ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕುನಾಡು ವ್ಯಾಪ್ತಿ ವಿಜೃಂಭಣೆಯ ಕೋಲಗಳು

ಜಾತಿಭೇದಗಳನ್ನು ಮೀರಿ ಎಲ್ಲರೂ ಒಗ್ಗೂಡಿ ಆಚರಿಸುವ ಉತ್ಸವಗಳು
Last Updated 1 ಮಾರ್ಚ್ 2023, 6:01 IST
ಅಕ್ಷರ ಗಾತ್ರ

ನಾಪೋಕ್ಲು: ವಸಂತ ಋತುವಿನ ಆಗಮನ ಹತ್ತಿರವಾಗುತ್ತಿದ್ದಂತೆ ವಿಜೃಂಭಣೆಯ ಕೋಲಗಳಿಗೆ ನಾಲ್ಕುನಾಡು ಅಣಿಯಾಗಿದ್ದು, ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯಲು ಸಿದ್ಧತೆಗಳು ಆರಂಭಗೊಂಡಿವೆ.

ಇಲ್ಲಿನ ಕಕ್ಕಬ್ಬೆ ಪಾಡಿ ಇಗ್ಗುತಪ್ಪ ದೇವಾಲಯ, ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವರು ಮಂಟಪ, ಯವಕಪಾಡಿ ಗ್ರಾಮದ ಪನ್ನಂಗಾಲ ತಮ್ಮೆ ದೇವಿಯ ಉತ್ಸವಗಳು ಸಾಲು ಸಾಲಾಗಿ ಆರಂಭಗೊಳ್ಳಲು ದಿನಗ ಣನೆ ಆರಂಭವಾಗಿದೆ. ಇದರಲ್ಲಿ ತಮ್ಮೆದೇವಿಯ ಉತ್ಸವದಲ್ಲಿ ಜಾತಿಭೇದ ಗಳನ್ನು ಮೀರಿ ಎಲ್ಲ ಜಾತಿಯವರೂ ಒಟ್ಟಿಗೆ ಸೇರಿ ಆಚರಿಸುವುದು ವಿಶೇಷ.

ನಾಪೋಕ್ಲು ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದದ ಬಳಿ ಅಮ್ಮಂಗೇರಿಯಲ್ಲಿ ಮಾರ್ಚ್ ತಿಂಗಳಲ್ಲಿ ಪುದಿಯೋದಿ ದೇವರ ವಾರ್ಷಿಕ ಕೋಲ ವೈಭವೋಪೇತವಾಗಿ ಜರುಗುತ್ತದೆ.

ಈ ದೈವವು ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಕಾವಲುಗಾರ ಆಗಿ ನೆಲೆ ನಿಂತು ನಂಬಿದವರಿಗೆ ಒಳಿತು ಮಾಡುವ ದೇವರೆಂದು ಪ್ರಸಿದ್ಧಿ ಪಡೆದಿದೆ. ಊರಿಗೆ ಬರುವ ಮಹಾಮಾರಿ ರೋಗಗಳನ್ನು ತಡೆದು ಊರನ್ನು ಕಾಪಾಡುವ ದೇವ ರೆಂದು ಹಿಂದಿನಿಂದಲೂ ನಂಬಿಕೆ ಇದೆ. ಇದರ ಅಂಗವಾಗಿ ರಾತ್ರಿ ಭೀರ, ಭೀರಾಳಿ, ಭದ್ರಕಾಳಿ ದೇವರ ಕೋಲಗಳು ನಡೆಯುತ್ತವೆ. ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ.

ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವರ ವಾರ್ಷಿಕ ಉತ್ಸವದಲ್ಲಿ ಹಲವು ಕೋಲಗಳು ಉತ್ಸವಕ್ಕೆ ಮೆರುಗು ನೀಡುತ್ತವೆ. ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯುವ ಹಬ್ಬದಲ್ಲಿ ವಿವಿಧ ಕೋಲಗಳು ಶಾಸ್ತಾವು ದೇವರಿಗೆ ಸೇವೆ ಸಲ್ಲಿಸುವವು.

ಮುಖ್ಯ ಹಬ್ಬದಲ್ಲಿ ಬೆಳಿಗ್ಗೆ ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ಕೋಲಗಳು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಗಮನ ಸೆಳೆಯುತ್ತವೆ. ಪ್ರತಿವರ್ಷ ಮೇ ತಿಂಗಳ 3 ಮತ್ತು 4 ರಂದು ಇಲ್ಲಿ ಉತ್ಸವ ಜರುಗುತ್ತದೆ. ಭಕ್ತರು ಅಧಿಕ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ.

ಕೆಂಡದ ರಾಶಿಯ ಮೇಲೆ ವಿಷ್ಣುಮೂರ್ತಿ ಕೋಲ ಬೀಳುವ ದೃಶ್ಯ ಸಹಸ್ರಾರು ಭಕ್ತರನ್ನು ಸೆಳೆಯು ತ್ತದೆ. ಸಮೀಪದ ಹೊದ್ದೂರು ಸೇರಿ ದಂತೆ ಸುತ್ತಮುತ್ತಲ ಗ್ರಾಮೀಣ ದೇವಾಲಯ ಗಳಲ್ಲಿ ವಿಷ್ಣುಮೂರ್ತಿ ಕೋಲಗಳನ್ನು ವೀಕ್ಷಿಸಬಹುದು.

ಭಕ್ತರ ಮನಸೆಳೆವ ಪನ್ನಂಗಾಲ ತಮ್ಮೆ ಉತ್ಸವ

ವಿಶಾಲ ಗದ್ದೆಯಲ್ಲಿ ದೈವಶಕ್ತಿಯ ಆವಾಹನೆಯಾಗಿ ಕೊಡೆ ವೃತ್ತಾಕಾರದಲ್ಲಿ ಸುತ್ತುವಾಗ ಭಕ್ತರ ಮೈಯಲ್ಲಿ ರೋಮಾಂ ಚನ. ಮತ್ತೊಂದೆಡೆ ಹಬ್ಬದಲ್ಲಿ ಪಾಲ್ಗೊಂಡ ಭಕ್ತರು ಕತ್ತಿಯಿಂದ ಮೈಗೆ ಕಡಿದುಕೊಂಡು ಆವೇಶಭರಿತರಾಗಿ ಹೂಂಕರಿಸುತ್ತಾ ನರ್ತಿಸಿದರೆ ವೀಕ್ಷಕರ ಮನದಲ್ಲಿ ನವಿರಾದ ಕಂಪನ. ಇಂತಹ ಕ್ಷಣಗಳಿಗೆ ಸಾಕ್ಷಿಯಾಗುವುದು ಇಲ್ಲಿಗೆ ಸಮೀಪದ ಯವಕಪಾಡಿಯ ಪನ್ನಂಗಾಲ ತಮ್ಮೆ ದೇವಿಯ ಉತ್ಸವದಲ್ಲಿ.

ಎರಡು ವರ್ಷಕ್ಕೊಮ್ಮೆ ವಿಜೃಂಭಣೆ ಯಿಂದ ನಡೆಯುವ ಈ ಉತ್ಸವವನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಸೇರುತ್ತಾರೆ. ಪ್ರತಿವರ್ಷ ಏಪ್ರಿಲ್ ತಿಂಗಳ 12 ಮತ್ತು 13ರಂದು ಉತ್ಸವ ಜರುಗುತ್ತದೆ.

ಕೊಡವರ ಮಳೆದೇವರೆಂದೇ ಖ್ಯಾತಿ ಪಡೆದ ಇಗ್ಗುತ್ತಪ್ಪ ದೇವರ ಸೋದರಿ ಪೊನ್ನಂಗಾಲ ತಮ್ಮೆ ದೇವಿ. ಉತ್ಸವದ ಆರಂಭದಲ್ಲಿ ಅಂಜಪರವಂಡ ಐನ್‌ಮನೆಯಿಂದ ಭಂಡಾರಪೆಟ್ಟಿಗೆಯನ್ನು ದೇವಾಲಯಕ್ಕೆ ತರಲಾಗುತ್ತದೆ. ಪೊನ್ನಂಗಾಲ ತಮ್ಮೆ ದೇವಾಲಯದಲ್ಲಿ ಪೂಜೆ, ಅಭಿಷೇಕ, ಸಾಂಪ್ರದಾಯಿಕ ಆಚರಣೆಗಳು ನೆರವೇರುತ್ತವೆ. ಶ್ರದ್ಧಾಭಕ್ತಿಯಿಂದ ಓಲೆ (ತಾಳೆಜಾತಿಗೆ ಸೇರಿದ ಮರದ ಗರಿ) ಯಲ್ಲಿ ತಯಾರಿಸಿದ ಎರಡು ಕೊಡೆಗಳನ್ನು ಕೊಡೆ ಹಬ್ಬದಲ್ಲಿ ಬಳಸಲಾಗುವುದು. ಈ ಕೊಡೆಯಲ್ಲಿ ಪೊನ್ನಂಗಾಲ ತಮ್ಮೆ ದೇವಿ ನೆಲೆಸಿದ್ದು ಅಣ್ಣನಾದ ಇಗ್ಗುತ್ತಪ್ಪ ಮನೆಗೆ ತಂಗಿಯನ್ನು ಕರೆತರುವ ಪದ್ದತಿಯನ್ನು ಉತ್ಸವದ ರೂಪದಲ್ಲಿ ಆಚರಿಸಲಾಗುತ್ತಿದೆ. ಅಣ್ಣನನ್ನು (ಇಗ್ಗುತ್ತಪ್ಪ) ಬಿಟ್ಟು ಹೋಗಲು ಮನಸ್ಸಿಲ್ಲದ ತಂಗಿಯು ಮಾರ್ಗ ಮಧ್ಯೆ ಸಿಗುವ ಭತ್ತದ ಗದ್ದೆಯಿಂದ ಹಿಂತಿರುಗಿ ಹೋಗಲು ಯತ್ನಿಸುವ ದೃಶ್ಯ ಭಕ್ತಿಭಾವದಿಂದ ಕೂಡಿದ್ದು ಭಕ್ತರನ್ನು ರೋಮಾಂಚನಗೊಳಿಸುತ್ತದೆ.

ಮಧ್ಯಾಹ್ನ ಪಾಡಿ ಇಗ್ಗುತ್ತಪ್ಪ ದೇವಾಲಯ ಸಮೀಪದ ಅಮ್ಮಂಗೇರಿ ಯಿಂದ ಬಿದಿರಿನ ಹೊಸ ಕೊಡೆಯನ್ನು ಪೊನ್ನಂಗಾಲ ತಮ್ಮೆ ದೇವಾಲಯದ ಸಮೀಪದ ಗದ್ದೆಗೆ ಸಾಂಪ್ರದಾಯಿಕ ರೀತಿಯಲ್ಲಿ ತರಲಾಗುತ್ತದೆ. ಹರಕೆಯ ಎತ್ತುಗಳೊಂದಿಗೆ ದೇವಾಲಯಕ್ಕೆ ಭಕ್ತರು ಆಗಮಿಸಿದಾಗ ದೇವರ ಮೂರ್ತಿ ಹಾಗೂ ಕೊಡೆ ಮೆರವಣಿಗೆ ನಡೆಯುತ್ತದೆ. ಈ ಸಂದರ್ಭದಲ್ಲಿ ಭಕ್ತರು ಭಾವಪರವಶತೆಯಿಂದ ತಲೆಗೆ ಕತ್ತಿಯಿಂದ ಕಡಿದುಕೊಂಡು ಆವೇಶಭರಿತರಾಗಿ ನರ್ತಿಸುವುದು ವಿಶೇಷ. ವಿಶೇಷ ಉತ್ಸವದಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ. ಸಂಜೆ ದೇವರ ಜಳಕ ಹಾಗೂ ರಾತ್ರಿ ಕರಿಚೌಂಡಿ ಬಾರಣೆ ಬಳಿಕ ಕುರುಂದ ಆಟ ಹಾಗೂ ವಿವಿಧ ಪೂಜಾ ಕಾರ್ಯಗಳೊಂದಿಗೆ ಪನ್ನಂಗಾಲ ತಮ್ಮೆ ಉತ್ಸವ ಕೊನೆಗೊಳ್ಳುತ್ತದೆ.

ಜಾತಿ ಮತದ ಬೇಧವಿಲ್ಲ

ಪನ್ನಂಗಾಲ ತಮ್ಮೆ ದೇವಿಯ ಉತ್ಸವದಲ್ಲಿ ಯವಕಪಾಡಿ ಗ್ರಾಮದ ಅಂಜಪರವಂಡ, ಕರ್ತಂಡ, ಐರೀರ, ಅಪ್ಪಾರಂಡ ಕುಟುಂಬಸ್ಥರು ಪರಿಶಿಷ್ಟ ಜಾತಿಯ 9 ಕುಡಿಗಳು (ಕುಟುಂಬಗಳು) ಹಾಗೂ ಒಂದು ಕುಡಿಯರ ಕುಟುಂಬದವರ ಉಸ್ತುವಾರಿಯಲ್ಲಿ ಕೊಡೆ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಇಲ್ಲಿ ಜಾತಿಬೇಧ ಇಲ್ಲದೇ ಎಲ್ಲರೂ ಒಂದುಗೂಡಿ ಉತ್ಸವ ಆಚರಿಸುವುದು ವಿಶೇಷ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT