ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನದಿ ಸೇತುವೆಗೆ ಆಟೋಮೆಟಿಕ್ ವಾಟರ್ ಗೇಜ್ ಅಳವಡಿಕೆ: ಕಾಮಗಾರಿ ಪೂರ್ಣ

Published 9 ನವೆಂಬರ್ 2023, 6:03 IST
Last Updated 9 ನವೆಂಬರ್ 2023, 6:03 IST
ಅಕ್ಷರ ಗಾತ್ರ

ಕುಶಾಲನಗರ: ಇಲ್ಲಿನ ಕಾವೇರಿ ನದಿ ಹರಿಯುವ ಮಾರ್ಗ ಮಧ್ಯೆ ಕುಶಾಲನಗರ -ಕೊಪ್ಪ ಸೇತುವೆಗೆ ₹ 30 ಲಕ್ಷ ವೆಚ್ಚದಲ್ಲಿ ಸ್ವಯಂಚಾಲಿತ ವಾಟರ್ ಗೇಜ್‌ನ್ನು ಅಳವಡಿಸಲಾಗಿದೆ. ಇದರ ಮೂಲಕ ನೀರಿನ ಆಳ ಹಾಗೂ ಹರಿಯುವ ಪ್ರಮಾಣದ ಮೇಲೆ ಕೇಂದ್ರ ಜಲ ಆಯೋಗ ಕಣ್ಗಾವಲು ಇರಿಸಲು ಸಾಧ್ಯವಾಗಲಿದೆ.

ಪ್ರವಾಹ ಸೇರಿದಂತೆ ನದಿಯ ನೀರಿನ ಹರಿವಿನ ಪ್ರಮಾಣವನ್ನು ಸ್ವಯಂಚಾಲಿತವಾಗಿ ಈ ಉಪಕರಣ ದಾಖಲಿಸುತ್ತದೆ. ಜತೆಗೆ, ಶೀಘ್ರವಾಗಿ ಮಾಹಿತಿಯನ್ನು ರವಾನಿಸುತ್ತದೆ. ಈ ನಿಟ್ಟಿನಲ್ಲಿ ಸೇತುವೆಯ ಮೇಲ್ಭಾಗದಲ್ಲಿ ಕೇಂದ್ರ ಜಲಸಂಪನ್ಮೂಲ ಇಲಾಖೆಯಿಂದ ನದಿ ಜಲಮಾಪಕ ಕೇಂದ್ರ ಸ್ಥಾಪಿಸಲಾಗಿದೆ.

ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ನೀರು ಹಂಚಿಕೆ ವಿವಾದ ಕಳೆದ ಅನೇಕ ವರ್ಷಗಳಿಂದ ಬಗೆಹರಿಯದ ಸಮಸ್ಯೆಯಾಗಿ ಕಾಡುತ್ತಿದ್ದು. ಕೇಂದ್ರ ಜಲ ಆಯೋಗದ ನಿರ್ದೇಶನದ ಮೇರೆಗೆ ಈ ಹಿಂದೆ ಹಾರಂಗಿ ಅಣೆಕಟ್ಟೆಗೂ ಕೂಡ ಟೆಲಿಮೆಟ್ರಿಕ್ ವಾಟರ್ ಗೇಜ್ ಅಳವಡಿಸಲಾಗಿದೆ. ಜಲಾಶಯದ ನೀರಿನ ಸಂಗ್ರಹ ಪ್ರಮಾಣ, ಒಳಹರಿವು ಮತ್ತು ಹೊರ ಹರಿವಿನ ಪ್ರಮಾಣ ಸೇರಿದಂತೆ ಕ್ಷಣ ಕ್ಷಣದ ಮಾಹಿತಿಯನ್ನು ಆಯೋಗಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ಕಾವೇರಿ ನದಿಯ ಸ್ಥಿತಿಗತಿ ಜೊತೆಗೆ ಮಳೆಯ ಪ್ರಮಾಣ, ಹವಾಮಾನ ವರದಿ, ಮಳೆ ಎಷ್ಟು ಬೀಳಬಹುದು ಎನ್ನುವ ಮುನ್ಸೂಚನೆ ಪಡೆದುಕೊಳ್ಳಲೂ ಈ ವ್ಯವಸ್ಥೆ ಸಹಕಾರಿಯಾಗಿದೆ.

ನೀರಾವರಿ ಇಲಾಖೆ ಅಣೆಕಟ್ಟೆ ವಿಭಾಗದ ಅಧಿಕಾರಿಗಳು ಜಲಾಶಯಗಳ ನೀರಿನ ಪ್ರಮಾಣ ಕುರಿತು ಅಳತೆ ಮಾಡಿ ಲಿಖಿತವಾಗಿ ಮೇಲಧಿಕಾರಿಗಳಿಗೆ ಕಳುಹಿಸುವ ವ್ಯವಸ್ಥೆ ಇತ್ತು. ಇದೀಗ ನೂತನ ಯಂತ್ರೋಪಕರಣ ಅಳವಡಿಸಿರುವುದರಿಂದ ಕ್ಷಣ ಕ್ಷಣದ ಎಲ್ಲಾ ಮಾಹಿತಿಯೂ ನೇರವಾಗಿ ಆಯೋಗಕ್ಕೆ ತಲುಪುತ್ತದೆ.

ಸ್ವಯಂಚಾಲಿತ ಉಪಕರಣ: ಈ ಯಂತ್ರದಿಂದ ನದಿಯ ನೀರಿನ ಮಟ್ಟ, ಏರಿಕೆ, ಇಳಿಕೆ, ಹರಿವು ಸಂಬಂಧಿಸಿದ ಅಂಕಿ ಅಂಶಗಳು ಸೇರಿದಂತೆ ಎಲ್ಲಾ ಬಗೆಯ ಮಾಹಿತಿ ಉಪಗ್ರಹದ ಮೂಲಕ ಕೇಂದ್ರ ಜಲ ಆಯೋಗದ ಬೆಂಗಳೂರು ಮತ್ತು ದೆಹಲಿಯ ಕಚೇರಿಗಳಿಗೆ ನೇರವಾಗಿ ರವಾನೆ ಆಗುತ್ತದೆ. ಈ ಎಲ್ಲಾ ಮಾಹಿತಿಗಳು ಸ್ಥಳೀಯ ಅಧಿಕಾರಿಗಳಿಗೆ ಸಿಗುವುದಿಲ್ಲ.

ಕುಶಾಲನಗರದ ಕಾವೇರಿ ನದಿ ಸೇತುವೆಗೆ ಜಲ ಸಂಪನ್ಮೂಲ ಇಲಾಖೆ ವತಿಯಿಂದ ಆಟೋಮೆಟಿಕ್ ವಾಟರ್ ಗೇಜ್ ಅಳವಡಿಸಲಾಗಿದೆ.
ಕುಶಾಲನಗರದ ಕಾವೇರಿ ನದಿ ಸೇತುವೆಗೆ ಜಲ ಸಂಪನ್ಮೂಲ ಇಲಾಖೆ ವತಿಯಿಂದ ಆಟೋಮೆಟಿಕ್ ವಾಟರ್ ಗೇಜ್ ಅಳವಡಿಸಲಾಗಿದೆ.

‘ಈ ಕೇಂದ್ರ ಕಾರ್ಯಚರಣೆ ನಡೆಸಲು ಸೋಲಾರ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ತಂತ್ರಜ್ಞಾನದ ಕೇಂದ್ರದ ಕಾಮಗಾರಿ ಸಂಪೂರ್ಣಗೊಂಡಿದ್ದು ಕೆಲವೇ ದಿನಗಳಲ್ಲಿ ಕಾರ್ಯ ಆರಂಭ ಗೊಳಿಸಲಿದೆ’ ಎಂದು ಜಲಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಇದುವರೆಗೆ ನದಿ ನೀರಿನ ಹರಿವಿನ ಪ್ರಮಾಣವನ್ನು ಮಾನವ ಸಂಪನ್ಮೂಲ ಬಳಸಿ ಸಂಗ್ರಹಿಸಲಾಗುತ್ತಿತ್ತು. ಇದೀಗ ಸಂಪೂರ್ಣವಾಗಿ ಸ್ವಯಂಚಾಲಿತವಾಗಿ ಹರಿವಿನ ಪ್ರಮಾಣವನ್ನು ಪಡೆಯುವ ವ್ಯವಸ್ಥೆ ಹೊಂದಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT