ಗೋಣಿಕೊಪ್ಪಲು: ಹಾರ್ಮೋನಿಯಂ ಮತ್ತು ಸಂಗೀತದಲ್ಲಿ ಉತ್ತಮ ಸಾಧನೆ ಮಾಡಿದ್ದ ಗೋಣಿಕೊಪ್ಪಲಿನ ವಿ.ಟಿ.ಶ್ರೀನಿವಾಸ್ ಅವರ ಸ್ಮರಣಾರ್ಥ ಬುಧವಾರ ಇಲ್ಲಿನ ಅನುದಾನಿತ ಪ್ರೌಢಶಾಲೆಯಲ್ಲಿ ಸಂಗೀತ ಗಾಯನ ನೆನಪು ಕಾರ್ಯಕ್ರಮ ನಡೆಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಗೀತ ವಿದ್ವಾಂಸರಾದ ಬಾಳೆಲೆಯ ವತ್ಸಲಾ ನಾರಾಯಣ, ಕೆ.ಚಂದ್ರಶೇಖರ್, ಪೊನ್ನಂಪೇಟೆಯ ನಿರ್ಮಲಾ ಬೋಪಣ್ಣ, ವಿರಾಜಪೇಟೆಯ ದಿಲೀಪ್ ಕುಮಾರ್, ಶನಿವಾರಸಂತೆಯ ಗಣೇಶ್ ಅವರು ಸುಶ್ರಾವ್ಯವಾಗಿ ಹಾಡಿ ಅಗಲಿದ ಸಂಗೀತ ಗುರು ವಿ.ಟಿ.ಶ್ರೀನಿವಾಸ ಅವರಿಗೆ ಭಾವಪೂರ್ಣ ನುಡಿನಮನ ಸಲ್ಲಿಸಿದರು.
ಪತ್ರಕರ್ತ ಶ್ರೀಧರ್ ನೆಲ್ಲಿತ್ತಾಯ ಮಾತನಾಡಿ, ‘ಸಂಗೀತ ರಂಗದಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಶ್ರೀನಿವಾಸ ಅವರ ಅಗಲಿಕೆಯಿಂದ ಸಂಗೀತ ಕ್ಷೇತ್ರಕ್ಕೆ ಅನಾಥ ಪ್ರಜ್ಞೆ ಕಾಡುತ್ತಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಸಂಗೀತದ ಮೂಲಕ ಇತರರಿಗೆ ಸಂತೋಷ ಮೂಡಿಸುತ್ತಿದ್ದ ಅವರ ಗುಣ ಮರೆಯಲಾಗದು’ ಎಂದು ಸ್ಮರಿಸಿದರು.
ವೈದ್ಯ ಕಾಳಿಮಾಡ ಶಿವಪ್ಪ ಮಾತನಾಡಿ, ‘ಸಂಗೀತಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದ ಶ್ರೀನಿವಾಸ ಅವರು ತಮ್ಮ ಕುಟುಂಬದ ಕಡೆಗೆ ಹೆಚ್ಚಿನ ಗಮನಹರಿಸಲಿಲ್ಲ. ಸಂಗೀತದ ಮೇಲಿನ ಅಭಿಮಾನದಿಂದ ಸರ್ಕಾರಿ ಹುದ್ದೆಯನ್ನೂ ತ್ಯಜಿಸಿದ್ದರು. ಸಂಗೀತ ಕ್ಷೇತ್ರದಲ್ಲಿ ಅವರು ಅಜಾತ ಶತ್ರುವಾಗಿದ್ದರು’ ಎಂದು ಗುಣಗಾನ ಮಾಡಿದರು.
ಪ್ರೌಢಶಾಲೆಯ ಕಾರ್ಯದರ್ಶಿ ಕುಪ್ಪಂಡ ಗಣೇಶ್ ತಿಮ್ಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್, ಪೊನ್ನಂಪೇಟೆ ತಾಲ್ಲೂಕು ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ಪೊನ್ನಂಪೇಟೆ ಹೋಬಳಿ ಘಟಕದ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸದಸ್ಯರಾದ ವಿ.ಟಿ.ಮಂಜುನಾಥ್, ಗಿರಿಜಾ ಮಂಜುನಾಥ್, ಬಾವಾ ಮಾಲ್ದಾರೆ, ಜಗದೀಶ್ ಜೋಡು ಬೀಟಿ, ಚಂದನ್ ಕಾಮತ್, ಪುರುಷೋತ್ತಮ್, ಟಿ.ಆರ್.ವಿನೋದ್, ಸಂಧ್ಯಾ ಕಾಮತ್, ಶಾಂಭವಿ ಕಾಮತ್, ಚಂದನಾ ಮಂಜುನಾಥ್, ಕೃಷ್ಣ ಚೈತನ್ಯ, ಶಿಕ್ಷಕರಾದ ಟಿ.ಗಿಡ್ಡಯ್ಯ, ಈಶ, ಗಿರೀಶ, ನವೀನ, ರಶ್ಮಿ, ಸಬೀನಾ, ಚಂದನಾ, ಶೀಲಾ ಬೋಪಣ್ಣ ಹಾಜರಿದ್ದರು.
ಸಂಗೀತ ಕ್ಷೇತ್ರಕ್ಕೆ ಅನಾಥ ಪ್ರಜ್ಞೆ: ಸ್ಮರಣೆ ಸಂಗೀತ ಗುರುವನ್ನು ನೆನೆದ ಶಿಷ್ಯರು ‘ಸಂಗೀತಕ್ಕಾಗಿ ಸರ್ಕಾರಿ ಹುದ್ದೆ ತ್ಯಜಿಸಿದ್ದರು’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.