ಮಂಗಳವಾರ, ಫೆಬ್ರವರಿ 7, 2023
26 °C
ಸಶಸ್ತ್ರದೊಂದಿಗೆ ಸದ್ಯದಲ್ಲೇ ಕಾರ್ಯಪ್ರವೃತ್ತವಾಗಲಿರುವ ಡಿಸಿಎಫ್ ನೇತೃತ್ವದ ಪಡೆ

ಕಾಡುತ್ತಿರುವ ಕಾಡಾನೆ | ಆನೆ–ಮಾನವ ಸಂಘರ್ಷಕ್ಕೆ ಕಡಿವಾಣ ಎಂದು?

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

ಮಡಿಕೇರಿ: ಆನೆ ಹಾವಳಿ ತಡೆಯಲು ಸರ್ಕಾರ ಇತ್ತೀಚೆಗಷ್ಟೇ ಕಾರ್ಯಪಡೆ ರಚಿಸಿದೆ. ಈ ಕಾರ್ಯಪಡೆಯಿಂದ ಕಾಡಾನೆ– ಮಾನವ ಸಂಘರ್ಷಕ್ಕೆ ಕಡಿವಾಣ ಬೀಳುವುದೇ ಎಂಬ ಪ್ರಶ್ನೆಯೂ ಮೂಡಿದೆ.

ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಆನೆ ಕಾರ್ಯಪಡೆಗಳನ್ನು ರಚಿಸಿ ಅರಣ್ಯ ಮತ್ತು ಪರಿಸರ ಇಲಾಖೆ ಕಳೆದ ಸೋಮವಾರವಷ್ಟೇ ಆದೇಶ ಹೊರಡಿಸಿದೆ. ಆದೇಶ ಹೊರಬೀಳುತ್ತಿದ್ದಂತೆ ಅರಣ್ಯ ಇಲಾಖೆಯು ಕಾರ್ಯಪಡೆ ರಚನೆಗೆ ಬೇಕಾದ ಸಿದ್ಧತೆಗಳನ್ನು ಆರಂಭಿಸಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ಈ ಕಾರ್ಯಪಡೆಯಲ್ಲಿ ಒಬ್ಬರು ವಲಯ ಅರಣ್ಯಾಧಿಕಾರಿ, ನಾಲ್ವರು ಉಪವಲಯ ಅರಣ್ಯಾಧಿಕಾರಿಗಳು, 8 ಮಂದಿ ಅರಣ್ಯ ರಕ್ಷಕರು ಹಾಗೂ 32 ಹೊರಗುತ್ತಿಗೆ ಸಿಬ್ಬಂದಿ ಇರಲಿದ್ದಾರೆ. ಮೂರು ಬೊಲೆರೋ ಜೀಪ್‌ ಹಾಗೂ ಬಾಡಿಗೆ ಆಧಾರದಲ್ಲಿ ಪಡೆದ ಎರಡು ಕ್ಯಾಂಟರ್‌ ವಾಹನಗಳನ್ನು ಒದಗಿಸಲಾಗುತ್ತಿದೆ.

ಮಡಿಕೇರಿಯಲ್ಲಿ ಕೇಂದ್ರ ಸ್ಥಾನವಿದ್ದು, ಕಾರ್ಯಪಡೆಗಳಿಗೆ ಬೇಕಾದ ವಾಕಿಟಾಕಿ, ಬಂದೂಕು, ಪಟಾಕಿ ಮತ್ತಿತರ ಸಲಕರಣೆಗಳನ್ನೂ ನೀಡಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಆನೆ ದಾಳಿ ಕುರಿತಾದ ದೂರುಗಳನ್ನು ಈ ಕಾರ್ಯಪಡೆಯೇ ನೋಡಿಕೊಳ್ಳಲಿದೆ.

ಆನೆ ಹಿಡಿಯುವುದು, ಓಡಿಸುವುದು ಸೇರಿದಂತೆ ಆನೆ ದಾಳಿ ತಡೆಗೆ ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ಈ ಕಾರ್ಯಪಡೆ ರೂಪಿಸುತ್ತದೆ. ಇಲ್ಲಿಯವರೆಗೂ ಅರಣ್ಯ ಇಲಾಖೆಯ ಅಧಿಕಾರಿಗಳೇ ಈ ಕೆಲಸ ಮಾಡುತ್ತಿದ್ದರು. ಇದರಿಂದ ಇಲಾಖೆಯ ಇನ್ನಿತರ ಕೆಲಸಗಳಿಗೂ ತೊಡಕಾಗುತ್ತಿತ್ತು. ಪ್ರತ್ಯೇಕ ಕಾರ್ಯಪಡೆ ರಚಿಸುವುದರಿಂದ ಆನೆ – ಮಾನವ ಸಂಘರ್ಷಕ್ಕೆ ತ್ವರಿತವಾಗಿ ಸ್ಪಂದಿಸಬಹುದಾಗಿದೆ.

ಕಾರ್ಯಪಡೆಯ ತಂಡವು ಆನೆ ಹಾವಳಿ ಇರುವ ಪ್ರದೇಶಗಳಲ್ಲಿ ಸದಾ ಕಾಲ ಗಸ್ತು ತಿರುಗಬೇಕಿದೆ. ಜನವಸತಿ ಪ್ರದೇಶ, ಕೃಷಿ ಜಮೀನು ಹಾಗೂ ಕಾಫಿ ಎಸ್ಟೇಟ್‌ಗಳಲ್ಲಿ ಆನೆಗಳ ಚಲನವಲನಗಳನ್ನು ಗುರುತಿಸಬೇಕಿದೆ. ಅವುಗಳನ್ನು ಅರಣ್ಯಕ್ಕೆ ಓಡಿಸಬೇಕಿದೆ. ಜತೆಗೆ, ಕಾಡಾನೆ ಹಾವಳಿ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ, ಅವರನ್ನು ಸಂಭಾವ್ಯ ಆನೆ ದಾಳಿಯಿಂದ ಪಾರು ಮಾಡಬೇಕಿದೆ.

ಆನೆಗಳನ್ನು ಸೆರೆ ಹಿಡಿಯಲು ಆಗ್ರಹ
ಪದೇ ಪದೇ ದಾಳಿ ನಡೆಸುವ ಕಾಡಾನೆಗಳನ್ನು ಹಾಗೂ ತೋಟಗಳಲ್ಲೇ ಉಳಿದಿರುವ ಆನೆಗಳನ್ನು ಸೆರೆ ಹಿಡಿಯಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಸರ್ಕಾರ ಇದಕ್ಕಾಗಿಯೇ ಒಂದಿಷ್ಟು ಹಣ ಮೀಸಲಿಡಬೇಕು. ಆನೆ ದಾಳಿಗೆ ನೀಡುವ ಪರಿಹಾರವನ್ನು ನೋಡಿದರೆ ಒಮ್ಮೆಗೆ ಆನೆಗಳನ್ನೆಲ್ಲ ಸೆರೆ ಹಿಡಿಯುವುದು ಸೂಕ್ತ. ಆದರೆ, ಸರ್ಕಾರ ಈ ಕುರಿತು ಇನ್ನೂ ನಿರ್ಧರಿಸಿಲ್ಲ.

47 ಮಂದಿಯ ತಂಡ ರಚನೆ; ಸಿಸಿಎಫ್‌
‘ಡಿಸಿಎಫ್‌ ಪೂವಯ್ಯ ನೇತೃತ್ವದಲ್ಲಿ 47 ಮಂದಿಯ ಕಾರ್ಯಪಡೆಯನ್ನು ರಚಿಸಲಾಗಿದೆ. ವಿರಾಜಪೇಟೆ, ಸೋಮವಾರಪೇಟೆ ಹಾಗೂ ಮಡಿಕೇರಿಗಳಲ್ಲಿ ಉಪಕೇಂದ್ರ ಗಳನ್ನು ತೆರೆಯಲಾಗುವುದು. 5 ವಾಹನಗಳನ್ನು ಕಾರ್ಯಪಡೆಗೆ ನೀಡಲಾಗುವುದು’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎನ್.ಮೂರ್ತಿ ‘ಪ‍್ರಜಾವಾಣಿ’ಗೆ ತಿಳಿಸಿದರು.

‘ಈಗ 40 ಕ್ಷಿಪ್ರ ಕಾರ್ಯಾಚರಣೆ ಪಡೆಗಳಿದ್ದು, ಹೆಚ್ಚುವರಿಯಾಗಿ 8 ತಂಡಗಳನ್ನು ನಿಯೋಜಿಸಲಾಗುವುದು. ಆಯುಧ ಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳು ಹೆಚ್ಚುವರಿ ಯಾಗಿ ಬರಲಿವೆ. ರೈಲ್ವೆ ಬ್ಯಾರಿಕೇಡ್ ಹಾಗೂ ಸೋಲಾರ್ ಫೆನ್ಸ್ ನಿರ್ಮಾಣ ಕಾರ್ಯವನ್ನು ಚುರುಕು ಗೊಳಿಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು