ಸೋಮವಾರ, ಜನವರಿ 20, 2020
21 °C
ತ್ಯಾಗತ್ತೂರು ಹಾಡಿಯಲ್ಲಿ 12 ಕುಟುಂಬಗಳು ವಾಸ, ಒತ್ತುವರಿ ಆತಂಕದಲ್ಲಿ ಜನ

ಸೌಲಭ್ಯ ವಂಚಿತ ಗಿರಿಜನ ಹಾಡಿ

ರಘುಹೆಬ್ಬಾಲೆ Updated:

ಅಕ್ಷರ ಗಾತ್ರ : | |

prajavani

ಕುಶಾಲನಗರ: ಸೋಮವಾರಪೇಟೆ ತಾಲ್ಲೂಕಿನ ವಾಲ್ನೂರು – ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ತ್ಯಾಗತ್ತೂರು ಗಿರಿಜನ ಹಾಡಿ ಮೂಲಸೌಕರ್ಯದಿಂದ ವಂಚಿತವಾಗಿದೆ.

ಕಳೆದ ಆರು ದಶಕಗಳ ಹಿಂದೆ ಆಶ್ರಯ ಯೋಜನೆಯಡಿ ನಿರ್ಮಿಸಿಕೊಟ್ಟ ಮನೆಗಳಲ್ಲಿ ಜೀವನ ನಡೆಸುತ್ತಿರುವ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳು ಇದುವರೆಗೂ ಮರೀಚಿಕೆಯಾಗಿವೆ. ಈಗ ವಾಸವಿರುವ ಮನೆಗಳು ಗಾಳಿ ಮಳೆಗೆ ಸಂಪೂರ್ಣ ಹಾನಿಯಾಗಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಚಾವಣಿಗಳು ಮುರಿದು ಹೋಗಿವೆ. ಯಾವುದೇ ಕ್ಷಣದಲ್ಲೂ ಬೀಳುವ ಆತಂಕ ಎದುರಾಗಿದೆ.

ವಸತಿವಂಚಿತ ಕೆಲವು ಕುಟುಂಬಗಳು ಪ್ಲಾಸ್ಟಿಕ್‌ ವಸ್ತುಗಳಿಂದ ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಹಾಡಿಯಲ್ಲಿ 12ಕ್ಕೂ ಹೆಚ್ಚಿನ ಗಿರಿಜನ ಕುಟುಂಬಗಳು ವಾಸವಾಗಿವೆ. ಈ ಕುಟುಂಬಗಳಿಗೆ ಕುಡಿಯಲು ನೀರಿಲ್ಲ, ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಚರಂಡಿ ಹಾಗೂ ಬೀದಿದೀಪಗಳ ವ್ಯವಸ್ಥೆಯೂ ಇಲ್ಲ. ಮೂಲಸೌಕರ್ಯಗಳಿಂದ ವಂಚಿತರಾಗಿರುವ ಇಲ್ಲಿನ ಜನರು ಕತ್ತಲೆಯಲ್ಲೇ ಬದುಕು ದೂಡುತ್ತಿದ್ದಾರೆ.

ಕುಡಿಯುವ ನೀರಿಗಾಗಿ ತತ್ವಾರ: ಕುಡಿಯುವ ನೀರಿಗಾಗಿ ಕಿಲೋಮೀಟರ್‌ ದೂರ ಹೋಗಬೇಕಾಗಿದೆ. ರಾತ್ರಿ ವೇಳೆ ಕಾಡಾನೆ ಹಾವಳಿ ಮಧ್ಯೆ ವಯೋವೃದ್ಧರು ಹಾಗೂ ಪುಟಾಣಿ ಮಕ್ಕಳೊಂದಿಗೆ ಜೀವನ ನಡೆಸುವ ದುಸ್ಥಿತಿ ಇದೆ ಎಂದು ಇಲ್ಲಿನ ನಿವಾಸಿ ಬೇಬಿ ಹೇಳಿದರು.

ಗಿರಿಜನ ಸಮಗ್ರ ಅಭಿವೃದ್ಧಿ ಕಲ್ಯಾಣ ಇಲಾಖೆ ವತಿಯಿಂದ ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಯಾಗುತ್ತಲೇ ಇವೆ. ಸರ್ಕಾರ ಕೂಡ ಗಿರಿಜನರ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಅನುದಾನವನ್ನು ಪ್ರತಿ ವರ್ಷ ನೀಡುತ್ತಿದೆ. ಜೊತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಕೂಡ ನೈಜ ಗಿರಿಜನ ಕಟುಂಬಗಳಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ.

ದೊರೆಯದ ಸರ್ಕಾರಿ ಸೌಲಭ್ಯ: ಗಿರಿಜನರ ಆರೋಗ್ಯ ಸುಧಾರಣೆಗೆ ಜಾರಿಗೆ ತಂದಿರುವ ಉಚಿತ ಆರೋಗ್ಯ ಸೇವೆ, ಪೌಷ್ಟಿಕ ಆಹಾರ ವಿತರಣೆ ಹಾಗೂ ಪಡಿತರ ವಿತರಣೆ ಕೂಡ ಇಲ್ಲಿನ ಕುಟುಂಬಗಳಿಗೆ ದೊರೆಯುತ್ತಿಲ್ಲ. ಗಿರಿಜನರ ಹೆಸರಿನಲ್ಲಿ ಶ್ರೀಮಂತರ ಮನೆ ಬಾಗಿಲಿಗೆ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಅನೇಕ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿವೆ.

ಆಸ್ಪತ್ರೆ ಕಟ್ಟಡ ಬಾಡಿಗೆಗೆ: ವಾಲ್ನೂರು ಗಿರಿಜನ ಸಮುದಾಯದ ಆರೋಗ್ಯ ಸುಧಾರಣೆಗಾಗಿ ಕಳೆದ 9 ವರ್ಷಗಳ ಹಿಂದೆ ಆರೋಗ್ಯ ಉಪ ಕೇಂದ್ರ ನಿರ್ಮಾಣ ಮಾಡಲಾಗಿತ್ತು. ಆದರೆ, ಕೇಂದ್ರ ಈಗ ಬಾಗಿಲು ಮುಚ್ಚಿದೆ. ಈ ಕಟ್ಟಡದ ಬಾಗಿಲು, ಕಿಟಕಿಗಳಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಒಂದು ಭಾಗದ ಕಟ್ಟಡದಲ್ಲಿ ತೋಟದ ಕಾರ್ಮಿಕರಿಗೆ ಬಾಡಿಗೆ ನೀಡಲಾಗಿದೆ. ಇಲ್ಲಿಗೆ ನಿಯೋಜನೆಗೊಂಡ ಶುಶ್ರೂಷಕಿಯರು ಇತ್ತ ಕಡೆ ತಿರುಗಿಯೂ ನೋಡಿಲ್ಲ. ಜೊತೆಗೆ ಸಂಚಾರಿ ಆರೋಗ್ಯ ಘಟಕ ಕೂಡ ಇಲ್ಲಿಗೆ ಬರುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಜಾಗ ಒತ್ತುವರಿ: ಆರು ದಶಕಗಳ ಹಿಂದೆ ಗಿರಿಜನ ಕುಟುಂಬಗಳಿಗೆ ಸರ್ಕಾರ ಕೃಷಿ ಭೂಮಿ ನೀಡಿತ್ತು. ಈ ಜಾಗದಲ್ಲಿಯೇ ಈ ಕುಟುಂಬಗಳು ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಕ್ಕಪಕ್ಕದ ತೋಟಗಳ ಮಾಲೀಕರು ಈ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೆ ಪೈಸಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ. ಆದ್ದರಿಂದ ಒತ್ತುವರಿಯಾಗಿರುವ ಹಾಡಿ ಜನರ ಜಾಗವನ್ನು ತೆರವುಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಭೂಮಿ ಇದ್ದರೂ ಸಿಗದ ನ್ಯಾಯ

ಕೊಡಗು ಜಿಲ್ಲೆಯಲ್ಲಿ 47 ಸಾವಿರ ಜೇನುಕುರುಬ ಸಮುದಾಯದವರು ವಾಸ ಮಾಡುತ್ತಿದ್ದಾರೆ. ತ್ಯಾಗತ್ತೂರು ಹಾಡಿಯಲ್ಲಿ 65 ವರ್ಷಗಳ ಹಿಂದಿನಿಂದಲೂ 12 ಕುಟುಂಬಗಳು ಜೀವನ ನಡೆಸುತ್ತಿದ್ದು, ಈ ಕುಟುಂಬಗಳಿಗೆ ಮೈಸೂರು ರಾಜರ ಕಾಲದಲ್ಲೇ ತಲಾ ಒಂದು ಎಕರೆಯಂತೆ 10 ಎಕರೆಗೂ ಹೆಚ್ಚಿನ ಜಾಗವನ್ನು ನೀಡಲಾಗಿತ್ತು. ಈ ಎಲ್ಲ ಕುಟುಂಬಗಳು ಆರ್.ಟಿ.ಸಿ ಹೊಂದಿವೆ. ಇಲ್ಲಿನ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕುರಿತು ಗ್ರಾ.ಪಂ ಹಾಗೂ ಜಿ.ಪಂ ಅಧಿಕಾರಿಗಳಿಗೂ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಾಲ್ಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರು ಬೇಸರ ವ್ಯಕ್ತಪಡಿಸಿದರು.

ತಪ್ಪು ಮಾಹಿತಿ: ಕಳೆದ ಕೆಲವು ದಿನಗಳ ಹಿಂದೆ, ‘ಗಿರಿಜನರ ಕುಂದುಕೊರತೆ’ ಕುರಿತು ಕರೆದಿದ್ದ ಸಭೆಯಲ್ಲಿ ತ್ಯಾಗತ್ತೂರು ಹಾಡಿಯ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಗಮನ ಸೆಳೆಯಲಾಗಿತ್ತು.

ಈ ವೇಳೆ ಅಲ್ಲಿಯೇ ಇದ್ದ ಐಟಿಡಿಪಿ ಅಧಿಕಾರಿ, ‘ಅಲ್ಲಿ ಯಾವುದೇ ಹಾಡಿ ಇಲ್ಲ. ಗಿರಿಜನ ಕುಟುಂಬಗಳೂ ಇಲ್ಲ. ನಾವು ಎಲ್ಲ ರೀತಿ ಅಭಿವೃದ್ಧಿ ಮಾಡಿದ್ದೇವೆ. ಇಂತಹ ಮನೆಗಳು ಯಾವುದು ಇಲ್ಲ ಎಂದು ಜಿಲ್ಲಾಧಿಕಾರಿಗೆ ತಪ್ಪು ಮಾಹಿತಿ ನೀಡಿದ್ದರು’ ಎಂದು ಚಂದ್ರು ಆರೋಪಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು