ಮಂಗಳವಾರ, ಜನವರಿ 28, 2020
29 °C
‘ಅನಧಿಕೃತ ಹೋಮ್‌ ಸ್ಟೇಗಳಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಧಕ್ಕೆ’: ಚೆಯ್ಯಂಡ ಸತ್ಯ

‘ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸೋದ್ಯಮ ಪಾಲುದಾರರಿಗೆ ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತೆ ಮಹತ್ವದ ಕುರಿತ ಕಾರ್ಯಾಗಾರವು ನಗರದ ಹೊಟೇಲ್ ಮಯೂರ ವ್ಯಾಲಿ ವ್ಯೂ ಸಭಾಂಗಣದಲ್ಲಿ ಗುರುವಾರ ನಡೆಯಿತು.

ನಗರಸಭೆ ಆಯುಕ್ತ ರಮೇಶ್ ಮಾತನಾಡಿ, ’ಮುಂದಿನ ಪೀಳಿಗೆಗೆ ಪ್ರವಾಸಿ ಸ್ಥಳಗಳು ಹಾಗೂ ಪವಿತ್ರ ಯಾತ್ರ ಸ್ಥಳಗಳನ್ನು ರಕ್ಷಣೆಯೊಂದಿಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.

ನಗರಸಭೆ ವತಿಯಿಂದ ಸ್ವಚ್ಛ ಭಾರತ್ ಯೋಜನೆ ಅಡಿ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಇನ್ನು ಹೆಚ್ಚಿನ ಯಶಸ್ಸು ಸಾಧಿಸಬೇಕಿದ್ದು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಹಸಿಕಸ, ಒಣಕಸ ಪ್ರತ್ಯೇಕಿಸಿ ಸಾರ್ವಜನಿಕರು ತ್ಯಾಜ್ಯ ನಿರ್ವಹಣೆಗೆ ಸಂಪೂರ್ಣವಾಗಿ ಕೈಜೋಡಿಸಬೇಕು. ಸ್ವಯಂ ಪ್ರೇರಣೆಯಿಂದ ನಗರದ ಸ್ವಚ್ಛತೆಗೆ ಹಾಗೂ ಪ್ರವಾಸಿ ಸ್ಥಳಗಳ ಸ್ವಚ್ಛತೆಗೆ ಮುನ್ನುಡಿ ಬರೆಯಬೇಕು ಎಂದೂ ಅವರು ತಿಳಿಸಿದರು.

ಹೋಮ್‌ಸ್ಟೇ ಅಸೋಸಿಯೇಷನ್‌ನ ಅಧ್ಯಕ್ಷ ಅನಂತಶಯನ ಮಾತನಾಡಿ, ‘ಸ್ವಚ್ಛ ಭಾರತ್ ಯೋಜನೆಯು ಒಂದು ಅದ್ಭುತ ಯೋಜನೆ. ಯುವಜನರು ಇದರ ಅನುಷ್ಠಾನದ ಬಗ್ಗೆ ಸಂಪೂರ್ಣ ಕಾರ್ಯ ಪ್ರವೃತರಾಗಬೇಕು’ ಎಂದು ತಿಳಿಸಿದರು.

ಮಡಿಕೇರಿ ನಗರದ ಕಸ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರಸಭೆ ಆಯುಕ್ತರಿಗೆ ಮನವಿ ಮಾಡಿದರು.

ಕೊಡಗು ಟ್ರಾವೆಲ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಚೆಯ್ಯಂಡ ಸತ್ಯ ಮಾತನಾಡಿ, ಜಿಲ್ಲೆಯಲ್ಲಿ ಅನಧಿಕೃತ ಪ್ರವಾಸೋದ್ಯಮದಿಂದ ಮಡಿಕೇರಿಯ ಸ್ವಚ್ಛತೆಗೆ ಧಕ್ಕೆ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಸ್ವಚ್ಛ ಭಾರತ್ ಸ್ವಚ್ಛ ಪರ್ಯಟನ್ ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ದೀಪಿಕಾ ಮಾತನಾಡಿ, ಸ್ವಚ್ಛತೆಗೆ ಅತ್ಯಂತ ಮಹತ್ವದ ಪಾತ್ರವಿದ್ದು, ಪ್ರತಿಯೊಬ್ಬರು ಇದನ್ನು ಅರಿಯಬೇಕು. ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡದಿದ್ದಲ್ಲಿ ಪ್ರವಾಸೋದ್ಯಮ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ, ಯುವಜನತೆ ಪ್ರವಾಸಿ ಸ್ಥಳಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಸ್ವಚ್ಛ ಭಾರತ್ ಸ್ವಚ್ಛ ಪರ್ಯಟನ್ ಕಾರ್ಯಕ್ರಮದ ಅಡಿ ದೇಶದಾದ್ಯಂತ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಸ್ಥಳೀಯರು ತಮ್ಮ ವ್ಯಾಪ್ತಿಯ ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಪ್ರವಾಸಿ ಸ್ಥಳಗಳನ್ನು ಸಂರಕ್ಷಿಸಬೇಕು ಎಂದು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ, ಹೋಮ್‌ಸ್ಟೆ ಅಸೋಸಿಯೇಷನ್‌ನ ಮೋಂತಿ ಗಣೇಶ್, ಪ್ರವಾಸೋದ್ಯಮ ಇಲಾಖೆ ಚೇತನ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು