ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಮಾರ್ಚ್ 17ರಿಂದ ಹಾಕಿ ಸಂಭ್ರಮ

ಅಪ್ಪಚೆಟ್ಟೋಳಂಡ ಕೌಟುಂಬಿಕ ಹಾಕಿ ಉತ್ಸವ: ಮಾಹಿತಿ ಕೈಪಿಡಿ ಬಿಡುಗಡೆ
Last Updated 12 ಫೆಬ್ರವರಿ 2023, 5:06 IST
ಅಕ್ಷರ ಗಾತ್ರ

ನಾಪೋಕ್ಲು: ಪಟ್ಟಣದ ಮೂರು ಮೈದಾನಗಳಲ್ಲಿ ಅಪ್ಪಚೆಟ್ಟೋಳಂಡ ಹಾಕಿ ಉತ್ಸವವು ಮಾರ್ಚ್ 17ರಿಂದ ಆರಂಭಗೊಂಡು ಏಪ್ರಿಲ್ 10 ರವರೆಗೆ 23 ದಿನಗಳ ಕಾಲ ನಡೆಯಲಿದೆ.

‘ಕೌಟುಂಬಿಕ ಹಾಕಿ ಉತ್ಸವಕ್ಕಾಗಿ ಸರ್ಕಾರ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು’ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ನಾಪೋಕ್ಲುವಿನ ಕೊಡವ ಸಮಾಜ ದಲ್ಲಿ ಶನಿವಾರ ಅಪ್ಪಚೆಟ್ಟೋ ಳಂಡ ಕೌಟುಂಬಿಕ ಹಾಕಿ ಉತ್ಸವದ ಮಾಹಿತಿ ಕೈಪಿಡಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘1997ರಲ್ಲಿ ಕೊಡಗಿನಲ್ಲಿ ಹಾಕಿ ಉತ್ಸವ ಆರಂಭವಾಗಿದ್ದು ವಿವಿಧ ಕುಟುಂಬಗಳು ಹಾಕಿ ಉತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿವೆ. ಈ ಹಿಂದಿನ ಕೊಡವ ಹಾಕಿ ಉತ್ಸವಕ್ಕಾಗಿ ಸರ್ಕಾರ ₹ 50 ಲಕ್ಷ ಬಿಡುಗಡೆ ಮಾಡಿತ್ತು. ಇದೀಗ ಸರ್ಕಾರವು ₹ 1ಕೋಟಿ ಅನುದಾನ ಬಿಡುಗಡೆ ಮಾಡಿದೆ. ಗ್ರಾಮೀಣ ಪ್ರದೇಶ ಗಳಲ್ಲಿ ವಿವಿಧ ಜನಾಂಗದವರು ಕ್ರೀಡಾಕೂಟ ಗಳನ್ನು ನಡೆಸುತ್ತಿದ್ದು ಪ್ರತಿಭೆಗ ಳಿಂದ ಸಮಾಜದ ಒಗ್ಗೂಡುವಿಕೆ ಸಾಧ್ಯವಾಗಿದೆ.ಹಾಕಿ ಉತ್ಸವಕ್ಕೆ ಶಾಶ್ವತ ಅನುದಾನ ಸಿಗುವಂತಾಗಬೇಕು’ ಎಂದರು.

ಮಾಜಿ ಒಲಿಂಪಿಯನ್ ಡಾ.ಎ.ಬಿ. ಸುಬ್ಬಯ್ಯ ಮಾತನಾಡಿ, ‘ವಿವಿಧ ರೀತಿಯ ಟೂರ್ನಿಗಳನ್ನು ನಡೆಸುವುದರಿಂದ ಜಿಲ್ಲೆಯ ಮಕ್ಕಳಿಗೆ ಹಾಗೂ ಯುವ ಜನರಿಗೆ ಉತ್ತಮ ಪ್ರೋತ್ಸಾಹ ಸಿಗು ವಂತಾಗಿದೆ. ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ಕ್ರೀಡಾಪಟು ಗಳು ಸಮಾಜದ ಉತ್ತಮ ಪ್ರಜೆಯಾಗಲು ಸಾಧ್ಯ ಕೌಟುಂಬಿಕ ಹಾಕಿ ಉತ್ಸವಗಳಿಂದ ಸ್ಥಳೀಯ ಮಕ್ಕಳಿಗೆ ಅವಕಾಶ ದೊರೆತಂತಾಗುತ್ತದೆ. ನುರಿತ ರಾಷ್ಟ್ರೀಯ ಮಟ್ಟದ ಆಟಗಾರರು ಕೊಡಗಿನಲ್ಲಿ ಹಾಕಿ ಆಡುವುದರಿಂದ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಿಗುತ್ತದೆ’ ಎಂದರು.

ಹಾಕಿ ಉತ್ಸವ ಆಯೋಜನಾ ಸಮಿತಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ‘ಕೊಡವ ಕೌಟುಂಬಿಕ ಹಾಕಿ ಉತ್ಸವ ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾಡ್ಸ್‌ನಲ್ಲಿ ಸ್ಥಾನ ಪಡೆದಿದ್ದು ಈ ಬಾರಿ ಗಿನ್ನೆಸ್ ದಾಖಲೆಗಾಗಿ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ. ಹಾಕಿ ಉತ್ಸವದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕೊಡಗಿನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಆಟಗಾರರನ್ನು, ಹಾಕಿ ಹಾಗೂ ಇತರ ಕ್ರೀಡೆಗಳಲ್ಲಿ ಸಾಧನೆ ಮಾಡಿದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಆಟಗಾರರನ್ನು ಗೌರವಿಸಲಾಗುವುದು’ ಎಂದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ ಹಾಗೂ ಲಾಂಛನವನ್ನು ರಚಿಸಿದ ಸುಳ್ಳಿಮಾಡ ದರ್ಶನ್ ಪೂವಪ್ಪ ಅವರನ್ನು ಸನ್ಮಾನಿಸಲಾಯಿತು. ಒಲಿಂಪಿಯನ್ ಡಾ.ಎ.ಬಿ. ಸುಬ್ಬಯ್ಯ ಹಾಗೂ ಬಾಳೆಯಡ ಕೆ. ಸುಬ್ರಮಣಿ ಮಾಹಿತಿ ಬಿಡುಗಡೆ ಮಾಡಿದರು. ಅಪ್ಪಚೆಟ್ಟೋಳಂಡ ಕುಟುಂಬದ ಪಟ್ಟೆದಾರ ಮಿಟ್ಟು ಈರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೊಡವ ಹಾಕಿ ಕೂರ್ಗ್ ಅಸೋಸಿಯೇಷನ್ ಅಧ್ಯಕ್ಷ ರವಿ ಪೆಮ್ಮಯ್ಯ, ಉಪಾಧ್ಯಕ್ಷ ಬಡಕಡ ಧೀನ ಪೂವಯ್ಯ, ನಿರ್ದೇಶಕ ಮಾಳೇಟಿರ ಶ್ರೀನಿವಾಸ್, ಕೊಡವ ಹಾಕಿ ಅಸೋಸಿಯೇಷನ್‌ನ ಪಳಂಗಂಡ ಲವ, ಮುಂದಿನ ಹಾಕಿ ಉತ್ಸವದ ಆಯೋಜನಾ ಸಮಿತಿ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಉಪಸ್ಥಿತರಿದ್ದರು.

ಪ್ರತಿನಿತ್ಯ ನಡೆಯಲಿವೆ 24 ಪಂದ್ಯಗಳು

‘ನಾಪೋಕ್ಲುವಿನಲ್ಲಿ ಅಪ್ಪಚೆಟ್ಟೋಳಂಡ ಹಾಕಿ ಉತ್ಸವವು ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ಪ್ರತಿದಿನ 24 ಪಂದ್ಯಗಳು ಮೂರು ಮೈದಾನಗಳಲ್ಲಿ ನಡೆಯಲಿದೆ. 2018 ರಲ್ಲಿ 230 ತಂಡಗಳು ಪಾಲ್ಗೊಂಡಿದ್ದು, ಈ ಬಾರಿ 350 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದೆ’ ಎಂದು ಹಾಕಿ ಉತ್ಸವ ಆಯೋಜನಾ ಸಮಿತಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT