ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಅಂತಿಮ ಹಂತಕ್ಕೆ ಗೌಡ ಪ್ರೀಮಿಯರ್ ಲೀಗ್‌

ಫೈನಲ್ ಪ್ರವೇಶಿಸಿದ ‘ದಿ ಎಲೈಟ್ ಕ್ರಿಕೆಟ್ ಕ್ಲಬ್ ಸ್ಕ್ವಾಡ್-2’
Published 28 ಏಪ್ರಿಲ್ 2024, 4:31 IST
Last Updated 28 ಏಪ್ರಿಲ್ 2024, 4:31 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಯುತ್ತಿರುವ ಗೌಡ ಲೆದರ್‌ಬಾಲ್ ಪ್ರೀಮಿಯರ್ ಲೀಗ್‌ನಲ್ಲಿ ಶನಿವಾರ ‘ದಿ ಎಲೈಟ್ ಕ್ರಿಕೆಟ್ ಕ್ಲಬ್ ಸ್ಕ್ವಾಡ್-2’ ಫೈನಲ್ ಪ್ರವೇಶಿಸಿತು. ‘ಎಲೈಟ್ ಕ್ರಿಕೆಟ್ ಕ್ಲಬ್’ ತಂಡ ಜಯಗಳಿಸಿ ಎಲಿಮೆನೇಟರ್ -2ರ ಹಂತವನ್ನು ಪ್ರವೇಶಿಸಿತು.

ದಿ ಎಲೈಟ್ ಕ್ರಿಕೆಟ್ ಕ್ಲಬ್ ಸ್ಕ್ವಾಡ್-2 ತಂಡವು ಕ್ವಾಲಿಫೈಯರ್ ಪಂದ್ಯದಲ್ಲಿ ಕೂರ್ಗ್ ವಾರಿಯರ್ಸ್ ತಂಡದ ವಿರುದ್ಧ 10 ವಿಕೆಟ್‌ಗಳ ಅಮೋಘ ಜಯವ ಸಾಧಿಸಿತು‌‌. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೂರ್ಗ್ ವಾರಿಯರ್ಸ್ ತಂಡ ನಿಗದಿತ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿತು‌. ತಂಡದ ಪರ ಗೋಪಿತ್ 23 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದರು. ಕುಜಲ್ ಕಾರ್ಯಪ್ಪ 29 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರು‌. ಎಲೈಟ್ ತಂಡದ ಪರ ದೀಕ್ಷಿತ್ ಕುತ್ಯಾಳ ಮತ್ತು ಹುದೇರಿ ತಮ್ಮಣ್ಣ ತಲಾ 1 ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ದಿ ಎಲೈಟ್ ಕ್ರಿಕೆಟ್ ಕ್ಲಬ್ ಸ್ಕ್ವಾಡ್-2 ತಂಡವು 5.3 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ತಂಡದ ಪರ ಎ.ಎಸ್ ರಾಹುಲ್ 21 ಎಸೆತಗಳಲ್ಲಿ ಅಜೇಯ 66 ರನ್ ಗಳಿಸಿ ಗೆಲುವಿನ ರುವಾರಿಯಾದರು. ಇದು ಇವರ ಸತತ 2ನೇ ಅರ್ಧ ಶತಕವಾಗಿದೆ. ಆಕರ್ಷ್ 18 ರನ್‌ಗಳ ಕಾಣಿಕೆ ನೀಡಿದರು. ಇದರೊಂದಿಗೆ ಎಲೈಟ್ ಸ್ಕ್ವಾಡ್-2 ತಂಡ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತು.

ಮೊದಲ ಎಲಿಮೆನೇಟರ್ ಪಂದ್ಯದಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ತಂಡವು ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡದ ವಿರುದ್ಧ 7 ವಿಕೆಟ್‌ಗಳ ಗೆಲುವು ಸಾಧಿಸಿ‌ತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿತು. ತಂಡದ ಪರ ಜಶ್ವಂತ್ 27 ರನ್ ಗಳಿಸಿದರು. ರೋಹನ್ 22 ರನ್ ಗಳಿಸಿದರು. ಎಲೈಟ್ ತಂಡದ ಪರ ಶರತ್ ಚೊಕ್ಕಾಡಿ ಮತ್ತು ಅಣ್ಣಚಿರ ಧಿನೇಂದ್ರ ತಲಾ 2 ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಎಲೈಟ್ ಕ್ರಿಕೆಟ್ ಕ್ಲಬ್ ತಂಡ 9.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಲೋಕೇಶ್ 15 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದರು. ಬಿಳಿಗೇರಿ ತಂಡದ ಪರ ಮೂವನ ತುಷಾರ್ 2 ವಿಕೆಟ್ ಪಡೆದರು.

ಗೌಡ ಮುಕ್ತ ಮಹಿಳಾ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯವೊಂದರಲ್ಲಿ ಮಹಿಳೆಯೊಬ್ಬರು ಬೌಲಿಂಗ್ ಮಾಡಿದ ರೀತಿ
ಗೌಡ ಮುಕ್ತ ಮಹಿಳಾ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯವೊಂದರಲ್ಲಿ ಮಹಿಳೆಯೊಬ್ಬರು ಬೌಲಿಂಗ್ ಮಾಡಿದ ರೀತಿ

ಗೌಡ ಮಹಿಳೆಯರ ಕ್ರಿಕೆಟ್‌ನಲ್ಲಿ 11 ತಂಡಗಳು ಭಾಗಿ

ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ಎಲ್ಲಿ ನೋಡಿದರಲ್ಲಿ ಮಹಿಳಾ ಕ್ರಿಕೆಟ್ ಪಟುಗಳಿಗೆ ಕಂಡು ಬಂದರು. ಒಟ್ಟು 11 ಮಹಿಳಾ ತಂಡದ 130ಕ್ಕೂ ಅಧಿಕ ಆಟಗಾರ್ತಿಯರು ಮೈದಾನಕ್ಕಿಳಿದಿದ್ದರು. ಒಟ್ಟು 8 ಪಂದ್ಯಗಳು ನಡೆದವು. ಇಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಡೆಯುತ್ತಿರುವ ಗೌಡ ಪ್ರೀಮಿಯರ್ ಲೀಗ್‌ನಲ್ಲಿ ಶನಿವಾರದಿಂದ ಆರಂಭವಾದ 2 ದಿನಗಳ ಮಹಿಳೆಯರ ಕ್ರಿಕೆಟ್ ಟೂರ್ನಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಒಟ್ಟು 11 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು. ಗ್ಲ್ಯಾಡಿಯೇಟರ್ ಕ್ವೀನ್ಸ್ ತಂಡವು ಬ್ಲಾಸಮ್ ಬೆಲ್ಸ್ ವಿರುದ್ಧ 3 ರನ್‌ಗಳ ಹಾಗೂ ಪ್ಯಾಂಥರ್ಸ್ ಕ್ಲಬ್ ಕೊಡಗು ತಂಡವು ವೈಲ್ಡ್ ಕ್ಯಾಟ್ ನಂಜರಾಯಪಟ್ಟಣ ವಿರುದ್ಧ 5 ರನ್‌ಗಳ ರೋಚಕ ಜಯ ಪಡೆಯಿತು. ಈ ಎರಡೂ ತಂಡಗಳು ನೋಡುಗರನ್ನು ತುದಿಗಾಲ ಮೇಲೆರಿಸಿತು. ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದ ಕುತೂಹಲ ನೋಡುಗರನ್ನು ರೋಮಾಂಚನಗೊಳಿಸಿತು. ಎಲೈಟ್ ವಿಮೆನ್ಸ್ ಕ್ರಿಕೆಟ್ ಕ್ಲಬ್ 65 ರನ್‌ಗಳಷ್ಟು ಭಾರಿ ಅಂತರದಿಂದ ಕೆಡಿಕೆ ವಿಮೆನ್ಸ್ ಮೈಸೂರು ತಂಡವನ್ನು ಮಣಿಸಿತು. ಬ್ಲ್ಯಾಕ್ ಪ್ಯಾಂಥರ್ಸ್ ತಂಡವು ಗುಡ್ಲೂರು ಕಾವೇರಿ ಟೀಮ್ ಅನ್ನು 15 ರನ್‌ಗಳಿಂದ ಸೋಲಿಸಿತು. ವೈಲ್ಡ್ ಮಾಸ್ಟರ್ಸ್ ತಂಡವು ಗ್ಲ್ಯಾಡಿಯೇಟರ್ ಕ್ವೀನ್ಸ್ ತಂಡದ 9 ವಿಕೆಟ್‌ಗಳ ಹಾಗೂ ಪ್ಲಾಂಟರ್ಸ್ ಕ್ಲಬ್ ಕೊಡಗು ತಂಡವು ವೈಲ್ಡ್ ಕ್ಯಾಟ್ ನಂಜರಾಯಪಟ್ಟಣ ವಿರುದ್ಧ 33 ರನ್‌ಗಳ ಹಾಗೂ ಮರಗೋಡು ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ತಂಡವು ಕೆಡಿಕೆ ವಿಮೆನ್ಸ್ ಮೈಸೂರು ವಿರುದ್ಧ 21 ರನ್‌ಗಳ  ಅಮೋಘ ಜಯ ಪಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT