ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಉಕ್ಕೇರಿದ ನದಿಗಳು: ಜನಜೀವನ ಸಂಪೂರ್ಣ ಅಸ್ತವ್ಯಸ್ತ 

Last Updated 5 ಆಗಸ್ಟ್ 2020, 11:40 IST
ಅಕ್ಷರ ಗಾತ್ರ
ADVERTISEMENT
""

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬುಧವಾರ ಇಡೀ ದಿನ ಗಾಳಿ ಸಹಿತ ಮಳೆಯ ಆರ್ಭಟ ಮುಂದುವರಿದಿದ್ದು ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳೂ ಸೇರಿದಂತೆ ಹಳ್ಳ, ಕೊಳ್ಳಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಅಪಾರ ನಷ್ಟ ಸಂಭವಿಸಿದೆ.

ನದಿಗಳು ಉಕ್ಕೇರಿದ್ದು ಪ್ರವಾಹ ಸ್ಥಿತಿಯಿದೆ. ದಕ್ಷಿಣ ಕೊಡಗು ಭಾಗದ ಶ್ರೀಮಂಗಲ, ಬಾಳೆಲೆ, ಬಲ್ಯಮಂಡೂರು, ನಿಟ್ಟೂರು, ಹರಿಹರ ಭಾಗದಲ್ಲಿ ಸಾವಿರಾರು ಎಕರೆಯಲ್ಲಿ ಭತ್ತದ ಸಸಿ ನಾಟಿ ಮಾಡಿದ್ದ ಗದ್ದೆಗಳು ಪ್ರವಾಹದಲ್ಲಿ ಮುಳುಗಡೆಯಾಗಿವೆ.

ಕುಶಾಲನಗರದ ಕೊಪ್ಪ ಗೇಟ್‌ ಬಳಿಯ ಸೇತುವೆ ಮಟ್ಟಕ್ಕೆ ಕಾವೇರಿ ನೀರು ಬಂದಿದ್ದು ಕುಶಾಲನಗರ– ಮೈಸೂರು ನಡುವೆ ರಸ್ತೆ ಸಂಚಾರ ಬಂದ್‌ ಆಗುವ ಸಾಧ್ಯತೆಯಿದೆ. ಮಡಿಕೇರಿ– ವಿರಾಜಪೇಟೆ ರಸ್ತೆಯ ಭೇತ್ರಿ ಸೇತುವೆಯೂ ಮುಳುಗಡೆಯಾಗುವ ಆತಂಕ ಎದುರಾಗಿದೆ.

ಮಡಿಕೇರಿ ತಾಲ್ಲೂಕಿನ ಕತ್ತಲೆಕಾಡು ಬಳಿ ಭೂಕುಸಿತವಾಗಿದೆ. ಕರಡಿಗೋಡು ಗ್ರಾಮಕ್ಕೆ ಕಾವೇರಿ ನದಿಯ ಪ್ರವಾಹದ ನೀರು ನುಗ್ಗಿದ್ದು ಸ್ಥಳೀಯರನ್ನು ಸ್ಥಳಾಂತರಿಸಲಾಗಿದೆ. ಗುಹ್ಯ, ನೆಲ್ಯಹುದಿಕೇರಿ, ಬೆಟ್ಟದಕಾಡು, ಕುಂಬಾರಗುಡಿ ಹಾಗೂ ಬರಡಿ ವ್ಯಾಪ್ತಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಕುಶಾಲನಗರದ ಕುವೆಂಪು, ಸಾಯಿ ಬಡಾವಣೆ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ. ಮಡಿಕೇರಿ– ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದೆ. ಭಾಗಮಂಡಲ ಜಲಾವೃತವಾಗಿದ್ದು, ಭಾಗಮಂಡಲ– ಅಯ್ಯಂಗೇರಿ ರಸ್ತೆ ಸಂಚಾರವೂ ಬಂದ್ ಆಗಿದೆ.

ಗಾಳಿಯ ಅಬ್ಬರಕ್ಕೆ ಕಾಫಿ ತೋಟ, ಹೆದ್ದಾರಿ, ಗ್ರಾಮೀಣ ರಸ್ತೆಯಲ್ಲಿ ಎಲ್ಲೆಂದರಲ್ಲಿ ಮರಗಳು ಉರುಳಿವೆ. ವಿದ್ಯುತ್‌ ಕಂಬಗಳು ಬಿದ್ದಿದ್ದು ಹಲವು ಗ್ರಾಮಗಳಿಗೆ ವಿದ್ಯುತ್‌ ಪೂರೈಕೆ ಸ್ಥಗಿತವಾಗಿದ್ದು ಕತ್ತಲೆಯಲ್ಲಿ ಮುಳುಗಿವೆ.

ಕೊಡಗಿನ ಕೂಡಿಗೆ ಬಳಿ ಕಾವೇರಿ ನದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT