ಮಡಿಕೇರಿ: ಇಲ್ಲಿನ ನಾಪೋಕ್ಲುವಿನಲ್ಲಿ ಅಪ್ಪಚೆಟ್ಟೋಳಂಡ ಕುಟುಂಬ ಆತಿಥ್ಯ ವಹಿಸಿರುವ 23ನೇ ಕೊಡವ ಕೌಟುಂಬಿಕ ಹಾಕಿ ಉತ್ಸವವು ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಆನ್‌ಲೈನ್ ವೇದಿಕೆಯಲ್ಲಿ ಪ್ರಚಾರ ಗಳಿಸುತ್ತಿದೆ. ಮಾತ್ರವಲ್ಲ, ಆನ್‌ಲೈನ್‌ನ ವಿವಿಧ ತಾಣಗಳಲ್ಲಿ ನೇರ ಪ್ರಸಾರಕ್ಕೂ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
ಪ್ರಮುಖವಾಗಿ ಇನ್‌ಸ್ಟಾ ಗ್ರಾಂ ಖಾತೆಯ ಮೂಲಕ ಹಾಕಿ ಕ್ರೀಡಾ ಉತ್ಸವದ ಮಾಹಿತಿಗಳು ಜಗತ್ತಿನ ಮೂಲೆಮೂಲೆಗೂ ತಲುಪುತ್ತಿವೆ. 1,138 ಮಂದಿ ಈ ಖಾತೆಯನ್ನು ಈಗಾಗಲೇ ಫಾಲೋ ಮಾಡುತ್ತಿದ್ದಾರೆ. ಇಲ್ಲಿ ದೇಶದ ನಾನಾ ಭಾಗಗಳಲ್ಲಿ ಹೆಸರು ಗಳಿಸಿರುವ ನಟ, ನಟಿಯರು ಸೇರಿದಂತೆ ವಿವಿಧ ವಲಯಗಳ ಗಣ್ಯರು ಕ್ರೀಡೋತ್ಸವ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಅವರಲ್ಲಿ ಹಿರಿಯ ನಟ ಅನುಪಮ್ ಖೇರ್, ಸಿಹಿಕಹಿ ಚಂದ್ರು, ಹರ್ಷಿಕಾ ಪೂಣಚ್ಚ, ಸೃಜನ್ ಲೋಕೇಶ್, ತಮಿಳು ಕಿರುತೆರೆಯ ನಟಿ ಅಕ್ಷಿತಾ ಬೋಪಯ್ಯ, ಕನ್ನಡ ಕಿರುತೆರೆ ನಟಿ ಶ್ವೇತಾಪ್ರಸಾದ್, ಸಹನಾ ಪೊನ್ನಮ್ಮ ಸೇರಿದಂತೆ ಅನೇಕ ನಟ, ನಟಿಯರು ಮಾತ್ರವಲ್ಲ ಭಾರತ ತಂಡವನ್ನು ಪ್ರತಿನಿಧಿಸಿದ್ದ ಹಾಕಿ ಆಟಗಾರರು ಶುಭ ಹಾರೈಸಿರುವ ವಿಡಿಯೊಗಳಿವೆ. ಇದರ ಜತೆಗೆ, ಕ್ರೀಡೋತ್ಸವದ ಸಿದ್ಧತೆಗಳನ್ನು ಕುರಿತ ಚುಟುಕು ವಿಡಿಯೊಗಳೂ ಇದ್ದು, ಆನ್‌ಲೈನ್‌ನಲ್ಲಿ ಅನೇಕರ ಮನ ಸೆಳೆಯುತ್ತಿದೆ.
ಯೂಟೂಬ್ ಅಥವಾ ವೆಬ್‌ಸೈಟ್‌ನಲ್ಲಿ ಪಂದ್ಯಾವಳಿಯ ನೇರಪ್ರಸಾರಕ್ಕೂ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಕನಿಷ್ಠ ಉದ್ಘಾಟನಾ ಸಮಾರಂಭ, ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳ ನೇರಪ್ರಸಾರವನ್ನಾದರೂ ಮಾಡಲು ಆಯೋಜಕರು ಹಾಗೂ ತಾಂತ್ರಿಕ ತಂಡ ಸಿದ್ಧತೆಗಳನ್ನು ಭರದಿಂದ ನಡೆಸಿದೆ.
ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಖಾತೆಯ ಜತೆಗೆ www.appachettolanda.com ವೆಬ್‌ಸೈಟ್‌ನಲ್ಲೂ ಆಯಾ ಪಂದ್ಯ ಮುಗಿದ ತಕ್ಷಣವೇ ಫಲಿತಾಂಶ ಸೇರಿಸಲು ನಿರ್ಧರಿಸಲಾಗಿದೆ. ಇದರಿಂದ ಪ್ರಪಂಚದ ಯಾವುದೇ ಮೂಲೆಯಲ್ಲಿ ಕೂತರೂ ಫಲಿತಾಂಶವನ್ನು ಕ್ಷಣಾರ್ಧದಲ್ಲಿ ಪಡೆಯುವ ವ್ಯವಸ್ಥೆಯನ್ನು ಆಯೋಜಕರು ಕಲ್ಪಿಸಿರುವುದು ವಿಶೇಷ
ಆನ್‌ಲೈನ್ ವೇದಿಕೆಗಳು
ಇನ್‌ಸ್ಟಾಗ್ರಾಂ: https://www.instagram.com/appachettolanda_hockey/
ವೆಬ್‌ಸೈಟ್: www.appachettolanda.com
(ಸರಣಿ ಮುಗಿಯಿತು)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.