ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಸೀಟ್‌ನ ಮೂಲಸ್ವರೂಪಕ್ಕೆ ಧಕ್ಕೆಯ ಆತಂಕ: ಜೆಸಿಬಿ ಯಂತ್ರದಿಂದ ಕಾಮಗಾರಿ ಸ್ಥಗಿತ

ಮಡಿಕೇರಿ
Last Updated 7 ನವೆಂಬರ್ 2020, 20:00 IST
ಅಕ್ಷರ ಗಾತ್ರ

ಮಡಿಕೇರಿ: ರಾಜಾಸೀಟ್‌ ಉದ್ಯಾನದಲ್ಲಿ ಜೆ.ಸಿ.ಬಿ ಹಾಗೂ ಹಿಟಾಚಿ ಯಂತ್ರಗಳಿಂದ ಕಾಮಗಾರಿ ಮಾಡುವುದನ್ನು ಕೈಬಿಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಜೆಸಿಬಿ ಬಳಸಿ ಕಾಮಗಾರಿ ನಡೆಸಿದ್ದಕ್ಕೆ ಪರಿಸರ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಅವೈಜ್ಞಾನಿಕ ಕಾಮಗಾರಿಯಿಂದ ರಾಜಾಸೀಟ್‌ಗೆ ಧಕ್ಕೆ ಆಗುವ ಆತಂಕವೂ ಎದುರಾಗಿತ್ತು. ಯಂತ್ರಗಳು ಸದ್ದು ಮಾಡಿದ್ದವು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿದ ಕಾಮಗಾರಿ ನಡೆಸುತ್ತಿದ್ದ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಈ ಪ್ರದೇಶದಲ್ಲಿ ಮೂಲ ಸ್ವರೂಪವನ್ನು ಬದಲಾವಣೆ ಮಾಡದೆ ಯಾವುದೇ ಮರ ಗಿಡ ಕಟಾವು ಮಾಡದೆ ಲಭ್ಯವಿರುವ ಸ್ಥಳದಲ್ಲಿ ಸುಂದರವಾಗಿ ಕಾಮಗಾರಿ ಕೈಗೊಳ್ಳಲಾಗುವುದಾಗಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸ್ಪಷ್ಟನೆ ನೀಡಿದ್ದಾರೆ.

ಉಳಿದಂತೆ ಏನೇನು ಕಾಮಗಾರಿ?:ಜಿಲ್ಲೆಯ ರಾಜಾಸೀಟು ಉದ್ಯಾನಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಸಮಗ್ರ ಉದ್ಯಾನಗಳ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ₹ 4.55 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ಆಗಿದ್ದು, ಅದರಲ್ಲಿ ₹ 3.69 ಕೋಟಿ ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಿ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅದರಂತೆ ಲೋಕೋಪಯೋಗಿ ಇಲಾಖೆಯವರು ಅನುಮೋದಿತ ಅಂದಾಜು ಪಟ್ಟಿಯಂತೆ ಕಾಮಗಾರಿಯನ್ನು ಕೈಗೊಳ್ಳಲು ಟೆಂಡರ್ ಕರೆದು ಅನುಮೋದಿತ ಸಂಸ್ಥೆಗೆ ನೀಡಿದ್ದಾರೆ ಎಂದು ರಾಘವೇಂದ್ರ ವಿವರಣೆ ನೀಡಿದ್ದಾರೆ.

ಕಾಮಗಾರಿಯಲ್ಲಿ ಪೊದೆ ಸಸ್ಯಗಳಾದ (Shrub), ಡ್ರೀಸಿನಾ, ಹೇಮೀಲಿಯಾ, ಕೇಶಿಯಾ, ಟಿಕೋಮಾ, ಸ್ಟೇಫೀಲಿರ ಇತ್ಯಾದಿ 21,300 ಸಸ್ಯಗಳನ್ನು ನಾಟಿ ಮಾಡಲು ಉದ್ದೇಶಿಸಲಾಗಿದೆ. ಇಳಿಜಾರು ಪ್ರದೇಶದಲ್ಲಿ ಮಣ್ಣಿನ ಸವಕಳಿಯನ್ನು ತಡೆಗಟ್ಟಲು ನೆಲದಲ್ಲಿ ಹಬ್ಬುವ ಹಾಗೂ ಬಳ್ಳಿಗಳ ಜಾತಿಯ ಗಿಡಗಳಾದ ಲಂಟನಾ, ವರ್ಬಿನಾ, ಗಜೇನಿಯಾ, ಬೋಗನ್‍ವಿಲ್ಲಾ, ಸೈಡರ್‌ನಲ್ಲಿ ಇತ್ಯಾದಿ 25,000 ಸಂಖ್ಯೆಯ ಗಿಡಗಳನ್ನು ನಾಟಿ ಮಾಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಉದ್ದೇಶಿತ ಉದ್ಯಾನದಲ್ಲಿ ಹೂವಿನ ಮರಗಳಾದ ಅಶೋಕ, ಸಂಪಿಗೆ, ಪ್ಲೋಮೀರಿಯಾ, ತಬೋಬಿಯಾ, ಸ್ಪೇತೋಡಿಯಾ, ಲಗೋಸ್ಟ್ರೀಮಿಯಾ ಇತ್ಯಾದಿ 1,265 ಮರಗಳನ್ನು ನಾಟಿ ಮಾಡಲು ಉದ್ದೇಶಿಸಲಾಗಿದೆ. ಉದ್ಯಾನದಲ್ಲಿ 17,222 ಚ.ಅಡಿ ವಿಸ್ತೀರ್ಣದಲ್ಲಿ ಸ್ಥಳೀಯ ಹವಾಗುಣಕ್ಕೆ ಹೊಂದಿಕೊಳ್ಳುವ ಬರ್ಮುಡಾ, ಕೆಂಟುಕಿ ಬ್ಲೂ, ಸೈಟೋಪೋರಮ್ ಇತ್ಯಾದಿ ಹುಲ್ಲು ಹಾಸು (ಲಾನ್) ಮಾಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಉದ್ಯಾನದ ಸುತ್ತಲೂ ಅಂದಾಜು 1.350 ಕಿ.ಮೀಗಳ ಉದ್ದದ ಪಾಥ್ ವೇ, ನಡೆದಾಡುವ ರಸ್ತೆಯನ್ನು ಸಾದರಳ್ಳಿ, ಶಿರಾ, ಕೋಬಲ್ ಕಲ್ಲುಗಳಿಂದ ನಿರ್ಮಿಸಲಾಗುವುದು. ಪಾಥ್ ವೇಯ ಎರಡು ಬದಿಗಳಲ್ಲಿ ಮಣ್ಣು ಸವಕಳಿಯಾಗದಂತೆ ತಡೆಗೋಡೆ ಹಾಗೂ ರೈಲಿಂಗ್ಸ್ (ರಕ್ಷಣಾತ್ಮಕ ಕಂಬಿಗಳು) ಅಳವಡಿಕೆ ಮಾಡಲಾಗುವುದು. ಉದ್ಯಾನದಲ್ಲಿ ಇಳಿಜಾರಿನಲ್ಲಿ ಮೆಟ್ಟಲುಗಳು ಹಾಗೂ ತಡೆಗೋಡೆಗಳನ್ನು ಎರಡು ಕಡೆ ನಿರ್ಮಿಸಲಾಗುವುದು. ಈಗಾಗಲೇ ಲಭ್ಯವಿರುವ ಉದ್ಯಾನದ ಎತ್ತರದ ಗುಡ್ಡದಲ್ಲಿ ಮೂಲ ಸ್ವರೂಪಗಳಿಗೆ ಧಕ್ಕೆಯಾಗದಂತೆ ಎರಡು ವೀಕ್ಷಣಾ ಗೋಪುರಗಳನ್ನು ಹಾಗೂ ಮಳೆ– ಬಿಸಿಲಿನಲ್ಲಿ ವಿಶ್ರಾಂತಿಗಾಗಿ ಮೂರು ಅಲಂಕಾರಿಕ ಮಂಟಪಗಳನ್ನು ನಿರ್ಮಿಸಲಾಗುವುದು ಎಂದು ವಿವರಣೆ ನೀಡಿದ್ದಾರೆ.

ಉದ್ಯಾನದ ವಿವಿಧ ಭಾಗಗಳಲ್ಲಿ ಅಲಂಕಾರಿಕ ಹೂವಿನ ಬಳ್ಳಿಗಳನ್ನು ಹಬ್ಬಿಸಲು ಕಲ್ಲಿನ ಎಂಟು ಪೆರ್ಗೊಲಾ (Pergola) ನಿರ್ಮಿಸಲಾಗುವುದು. ಉದ್ಯಾನದಲ್ಲಿ ನೈಸರ್ಗಿಕವಾಗಿರುವ ಪ್ರದೇಶದಲ್ಲಿ ಮಕ್ಕಳ ಸಣ್ಣ ಆಟದ ಉದ್ಯಾನವನ್ನು ನಿರ್ಮಿಸಲಾಗುವುದು. ಸಾರ್ವಜನಿಕರ ವಿಶ್ರಾಂತಿಗಾಗಿ 25 ಆಸನಗಳ ವ್ಯವಸ್ಥೆ ಹಾಗೂ ಮರದ ಸುತ್ತಲೂ ಕೂರಲು ಆಸನದ ವ್ಯವಸ್ಥೆ ನಿರ್ಮಿಸಲಾಗುವುದು. ಉದ್ಯಾನದಲ್ಲಿ ಮಕ್ಕಳ ಮನರಂಜನೆಗಾಗಿ ವಿವಿಧ ಪ್ರಾಣಿಗಳ ಕಲಾಕೃತಿಗಳನ್ನು ಹಾಗೂ ಶಿಲ್ಪ ಕಲಾಕೃತಿಗಳನ್ನು ಅಳವಡಿಸಲಾಗುವುದು. ವಿವಿಧ ಅಲಂಕಾರಿಕ ಹೂವಿನ ಕುಂಡಗಳು, ಕಸದ ಬುಟ್ಟಿ, ಸೂಚನಾ ಫಲಕಗಳು, ಪ್ರವಾಸಿ ಮಾಹಿತಿ ಫಲಕ ಇತ್ಯಾದಿಗಳನ್ನು ಅಳವಡಿಸಲಾಗುವುದು. ಉದ್ಯಾವನದಲ್ಲಿ ಅಲಂಕಾರಿಕ ವಿದ್ಯುತ್ ದೀಪ ಅಳವಡಿಕೆ, ನೀರಾವರಿ ಅಳವಡಿಕೆ ಹಾಗೂ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

---

ಉದ್ಯಾನದಲ್ಲಿ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಉದ್ದೇಶಿಸಲಾದ ಎರಡು ಕೃತಕ ಕೆರೆಗಳು ಹಾಗೂ ಮೆಟ್ಟಲು ಸೇತುವೆಗಳನ್ನು ಕೈಬಿಡಲಾಗಿದೆ.
- ರಾಘವೇಂದ್ರ, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT