನಾಶವಾಗುವುದೂ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.