ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು: ಅಧಿಕಾರಿಗಳ ಗೈರಿಗೆ ಗ್ರಾಮಸಭೆಯಲ್ಲಿ ವ್ಯಾಪಕ ಆಕ್ರೋಶ

Published 23 ನವೆಂಬರ್ 2023, 5:09 IST
Last Updated 23 ನವೆಂಬರ್ 2023, 5:09 IST
ಅಕ್ಷರ ಗಾತ್ರ

ಶನಿವಾರಸಂತೆ: ಗ್ರಾಮಸಭೆಗೆ ಅಧಿಕಾರಿಗಳು ಗೈರಾಗಿರುವುದಕ್ಕೆ ಸಂಬಂಧಿಸಿದಂತೆ ಇಲ್ಲಿಗೆ ಸಮೀಪ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.

ಒಂದು ಹಂತದಲ್ಲಿ ಅಧಿಕಾರಿಗಳಿಲ್ಲದೇ ಗ್ರಾಮಸಭೆ ನಡೆಸುವುದಾದರೂ ಏಕೆ? ಕೂಡಲೇ ಮುಂದೂಡಿ ಎಂದು ಬಹುತೇಕ ಸದಸ್ಯರೂ ಒತ್ತಾಯಿಸಿದರು.

ಗ್ರಾಮಸ್ಥ ಸಿ.ಕೆ.ಚಂದ್ರಶೇಖರ್ ಮಾತನಾಡಿ, ‘ಪ್ರತಿ ಬಾರಿಯೂ ನಡೆಯುವ ಗ್ರಾಮಸಭೆಗಳಿಗೆ ವಿರಳ ಸಂಖ್ಯೆಯಲ್ಲಿ ಅಧಿಕಾರಿಗಳು ಭಾಗವಹಿಸುತ್ತಾರೆ. ಗ್ರಾಮಸ್ಥರು, ರೈತರಿಗೆ ಸಾಕಷ್ಟು ಸಮಸ್ಯೆಗಳಿರುತ್ತದೆ. ಅಧಿಕಾರಿಗಳ ಮುಂದೆ ನಾವು ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮಸಭೆಯನ್ನು ಮುಂದೂಡಬೇಕು’ ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ‘ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಆಹ್ವಾನ ಪತ್ರ ನೀಡಲಾಗಿತ್ತು. ಆದರೆ, ಕೆಲವು ಅಧಿಕಾರಿಗಳಿಗೆ ಬೇರೆ ಬೇರೆ ಕಾರ್ಯಕ್ರಮಗಳಿದ್ದುದ್ದರಿಂದ ಗ್ರಾಮಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ’ ಎಂದರು.

ನೋಡಲ್ ಅಧಿಕಾರಿ ಸೋಮಶೇಖರ್ ಗ್ರಾಮಸಭೆ ನಡೆಸಲು ಅವಕಾಶ ಕೊಡುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಈ ಬಗ್ಗೆ ಮತ್ತೆ ಚರ್ಚೆ ನಡೆದು ಗ್ರಾಮಸಭೆಯಲ್ಲಿ ಗೈರು ಹಾಜರಾಗಿರುವ ಅಧಿಕಾರಿಗಳ ಧೋರಣೆ ಬಗ್ಗೆ ಸಭೆಯ ಖಂಡನೆಯನ್ನು ದಾಖಲಿಸಿದ ಬಳಿಕ ಸಭೆ ಆರಂಭವಾಯಿತು.

ಸಭೆಯಲ್ಲಿ ಕಂದಾಯ ಇಲಾಖೆಯ ಸೇವಾ ಸೌಲಭ್ಯಗಳ ಬಗ್ಗೆ ಶನಿವಾರಸಂತೆ ಕಂದಾಯ ಅಧಿಕಾರಿ ವಾಣಿ ಮಾಹಿತಿ ನೀಡಿದರು.

ಅರಣ್ಯ ಇಲಾಖೆಯಿಂದ ಜೂನ್, ಜುಲೈ ತಿಂಗಳಲ್ಲಿ ಗಿಡಗಳ ವಿತರಣೆ, ಕಾಡಾನೆ ರಕ್ಷಣೆಗೆ ರೈತರು ಸೋಲಾರ್ ಬೇಲಿ ಅಳವಡಿಸಲು ಇಲಾಖೆಯಿಂದ ದೊರೆಯುವ ಸಬ್ಸಿಡಿ ವ್ಯವಸ್ಥೆ ಬಗ್ಗೆ ಉಪ ವಲಯಧಿಕಾರಿ ಎಂ.ವಿ.ಸೂರ್ಯ ಮಾಹಿತಿ ನೀಡಿದರು.

ಉದ್ಯೋಗ ಖಾತರಿ ಯೋಜನೆ ಬಗ್ಗೆ ಎಂಜಿನಿಯರ್ ಲೋಕೇಶ್ ಮಾಹಿತಿ ನೀಡಿದರು. ಗ್ರಾಮೀಣ ರಸ್ತೆ ಯೋಜನೆ, ಶಿಕ್ಷಣ, ವಿದ್ಯುತ್ ಇನ್ನು ಮುಂತಾದ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಮೋಹನ್, ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರು, ಪಿಡಿಒ ಹರೀಶ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT