ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಗರದಲ್ಲಿ ಹಿಮಪಾತ: ವಿರಾಜಪೇಟೆ ಯೋಧ ಅಲ್ತಾಫ್ ಅಹಮ್ಮದ್‌ ಹುತಾತ್ಮ

ಕರ್ತವ್ಯದ ವೇಳೆ ದುರ್ಘಟನೆ
Last Updated 23 ಫೆಬ್ರುವರಿ 2022, 14:42 IST
ಅಕ್ಷರ ಗಾತ್ರ

ವಿರಾಜಪೇಟೆ (ಕೊಡಗು ಜಿಲ್ಲೆ): ಜಮ್ಮು–ಕಾಶ್ಮೀರದ ಶ್ರೀನಗರದಲ್ಲಿ ಹಿಮಪಾತದಿಂದ ವಿರಾಜಪೇಟೆಯ ಯೋಧ ಅಲ್ತಾಫ್ ಅಹಮ್ಮದ್‌ (37) ಅವರು ಹುತಾತ್ಮರಾಗಿದ್ದಾರೆ. ಬುಧವಾರ ಬೆಳಿಗ್ಗೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಪಟ್ಟಣದ ಸೇಂಟ್‌ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿ, ಬಳಿಕ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದಿದ್ದರು. ಬಳಿಕ, ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಂಡು ಭಾರತೀಯ ಸೇನೆಗೆ ಆಯ್ಕೆಯಾಗಿದ್ದರು.

ಪಟ್ಟಣದ ಮೀನುಪೇಟೆಯಲ್ಲಿ ವಾಸವಾಗಿದ್ದ ದಿ.ಉಮ್ಮರ್ ಮತ್ತು ಆಶೀಯಾ ದಂಪತಿ ಪುತ್ರ ಅಲ್ತಾಫ್ ಅಹಮ್ಮದ್‌. ಅಲ್ತಾಫ್ ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ಅಲ್ತಾಫ್ ಅಹಮ್ಮದ್‌
ಅಲ್ತಾಫ್ ಅಹಮ್ಮದ್‌

ಪತ್ನಿ ಹಾಗೂ ಮಕ್ಕಳು ಕೇರಳದ ಮಟ್ಟನೂರಿನಲ್ಲಿ ಅಲ್ತಾಫ್ ಅಹಮದ್ ಅವರ ಸಹೋದರಿಯೊಂದಿಗೆ ನೆಲೆಸಿದ್ದರೆ, ತಾಯಿ ಆಶೀಯಾ ಅವರು ಚೆನ್ನಯ್ಯನಕೋಟೆಯಲ್ಲಿ ವಾಸಿಸುತ್ತಿದ್ದಾರೆ. ಬುಧವಾರ ಬೆಳಿಗ್ಗೆ ಕರ್ತವ್ಯಕ್ಕೆ ತೆರಳುವ ಮೊದಲು ಅಲ್ತಾಫ್ ಅವರು ತಾಯಿಗೆ ವಿಡಿಯೊ ಕರೆ ಮಾಡಿ ಮಾತನಾಡಿದ್ದರು.

ಹುತಾತ್ಮ ಯೋಧನ ಮೃತದೇಹ ಶುಕ್ರವಾರ ಜಿಲ್ಲೆಗೆ ಆಗಮಿಸುವ ನಿರೀಕ್ಷೆಯಿದೆ. ವಿರಾಜಪೇಟೆ ಪಟ್ಟಣದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿದೆ.

‘ಅಲ್ತಾಫ್ ಅಹಮದ್ ಅವರು ದೇಶ ಸೇವೆಯ ಕನಸು ಬಾಲ್ಯದಿಂದಲೇ ಕಂಡಿದ್ದರು. ಈ ಉದ್ದೇಶದಿಂದಲೇ ಶಾಲಾ ದಿನಗಳಲ್ಲಿ ಎನ್‌ಸಿಸಿಯಲ್ಲಿ ಇದ್ದರು’ ಎಂದು ಅವರ ಶಾಲಾ ಸಹಪಾಠಿ ಪಟ್ಟಣ ಪಂಚಾಯಿತಿ ಸದಸ್ಯ ಆಗಸ್ಟಿನ್ ಬೆನ್ನಿ ತಿಳಿಸಿದ್ದಾರೆ.

ದೇಶಪ್ರೇಮದ ಧ್ವನಿಮುದ್ರಿಕೆ ವೈರಲ್‌

ಹುತಾತ್ಮ ಯೋಧ ಅಲ್ತಾಫ್ ಅಹಮ್ಮದ್ ಅವರು ಫೆ.14ರಂದು ಕಳುಹಿಸಿದ್ದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಗ ಹಂಚಿಕೆಯಾಗುತ್ತಿದೆ.

‘ದೇಶದ ಬಗ್ಗೆಯು ಕೊಂಚ ಕಾಳಜಿ ವಹಿಸಿ. ಎಷ್ಟೋ ಯೋಧರು ನಿಮ್ಮ ಒಳಿತಿಗಾಗಿ, ದೇಶಕ್ಕಾಗಿ ಬಲಿದಾನವನ್ನು ಮಾಡುತ್ತಿದ್ದಾರೆ. ಅವರ ತ್ಯಾಗವನ್ನು ವ್ಯರ್ಥವಾಗಲು ಬಿಡಬೇಡಿ, ಜಾತಿ-ಧರ್ಮದ ಹೆಸರಿನಲ್ಲಿ ಗಲಾಟೆ ಮಾಡಿಕೊಳ್ಳಬೇಡಿ. ಹಿಜಾಬ್- ಕೇಸರಿ ಎಂದು ಹೊಡೆದಾಡದಿರಿ. ಇಂಥದ್ದನ್ನು ನೋಡುವಾಗ ನಮಗಿಲ್ಲಿ ತುಂಬಾ ನೋವಾಗುತ್ತದೆ. ನಾವೆಲ್ಲ ಭಾರತ ಮಾತೆಯ ಮಕ್ಕಳು ಎನ್ನುವ ಭಾವನೆಯಿಂದ ನಾವಿಲ್ಲಿ ಕರ್ತವ್ಯ ನಿರ್ವಹಿಸುತ್ತೇವೆ. ನಿಮ್ಮಲ್ಲಿ ನಿಜವಾದ ದೇಶಪ್ರೇಮವಿದ್ದರೆ, ದಯವಿಟ್ಟು ನಿಮ್ಮ ಮಕ್ಕಳಲ್ಲೂ ದೇಶಪ್ರೇಮವನ್ನು ಬೆಳೆಸಿ ಉತ್ತಮ ಭವಿಷ್ಯದ ದಾರಿಯನ್ನು ತೋರಿಸಿ’ ಎಂದು ಮನವಿ ಮಾಡಿದ್ದ ಆಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT