ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ವನ್ಯಜೀವಿ ಉಪಟಳ ತಡೆಗೆ ಪರಿಣಾಮಕಾರಿ ಕ್ರಮಕ್ಕೆ ಒತ್ತಾಯ

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಡಿಕೇರಿಯಲ್ಲಿ ನಡೆದ ಸಭೆ, ಹಲವು ವಿಷಯತಜ್ಞರು ಭಾಗಿ
Published 13 ಫೆಬ್ರುವರಿ 2024, 15:34 IST
Last Updated 13 ಫೆಬ್ರುವರಿ 2024, 15:34 IST
ಅಕ್ಷರ ಗಾತ್ರ

ಮಡಿಕೇರಿ: ವನ್ಯಜೀವಿ ಉಪಟಳ ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಆಗ್ರಹ ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವ್ಯಕ್ತವಾಯಿತು.

ವಿಷಯತಜ್ಞರು ಕೆಲವು ಸಲಹೆಗಳನ್ನು ನೀಡಿದರು. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹೇಳಿದ ಜಿಲ್ಲಾಧಿಕಾರಿ, ವನ್ಯಪ್ರಾಣಿಗಳ ಉಪಟಳ ತಡೆಯಲು ಅಗತ್ಯ ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಇದಕ್ಕೂ ಮುನ್ನ ಮಾತನಾಡಿದ ನಿವೃತ್ತ ಕರ್ನಲ್ ಸಿ.ಪಿ.ಮುತ್ತಣ್ಣ, ‘ವನ್ಯಜೀವಿಗಳ ಉಪಟಳ ತಡೆಯಲು ಸಾಂಪ್ರದಾಯಿಕ ವಿಧಾನಗಳಿಗಿಂತ ಭಿನ್ನವಾದ ಹಾಗೂ ವೈಜ್ಞಾನಿಕವಾದ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಶೀಘ್ರದಲ್ಲಿ ಕ್ರಿಯಾ ಯೋಜನೆ ರೂಪಿಸಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ನಾಗರಿಕರು ಭಯದಿಂದ ಬದುಕುವಂತಾಗಿದೆ. ಪದೇ ಪದೇ ಗ್ರಾಮಗಳಿಗೆ ಬರುವ ಕಾಡಾನೆಗಳನ್ನು ಸ್ಥಳಾಂತರಿಸಬೇಕು’ ಎಂದು ಸಲಹೆ ನೀಡಿದರು.

‘ಕಂದಕಗಳ ನಿರ್ಮಾಣ, ಆನೆ ಓಡಾಡುವ ಮಾರ್ಗ ಸಂಬಂಧಿಸಿದಂತೆ ಎಸ್‍ಎಂಎಸ್ ಮೂಲಕ ಮಾಹಿತಿ ನೀಡಬೇಕು. ಆನೆ ಕಾರ್ಯಪಡೆ ಮತ್ತು ರ‍್ಯಾಪಿಡ್ ರೆಸ್ಪಾನ್ಸ್ ತಂಡಗಳು ‘ಎಸ್‍ಒಪಿ’ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಿ ಕಾಡಾನೆಯನ್ನು ನಿಯಂತ್ರಿಸಲು ಮುಂದಾಗಬೇಕಿದೆ’ ಎಂದು ಮನವಿ ಮಾಡಿದರು.

ಅಗತ್ಯವಿರುವ ಕಡೆ ಸೋಲಾರ್ ಲೈಟ್‍ಗಳನ್ನು ಅಳವಡಿಸುವುದು. ಹಾಡಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವುದು, ಸೈನ್‍ ಬೋರ್ಡ್ ಮೂಲಕ ಅಗತ್ಯ ಮಾಹಿತಿಯನ್ನು ನೀಡುವುದು ಮತ್ತಿತರ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದರು.

ಮೋಹನ್ ರಾಜ್ ಮಾತನಾಡಿ, ‘ಕಾಡಾನೆಗಳು ದಿನದಲ್ಲಿ ನೂರಾರು ಕಿಲೊ ಮೀಟರ್ ಸಂಚರಿಸುತ್ತಿವೆ. ಈ ಬಗ್ಗೆ ಹೆಚ್ಚಿನ ಗಮನಹರಿಸಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಮುಂದಾಗಬೇಕಿದೆ’ ಎಂದರು.

ಮತ್ತೊಬ್ಬ ಮುಖಂಡರಾದ ಬೋಪಣ್ಣ ಮಾತನಾಡಿ, ‘ವನ್ಯಪ್ರಾಣಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ಬ್ಯಾರಿಕೇಡ್‍ಗಳ ನಿರ್ಮಾಣ ಮಾಡುವುದು ಅತ್ಯಗತ್ಯವಾಗಿದೆ’ ಎಂದು ತಿಳಿಸಿದರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಸಿ.ಜಿ.ಕುಶಾಲಪ್ಪ ಮಾತನಾಡಿ, ‘ಕಾಡಾನೆ ಹಾವಳಿ ತಡೆಯುವಲ್ಲಿ ವಿಶೇಷ ನಿಗಾ ವಹಿಸಬೇಕು’ ಎಂದರು.

ಯಶವಂತ ಕಾಳಪ್ಪ ಮಾತನಾಡಿ, ‘ಕುಟ್ಟಂದಿ ಸೇರಿದಂತೆ ಇತರೆ ಕಡೆಗಳಲ್ಲಿ ಕಾಡಾನೆಯನ್ನು ಓಡಿಸುವ ಸಂದರ್ಭದಲ್ಲಿ ಆನೆಗಳು ಚದುರಿ ಹೋಗುತ್ತಿವೆ. ಇದರಿಂದ ಕಾಡಾನೆಗಳು ತೋಟಗಳಿಗೆ ಹೋಗುವುದು ಹೆಚ್ಚಾಗಿದೆ. ಕಾಡಾನೆ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಗ್ರಾಮಸಭೆ ನಡೆಸಬೇಕು. ಆಕಾಶವಾಣಿ ಮೂಲಕ ಹೆಚ್ಚಿನ ಅರಿವು ಮೂಡಿಸಬೇಕು’ ಎಂದು ಸಲಹೆಗಳನ್ನು ನೀಡಿದರು.

ಬೋಸ್ ಮಾದಪ್ಪ ಮಾತನಾಡಿ, ‘ಕಾಡಂಚಿನಲ್ಲಿರುವ ಗ್ರಾಮದ ಜನರಿಗೆ ಪುನರ್ ವಸತಿ ಕಲ್ಪಿಸಬೇಕು. ವನ್ಯಪ್ರಾಣಿಗಳ ಹಾವಳಿ ತಪ್ಪಿಸಬೇಕು. ಹಾಡಿಗಳಲ್ಲಿ ಇಂದಿಗೂ ಸಹ ಅಂಗನವಾಡಿ, ಶಾಲೆ, ಆಸ್ಪತ್ರೆ ಇಲ್ಲದೆ ಬದುಕು ದೂಡುತ್ತಿದ್ದಾರೆ. ಇವರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕುಶಾಲಪ್ಪ ಮಾತನಾಡಿ, ‘ಕಾಡಾನೆ ಹಾವಳಿಯಿಂದಾಗಿ ಕಾಫಿ ಕೊಯ್ಯಲು ಕಾರ್ಮಿಕರು ಮುಂದೆ ಬರುತ್ತಿಲ್ಲ. ವನ್ಯಪ್ರಾಣಿಗಳನ್ನು ನಿಯಂತ್ರಣ ಮಾಡಿದಾಗ ಮಾತ್ರ ಕಾರ್ಮಿಕರು ಸುರಕ್ಷಿತವಾಗಿ ಕೃಷಿ ಕೆಲಸ ಕೈಗೊಳ್ಳಲು ಸಹಕಾರಿಯಾಗಲಿದೆ’ ಎಂದರು.

ಡಾ.ತಮ್ಮಯ್ಯ, ಕಾರ್ತಿಕ್, ಸಿ.ಪಿ.ಅಯ್ಯಪ್ಪ, ಕೆ.ಎಂ.ನಾಣಯ್ಯ, ಕೃಷ್ಣನ್, ರವಿಚಂಗಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶರಣಬಸಪ್ಪ, ಇತರರು ಕಾಡಾನೆ ಹಾವಳಿ ತಡೆಯುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಲವು ಮಾಹಿತಿ, ಸಲಹೆಗಳನ್ನು ನೀಡಿದರು.

‘ವನ್ಯಪ್ರಾಣಿಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರ ಮಾಹಿತಿ ಪಡೆದ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ವನ್ಯಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗಲಾಗುವುದು. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆಗೆ ಸಮಾಲೋಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಸಮನ್ವಯತೆಯಿಂದ ಕಾರ್ಯನಿರ್ವಹಣೆ;
ಡಿಸಿಎಫ್ ಭಾಸ್ಕರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಮಾತನಾಡಿ ‘ಎಲ್ಲರೂ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ವನ್ಯಜೀವಿ ಉಪಟಳವನ್ನು ತಡೆಯಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು. ಸೋಲಾರ್‌ ಬೇಲಿ ಹಾಗೂ ಬ್ಯಾರಿಕೇಡ್‍ಗಳನ್ನು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಕಾಡಾನೆ ಹಾವಳಿ ತಡೆಯಬಹುದು. ಇದಕ್ಕಾಗಿ ಅಗತ್ಯ ಕ್ರಿಯಾಯೋಜನೆ ತಯಾರಿಸಲಾಗುವುದು ಎಂದರು. ‘ಶನಿವಾರಸಂತೆ ಬೆಂಡೆಬೆಟ್ಟ ಆನೆಕಾಡು ದುಬಾರೆ ಸಿದ್ದಾಪುರ ಮಾಲ್ದಾರೆ ನಾಗರಹೊಳೆ ಈ ವ್ಯಾಪ್ತಿಯಲ್ಲಿ ಹೆಚ್ಚು ಕಾಡಾನೆಗಳು ಸಂಚರಿಸುತ್ತವೆ’ ಎಂದು ಮಾಹಿತಿ ನೀಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಮಾತನಾಡಿ ‘ಆರ್‌ಆರ್‌ಟಿ ಮತ್ತು ‘ಇಟಿಎಫ್’ ಮಧ್ಯೆ ಸಮನ್ವಯತೆಯಿಂದ  ಕಾರ್ಯನಿರ್ವಹಿಸಲು ಮುಂದಾಗಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT