ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಮುರಿಯ ಅಗಸ್ತ್ಯೇಶ್ವರ ದೇವಾಲಯದಲ್ಲಿ ವಾರ್ಷಿಕ ಉತ್ಸವ

Last Updated 11 ಮಾರ್ಚ್ 2020, 19:35 IST
ಅಕ್ಷರ ಗಾತ್ರ

ನಾಪೋಕ್ಲು: ಕಾವೇರಿ ತೀರದ ಪವಿತ್ರಯಾತ್ರಾ ಸ್ಥಳವಾದ ಬಲಮುರಿಯ ಅಗಸ್ತ್ಯೇಶ್ವರ ದೇವಾಲಯದಲ್ಲಿ ವಾರ್ಷಿಕ ಉತ್ಸವ ವಿಜೃಂಭಣೆಯಿಂದ ಜರುಗಿತು. ಮಾರ್ಚ್ 4ರಿಂದ ಆರಂಭಗೊಂಡ ಉತ್ಸವ ಒಂದು ವಾರಗಳ ಕಾಲ ನಡೆಯಿತು. ಸುತ್ತಮುತ್ತಲಿನ ಊರುಗಳ ಭಕ್ತರು ಪಾಲ್ಗೊಂಡಿದ್ದರು.

ಮಂಗಳವಾರ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಎತ್ತುಪೋರಾಟ ನಡೆಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸಾಂಪ್ರದಾಯಿಕ ಆಚರಣೆ ನೆರವೇರಿತು.

ಸಂಜೆ ಕಾವೇರಿ ಹೊಳೆಯಲ್ಲಿ ದೇವರ ಅವಭೃತ ಸ್ನಾನ ನೆರವೇರಿತು. ದೇವಾಲಯದ ಪ್ರಾಂಗಣದಲ್ಲಿ ನಡೆದ ದೇವರ ನೃತ್ಯಬಲಿಯನ್ನು ಅಧಿಕ ಸಂಖ್ಯೆಯ ಭಕ್ತರು ವೀಕ್ಷಿಸಿದರು. ಅರ್ಚಕ ಚಂದ್ರಶೇಖರ ಐತಾಳ್ ಅವರ ನೇತೃತ್ವದಲ್ಲಿ ಪೂಜಾವಿಧಿವಿಧಾನಗಳು ನೆರವೇರಿದವು. ಬುಧವಾರ ಅಜ್ಜಪ್ಪ ಕೋಲ ಹಾಗೂ ಚಾಮುಂಡಿ ಕೋಲಗಳು ಜರುಗಿದವು. ದೇವಾಲಯದಲ್ಲಿ ಜರುಗಿದ ಶುದ್ಧ ಕಳಶದೊಂದಿಗೆ ಉತ್ಸವ ಸಂಪನ್ನಗೊಂಡಿತು.

ಮಹಾವಿಷ್ಣು ದೇವಾಲಯದ ಪುನರ್ ಪ್ರತಿಷ್ಠಾಪನೆ : ಬಲಮುರಿಯಲ್ಲಿ ಕಣ್ವಮುನಿ ಸ್ಥಾಪನೆ ಮಾಡಿದ ದೇವಾಲಯ ಎನ್ನಲಾದ ಮಹಾವಿಷ್ಣು ದೇವಾಲಯದ ಜೀರ್ಣೋಧ್ಧಾರ ಕಾರ್ಯ ಸುಮಾರು ₹40 ಲಕ್ಷ ವೆಚ್ಚದಲ್ಲಿ ನಡೆದಿದ್ದು ದೇವಾಲಯದ ಪುನರ್ ಪ್ರತಿಷ್ಠಾಪನೆ ಏಪ್ರಿಲ್ 1ರಿಂದ 3 ರವರೆಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕೊಂಗೀರಂಡ ಸಾಧು ತಮ್ಮಯ್ಯ ತಿಳಿಸಿದರು. ಏಪ್ರಿಲ್ 3 ರಂದು ಬೆಳಿಗ್ಗೆ 8ಕ್ಕೆ ಪ್ರತಿಷ್ಠಾಪನೆ ನೆರವೇರಲಿದೆ ಎಂದರು.

ತಲಕಾವೇರಿಯಂತೆ ಬಲಮುರಿಯೂ ಕೂಡ ಬಲು ಪಾವಿತ್ರ್ಯದ ಪುಣ್ಯಸ್ಥಳವಾಗಿದ್ದು ಬಲಮುರಿ
ಯಲ್ಲಿರುವ ಕಣ್ಣೇಶ್ವರ ಹಾಗೂ ಅಗಸ್ತ್ಯೇಶ್ವರ ದೇವಾಲಯಗಳಿಗೆ ಕಾವೇರಿ ಪುರಾಣದಷ್ಟೇ ಚಾರಿತ್ರ್ಯ ಹಿನ್ನಲೆ ಇದೆ. ಕಾವೇರಿ ನದಿಯ ಎಡಭಾಗದಲ್ಲಿ ಕಣ್ಣೇಶ್ವರ ಹಾಗೂ ಬಲಭಾಗದಲ್ಲಿ ಅಗಸ್ತ್ಯೇಶ್ವರ ದೇವಾಲಯಗಳಿದ್ದು ಸುಂದರವಾದ ಪರಿಸರದಿಂದ ಕೂಡಿದೆ. ಇದೀಗ ಗ್ರಾಮದ ಜನರ ಸಹಕಾದಿಂದ ಮಹಾವಿಷ್ಣು ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆದಿದ್ದು ಬಲಮುರಿ ಕ್ಷೇತ್ರ ಮತ್ತಷ್ಟು ಪ್ರಸಿದ್ದಿ ಹೊಂದಲಿದೆ ಎಂದು ಅಭಿಪ್ರಾಯ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT