ಮಂಗಳವಾರ, ಜೂನ್ 22, 2021
27 °C
ಜಿಲ್ಲಾ ಕೋವಿಡ್ ಆಸ್ಪತ್ರೆ ಎದುರು ಒಂದು ವಾರದಿಂದ ತಿಂಡಿ, ಊಟದ ವ್ಯವಸ್ಥೆ

ಸಂಕಷ್ಟ ಕಾಲದಲ್ಲಿ ‘ಕೊ.ರ.ವೇ’ಯ ಅನ್ನದಾಸೋಹ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೋವಿಡ್‌ ನಿಯಂತ್ರಣಕ್ಕೆ ಹೇರಿರುವ ಲಾಕ್‌ಡೌನ್‌ ಮತ್ತೊಂದು ರೀತಿಯ ಸಂಕಷ್ಟ ತಂದೊಡ್ಡಿದೆ. ಅದರಲ್ಲೂ ಜಿಲ್ಲಾ ಆಸ್ಪತ್ರೆಗೆ ರೋಗಿಯೊಂದಿಗೆ ಬರುವ ಸಂಬಂಧಿಕರು ಹಾಗೂ ಕೋವಿಡ್‌ ಪರೀಕ್ಷೆಗೆ ಗಂಟಲು ದ್ರವದ ಮಾದರಿ ನೀಡಲು ಬರುವ ರೋಗಿಗಳಿಗೆ ಮಧ್ಯಾಹ್ನದ ಊಟವಿಲ್ಲದೇ ಹಸಿವಿನ ನೋವು ಅನುಭವಿಸುವ ಸ್ಥಿತಿಯಿದೆ.

ಹೋಟೆಲ್‌ನಲ್ಲಿ ಊಟ ಪಾರ್ಸಲ್‌ ತರಲು ಬೆಳಿಗ್ಗೆ 10ರ ಬಳಿಕ ಪಾರ್ಸಲ್‌ ಸಹ ಇರುವುದಿಲ್ಲ. ಅದರಲ್ಲೂ ನಷ್ಟದ ಕಾರಣಕ್ಕೆ ಬಹುತೇಕರು, ಹೋಟೆಲ್‌ ಬಂದ್ ಮಾಡಿದ್ದಾರೆ. ಇಂತಹ ಸಂಕಷ್ಟದ ವೇಳೆ ಜಿಲ್ಲಾ ಆಸ್ಪತ್ರೆಯ ಎದುರು ಕೊಡಗು ರಕ್ಷಣಾ ವೇದಿಕೆ (ಕೊ.ರ.ವೇ) ಸದಸ್ಯರು ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ. ಅದರ ನೇತೃತ್ವವನ್ನು ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ವಹಿಸಿಕೊಂಡಿದ್ದಾರೆ.

ಕಳೆದ ಏಳು ದಿನಗಳಿಂದ ಮಡಿಕೇರಿಯ ಕೋವಿಡ್‌ ಆಸ್ಪತ್ರೆಯ ಎದುರು ಕೊಡಗು ರಕ್ಷಣಾ ವೇದಿಕೆ ಸದಸ್ಯರು, ರೋಗಿಗಳ ಸಂಬಂಧಿಕರು ಹಾಗೂ ಪೌರ ಕಾರ್ಮಿಕರಿಗೆ ಬೆಳಿಗ್ಗೆಯ ತಿಂಡಿ ಹಾಗೂ ಮಧ್ಯಾಹ್ನದ ಊಟ ನೀಡುವ ಮೂಲಕ ಹಸಿವು ನೀಗಿಸಿ ಪುಣ್ಯದ ಕೆಲಸ ಮಾಡುತ್ತಿದ್ದಾರೆ.

ಒಂದೇ ಕರೆಗೆ ಸ್ಪಂದನೆ: ಕೊಡಗು ರಕ್ಷಣಾ ವೇದಿಕೆ ಸದಸ್ಯರ ಒಂದೇ ಒಂದು ಕರೆಗೆ ಹಲವು ಸಂಘಟನೆಗಳು, ಕಾಫಿ ಎಸ್ಟೇಟ್‌ ಮಾಲೀಕರು ಹಾಗೂ ವೇದಿಕೆ ಎಲ್ಲ ಸದಸ್ಯರೂ ಸ್ಪಂದಿಸಿದ್ದು ಆರ್ಥಿಕ ನೆರವು ಒದಗಿಸುತ್ತಿದ್ದಾರೆ. ಈ ಹಣದಿಂದ ನಿತ್ಯವೂ ಆಸ್ಪತ್ರೆಯ ಎದುರು ನೂರಾರು ಮಂದಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ ಘೋಷಣೆಯಾದ ಮೇಲೆ ಹಲವರು ಸಂಕಷ್ಟಕ್ಕೆ ಸಿಲುಕಿದ್ದರು.

ಲಾಕ್‌ಡೌನ್‌ ಮುಕ್ತಾಯದ ತನಕ...

‘ಮೇ 24ರ ತನಕ ಲಾಕ್‌ಡೌನ್‌ ಘೋಷಣೆಯಾಗಿದೆ. ಅಲ್ಲಿಯ ತನಕ ಊಟದ ವ್ಯವಸ್ಥೆ ಮಾಡಲು ನಿರ್ಧರಿಸಿದ್ದೇವೆ. ಅದಾದ ಮೇಲೆ, ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು. ಬೆಳಿಗ್ಗೆಯ ತಿಂಡಿ ವ್ಯವಸ್ಥೆಯೂ ಇದ್ದು, ಆರ್ಟ್‌ ಆಫ್‌ ಲಿವಿಂಗ್‌ನವರು ತಿಂಡಿ ವ್ಯವಸ್ಥೆಗೆ ಆರ್ಥಿಕ ನೆರವು ಒದಗಿಸುತ್ತಿದ್ದಾರೆ. ಅವಲಕ್ಕಿ ಉಪ್ಪಿಟ್ಟು, ಪುಳಿಯೊಗರೆ, ಬ್ರೆಡ್‌ ಅಂಡ್‌ ಜ್ಯಾಮ್, ಕಡಬು ಹಾಗೂ ಚೆಟ್ನಿ ಇರುತ್ತದೆ. 100 ಮಂದಿ ತಿಂಡಿ ಮಾಡುತ್ತಾರೆ. ಇನ್ನು ಮಧ್ಯಾಹ್ನವೂ 300 ಮಂದಿ ಊಟ ಮಾಡುತ್ತಿದ್ದಾರೆ. ಊಟದೊಂದಿಗೆ ಒಂದು ಮೊಟ್ಟೆಯನ್ನೂ ನೀಡುತ್ತಿದ್ದೇವೆ. ಈ ಸಂಕಷ್ಟ ಕಾಲದಲ್ಲಿ ನಮ್ಮದು ಸಣ್ಣ ಸೇವೆ’ ಎಂದು ಪವನ್‌ ಪೆಮ್ಮಯ್ಯ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು