ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಣ್ಣನ್ನು ಕಡೆಗಣಿಸಿದರೆ ಸಮಾಜ ಅಧಃಪತನ: ನ್ಯಾಯಾಧೀಶೆ ಶುಭ

Published 31 ಆಗಸ್ಟ್ 2024, 6:37 IST
Last Updated 31 ಆಗಸ್ಟ್ 2024, 6:37 IST
ಅಕ್ಷರ ಗಾತ್ರ

ಮಡಿಕೇರಿ: ‘ಹೆಣ್ಣನ್ನು ಕಡೆಗಣಿಸಿದಲ್ಲಿ ಸಮಾಜ ಅಧಃಪತನಕ್ಕೆ ಇಳಿಯುತ್ತದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ ಅವರು ಎಚ್ಚರಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಮಡಿಕೇರಿ ರೋಟರಿ, ಕಡಗದಾಳು ಸರ್ಕಾರಿ ಪ್ರೌಢಶಾಲೆ ವತಿಯಿಂದ ಕಡಗದಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಅವರು ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

‘ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಕಡೆಗಣಿಸಿದಲ್ಲಿ ಸಮಾಜ ಅಧಃಪತನಕ್ಕೆ ಹೋಗುತ್ತದೆ. ಆದ್ದರಿಂದ ಪ್ರತಿಯೊಬ್ಬರನ್ನೂ ಗೌರವಿಸಬೇಕು. ಸಮಾನ ಅವಕಾಶಗಳು ಸಿಗಬೇಕು’ ಎಂದು ಅವರು ಪ್ರತಿಪಾದಿಸಿದರು.

‘ಬಾಲ್ಯ ವಿವಾಹವು ಸಾಮಾಜಿಕ ಪಿಡುಗಾಗಿದ್ದು, ಹೆಣ್ಣುಮಕ್ಕಳ ಭವಿಷ್ಯವನ್ನು ಕುಗ್ಗಿಸುತ್ತದೆ’ ಎಂದರು.

‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಆ ನಿಟ್ಟಿನಲ್ಲಿ ಮರ ಗಿಡಗಳನ್ನು ಬೆಳೆಸಿ ಉತ್ತಮ ಪರಿಸರ ಕಾಣಬೇಕು’ ಎಂದರು.

‘ವೃತ್ತಿ ಕೌಶಲ ಬೆಳೆಸಿಕೊಂಡು ಲಭ್ಯವಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಸಾರ್ವಜನಿಕರಿಗೆ ಕಾನೂನಾತ್ಮಕವಾಗಿ ಒಳಿತು ಮಾಡುವ ನಿಟ್ಟಿನಲ್ಲಿ ಸ್ಪಂದಿಸಲಿದೆ’ ಎಂದರು.

ಮಡಿಕೇರಿ ರೋಟರಿ ಅಧ್ಯಕ್ಷರಾದ ಸುದೈ ನಾಣಯ್ಯ ಮಾತನಾಡಿ, ‘ಹಿಂದೆ ಹಲವು ಕಾಡು ಹಣ್ಣುಗಳನ್ನು ನೋಡುತ್ತಿದ್ದೆವು. ಆದರೆ, ಇಂದಿನ ಮಕ್ಕಳಿಗೆ ಕಾಡು ಹಣ್ಣುಗಳ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ಕಾಡು ಹಣ್ಣು ಸೇರಿದಂತೆ ಹಣ್ಣಿನ ಗಿಡಗಳ ಬಗ್ಗೆ ಮಾಹಿತಿ ನೀಡಬೇಕು. ಅಷ್ಟೇ ಅಲ್ಲ, ವಿವಿಧ ರೀತಿಯ ಹಣ್ಣಿನ ಗಿಡಗಳು ಹಾಗೂ ಮರಗಳನ್ನು ಬೆಳೆಯಬೇಕು. ಇದರಿಂದ ಪರಿಸರ ರಕ್ಷಣೆ ಸಾಧ್ಯವಾಗಲಿದೆ’ ಎಂದು ತಿಳಿಸಿದರು.

ಮುಖಂಡರಾದ ಕೆ.ಎಸ್.ತಮ್ಮಯ್ಯ ಮಾತನಾಡಿ, ‘ಜಲಸಿರಿ, ವನಸಿರಿ, ಆರೋಗ್ಯಸಿರಿ ಹಾಗೂ ವಿದ್ಯಾಸಿರಿ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು. ಜೊತೆಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತಾಗಬೇಕು’ ಎಂದರು.

ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಮಾತನಾಡಿ, ‘ಸರ್ಕಾರದ ಎಲ್ಲಾ ಯೋಜನೆಗಳನ್ನು ಉಪಯೋಗಿಸಿಕೊಂಡು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಆ ನಿಟ್ಟಿನಲ್ಲಿ ಹಲವು ಸರ್ಕಾರೇತರ ಸಂಸ್ಥೆಗಳು ಸಹ ಕೈಜೋಡಿಸಿವೆ’ ಎಂದು ಅವರು ಹೇಳಿದರು.

ರೋಟರಿ ಕಾರ್ಯದರ್ಶಿ ಪ್ರಿನ್ಸ್ ಪೊನ್ನಣ್ಣ, ಸದಸ್ಯರಾದ ಪಾರ್ವತಿ, ಮಲ್ಲಿಕಾ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಬಿ.ಎಸ್.ಜಯಪ್ಪ, ಆರತಿ, ಹರ್ಷಿತಾ, ವಿಮಲಾ, ಮುಖಂಡರಾದ ಸುರೇಶ್ ಚಂಗಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT