ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಮೇಂಗಡ, ನಂದೀರ ತಂಡಕ್ಕೆ ಭರ್ಜರಿ ಗೆಲುವು

ಆತಿಥೇಯ ಅರಮಣಮಾಡ ತಂಡಕ್ಕೆ ನಿರಾಸೆ, ಮೈದಾನದಲ್ಲಿ ಬ್ಯಾಟ್ಸ್‌ಮನ್‌ಗಳ ಅಬ್ಬರ
Published 8 ಮೇ 2024, 4:49 IST
Last Updated 8 ಮೇ 2024, 4:49 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಸಮೀಪದ ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯಲ್ಲಿ ಅಳಮೇಂಗಡ ತಂಡ ಮಾಣೀರ ವಿರುದ್ಧ 91 ರನ್‌ಗಳ ಭರ್ಜರಿ ಜಯ ಪಡೆಯಿತು.

ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡೂ ವಿಭಾಗದಲ್ಲೂ ಅಳಮೇಂಗಡ ಕರಾರುವಕ್ಕಾದ ಪ್ರದರ್ಶನ ನೀಡಿದ್ದು ವಿಶೇಷ ಎನಿಸಿತು. ತಂಡದ ಬ್ಯಾಟ್ಸ್‌ಮೆನ್‌ಗಳು ನಿಗದಿತ 8 ಓವರ್‌ಗಳಲ್ಲಿ 119 ರನ್‌ ಗಳಿಸಿ ಬೃಹತ್ ಗುರಿಯನ್ನು ಒಡ್ಡಿದರು. ಗುರಿ ಬೆನ್ನತ್ತಿದ ಮಾಣೀರ ತಂಡವನ್ನು ಕೇವಲ 28 ರನ್‌ಗಳಿಗೆ ನಿಯಂತ್ರಿಸಿದ್ದು, ಮಾತ್ರವಲ್ಲ 9 ವಿಕೆಟ್‌ಗಳನ್ನು ಅಳಮೇಂಗಡ ಬೌಲರ್‌ಗಳು ಪಡೆದು, ಗೆಲುವಿಗೆ ಕಾರಣರಾದರು.

ಇದೇ ರೀತಿ ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡೂ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರಿದ ನಂದೀರ ತಂಡವು ನಾಯಕಂಡ ವಿರುದ್ಧ 63 ರನ್‌ಗಳ ಗೆಲುವು ಸಾಧಿಸಿತು. ನಂದೀರ ನೀಡಿದ 110 ರನ್‌ಗಳ ಗುರಿಯನ್ನು ಬೆನ್ನತ್ತಿದ ನಾಯಕಂಡ ತಂಡವು 46 ರನ್‌ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಅಚ್ಚಪಂಡ ತಂಡವು ಕಡೇಮಾಡ ವಿರುದ್ಧ 51 ರನ್‌ಗಳ ಗೆಲುವು ಪಡೆಯಿತು. ಅಚ್ಚಪಂಡ ನೀಡಿದ 98 ರನ್‌ಗಳ ಗುರಿಯನ್ನು ಬೆನ್ನತ್ತಿದ ಕಡೇಮಾಡ 47 ರನ್‌ಗಳನ್ನಷ್ಟೇ ಗಳಿಸಿತು.

ಓಡಿಯಂಡ ತಂಡವು ಮಲ್ಲಾಜೀರ ವಿರುದ್ಧ 21 ರನ್‌ಗಳ ಗೆಲುವು ಸಾಧಿಸಿತು. ಓಡಿಯಂಡ ನೀಡಿದ 95 ರನ್‌ಗಳ ಗುರಿಯನ್ನು ಉತ್ಸಾಹದಿಂದಲೇ ಬೆನ್ನತ್ತಿದ ಮಲ್ಲಾಜೀರ 73 ರನ್‌ಗಳನ್ನಷ್ಟೇ ಗಳಿಸಿ ಸ್ವಲ್ಪದರಲ್ಲೇ ಗೆಲುವನ್ನು ಬಿಟ್ಟುಕೊಟ್ಟಿತು.

ಇದೇ ರೀತಿ ಚೀನಂದ ಸಹ ಕೇವಲ 18 ರನ್‌ಗಳಿಂದ ಗೆಲುವನ್ನು ಕೈಚೆಲ್ಲಿ ನಿರಾಶವಾಯಿತು. ಕಂಬೀರಂಡ ನೀಡಿದ 88 ರನ್‌ಗಳ ಗುರಿಯನ್ನು ಬೆನ್ನತ್ತಿದ ಚೀನಂದ 69 ರನ್‌ ಗಳಿಸಿ, ಗೆಲುವಿನ  ಹೊಸ್ತಿಲಲ್ಲಿ ಎಡವಿತು. ಕೊನೆಗೆ ಕಂಬೀರಂಡ 18 ರನ್‌ಗಳ ಜಯದ ನಗೆ ಬೀರಿತು.

ಕಾಡ್ಯಮಾಡ ತಂಡಕ್ಕೆ ಮಲ್ಚೀರ ವಿರುದ್ಧ 10 ವಿಕೆಟ್‌ಗಳ ಸುಲಭ ಜಯ ಒಲಿಯಿತು. ಮಲ್ಚೀರ ನೀಡಿದ 57 ರನ್‌ಗಳ ಗುರಿಯನ್ನು ಬೆನ್ನತ್ತಿದ ಕಾಡ್ಯಮಾಡ ತಂಡವು ಕೇವಲ 3 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ಕಳೆದುಕೊಳ್ಳದೇ ಗುರಿ ತಲುಪಿದ್ದು ವಿಶೇಷ ಎನಿಸಿತು. ಬ್ಯಾಟ್ಸ್‌ಮೆನ್‌ಗಳು ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಗೆರೆದು ಪ್ರೇಕ್ಷಕರಿಗೆ ಭರಪೂರ ರಂಜನೆ ನೀಡಿದರು.

ಕಳಕಂಡ ತಂಡದ ಬ್ಯಾಟ್ಸ್‌ಮೆನ್‌ಗಳು ಸಹ ಕ್ರೀಡಾಂಗಣದಲ್ಲಿ ಅಬ್ಬರಿಸಿದರು. ಇವರ ಅಬ್ಬರ ಹೇಗಿತ್ತೆಂದರೆ ಎದುರಾಳಿ ತಂಡ ಐಚಂಡ ನೀಡಿದ 88 ರನ್‌ಗಳ ಗುರಿಯನ್ನು ಕೇವಲ ಒಂದು ವಿಕೆಟ್‌ ಮಾತ್ರವೇ ಕಳೆದುಕೊಂಡು ಕೇವಲ 4.2 ಓವರ್‌ಗಳಲ್ಲೇ ತಲುಪಿ 9 ವಿಕೆಟ್‌ಗಳ ಸುಲಭ ಜಯ ಪಡೆಯಿತು.

ಬ್ಯಾಟ್ಸ್‌ಮೆನ್‌ಗಳ ಮತ್ತೊಂದು ಅಮೋಘ ಪ್ರದರ್ಶನಕ್ಕೆ ಚಿಂಡಮಾಡ - ಚಿರಿಯಪಂಡ ನಡುವಿನ ಪಂದ್ಯ ಸಾಕ್ಷಿಯಾಯಿತು. ವಿಶೇಷ ಎಂದರೆ ಎರಡೂ ತಂಡಗಳ ಬ್ಯಾಟ್ಸ್‌ಮೆನಗಳನ್ನು ಕಟ್ಟಿ ಹಾಕುವಲ್ಲಿ ಎರಡೂ ತಂಡಗಳ ಬೌಲರ್‌ಗಳು ವಿಫಲರಾದರು. ಚಿಂಡಮಾಡ ನೀಡಿದ 105 ರನ್‌ಗಳ ಗುರಿಯನ್ನು ಬೆನ್ನತ್ತಿದ ಚಿರಿಯಪಂಡ ಕೇವಲ 1 ವಿಕೆಟ್‌ ಕಳೆದುಕೊಂಡು 7.5 ಓವರ್‌ಗಳಲ್ಲಿ ಗುರಿ ತಲುಪಿತು. ಅಂತಿಮ  ಓವರ್‌ ಪ್ರೇಕ್ಷಕರನ್ನು ತುದಿಗಾಲ ಮೇಲೇರಿಸಿತು.

ಅಟ್ರಂಗಡ ತಂಡವು ಬಾದಲೀರ ವಿರುದ್ಧ 8 ವಿಕೆಟ್‌ಗಳಿಂದ ಜಯ ಸಾಧಿಸಿತು. ಬಾದಲೀರ ನೀಡಿದ 53 ರನ್‌ಗಳ ಗುರಿಯನ್ನು 2 ವಿಕೆ‌ಟ್‌ ಕಳೆದುಕೊಂಡ ಅಟ್ರಂಗಡ ಕೇವಲ 3.2 ಓವರ್‌ಗಳಲ್ಲಿಯೇ ತಲುಪಿದ್ದು ವಿಶೇಷ ಎನಿಸಿತು.

ಕಾಳಿಮಾಡ ತಂಡವು ಬಾಳೆಯಡ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿತು. ಬಾಳೆಯಡ ನೀಡಿದ 73 ರನ್‌ಗಳ ಗುರಿಯನ್ನು ಕಾಳಿಮಾಡ 3 ವಿಕೆಟ್ ಕಳೆದುಕೊಂಡು ತಲುಪಿತು.

ಉಳುವಂಗಡ ತಂಡವು ಆತಿಥೇಯ ಅರಮಣಮಾಡ ವಿರುದ್ಧ ವಿಕೆಟ್‌ಗಳ ಜಯ ಸಾಧಿಸಿತು. ಅರಮಣಮಾಡ ನೀಡಿದ 67 ರನ್‌ಗಳ ಗುರಿಯನ್ನು ಉಳುವಂಗಡ ತಂಡವು 3 ವಿಕೆಟ್‌ ಕಳೆದುಕೊಂಡು ಇನ್ನೂ 1 ಓವರ್‌ ಇರುವಂತೆ ತಲುಪಿದ್ದು ವಿಶೇಷ ಎನಿಸಿತು.

ಮಣವಟ್ಟಿರ ತಂಡವು ಮುಕ್ಕಾಟಿರ ತಂಡ‌ವನ್ನು 5 ವಿಕೆಟ್‌ಗಳಿಂದ ಮಣಿಸಿತು. ಮುಕ್ಕಾಟಿರ ತಂಡ ನೀಡಿದ 77 ರನ್‌ಗಳ ಗುರಿಯನ್ನು ಮಣವಟ್ಟಿರ 5 ವಿಕೆಟ್‌ಗಳನ್ನು ಇನ್ನೂ 5 ಎಸೆತಗಳು ಇರುವಂತೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT