ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು: ಬಹುತೇಕ ಮನೆಗಳು ಜಲಾವೃತ

ಅಪಾಯದಲ್ಲಿ ಸಿಲುಕಿದ್ದ ಜನರು, ಸಾಕುಪ್ರಾಣಿಗಳ ರಕ್ಷಣೆ, ಪರಿಹಾರ ಕೇಂದ್ರಕ್ಕೆ ಸ್ಥಳಾಂತರ
Last Updated 9 ಆಗಸ್ಟ್ 2019, 19:37 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗೋಣಿಕೊಪ್ಪಲು ಪಟ್ಟಣದ ಅನೇಕ ಬಡಾವಣೆಗಳು ಜಲಾವೃತಗೊಂಡಿವೆ. ಮುಖ್ಯರಸ್ತೆಯನ್ನು ಬಿಟ್ಟರೆ ಉಳಿದಂತೆ ಎಲ್ಲ ಮನೆಗಳೂ ನೀರಿನಿಂದ ಆವೃತವಾಗಿವೆ.

ಪಟ್ಟಣದ ನೇತಾಜಿ ಬಡಾವಣೆ, ಅಚ್ಚಪ್ಪ ಲೇಔಟ್, ಪಟೇಲ್ ನಗರ, ಬಸ್ ನಿಲ್ದಾಣದ ಕೆಳಗಿನ ಬೈಪಾಸ್ ರಸ್ತೆಯ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ನೆಲಮಾಳಿಗೆಯಲ್ಲಿ ವಾಸವಾಗಿದ್ದ ಜನರು ಮಹಡಿ ಮನೆಗಳ ಮೇಲೆ ಏರಿ ಕುಳಿತರು. ವಿ‍ಪತ್ತು ನಿರ್ವಹಣಾ ತಂಡ ಜನರನ್ನು ರಕ್ಷಿಸಿತು.

ಮನೆಗಳಲ್ಲಿ ಸಿಲುಕಿದ್ದ ಬೆಕ್ಕು, ನಾಯಿಗಳನ್ನು ಬೋಟ್‌ ಮೂಲಕ ತೆರಳಿ ರಕ್ಷಿಸಲಾಯಿತು. ಕೆಲವು ಮನೆಗಳ ಮುಂಭಾಗದಲ್ಲಿ ನಿಂತಿದ್ದ ವಾಹನಗಳು ನೀರಿನಲ್ಲಿ ಮುಳುಗಿದ್ದವು.

ಅರುವತ್ತೊಕ್ಕಲು ಕಡೆಗೆ ತೆರಳುವ ಬೈಪಾಸ್ ರಸ್ತೆ ತೋಡಿನ ಸೇತುವೆಯ ತಡೆಗೋಡೆ ಕುಸಿದಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಪರಿಹಾರ ಕೇಂದ್ರದಲ್ಲಿ ನೂರಾರು ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿದೆ. ಕೆಲವರು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.

ಪಾಲಿಬೆಟ್ಟ, ಪೊನ್ನಂಪೇಟೆ, ಅಮ್ಮತ್ತಿ ಮಾರ್ಗದ ಎಲ್ಲ ರಸ್ತೆಗಳೂ ನೀರಿನಲ್ಲಿ ಮುಳುಗಿವೆ. ವಿರಾಜಪೇಟೆ– ಮೈಸೂರು ಮಾರ್ಗದಲ್ಲಿ ಸಾರಿಗೆ ಬಸ್‌ಗಳ ಸಂಚಾರವಿದೆ.

ಕೈಕೇರಿ ಭಾಗದ 4 ಕೆರೆಗಳು ಒಡೆದಿದ್ದರಿಂದ ಗೋಣಿಕೊಪ್ಪಲಿನ ಬೈಪಾಸ್ ತೋಡಿನ ಪ್ರವಾಹ ಹೆಚ್ಚಲು ಕಾರಣವಾಯಿತು. ಇಲ್ಲಿನ ಕಾಲ್ಸ್ ಶಾಲೆಯ ಒಳಗೂ ನೀರು ನುಗ್ಗಿ ವಸತಿ ನಿಲಯಕ್ಕೆ ಹಾನಿಯಾಗಿದೆ.

ಚೆನ್ನಂಗೊಲ್ಲಿ, ಮಾಯಮುಡಿ, ಬಾಳೆಲೆಯ ಗಂಧದಗುಡಿ ಭಾಗದಲ್ಲಿಯೂ ಹಲವು ಮನೆಗಳಿಗೆ ನೀರು ನುಗ್ಗಿದೆ. ಮಾಯಮುಡಿಯ ಆಪಟ್ಟೀರ ಸುಬ್ಬಯ್ಯ ಬೋಪಣ್ಣ ಅವರಿಗೆ ಸೇರಿದ ಕೆರೆಗಳು ಒಡೆದು ಕಾಫಿ ತೋಟ, ಗದ್ದೆಗಳು ಹಾಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT