ಬುಧವಾರ, ಜುಲೈ 28, 2021
23 °C
ನಗರಸಭೆ ವಿರುದ್ಧ ಜೆಡಿಎಸ್‌ ಕಾರ್ಯಕರ್ತರ ಪ್ರತಿಭಟನೆ, ಗುಂಡಿಯಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ

ಕೊಡಗು: ‘ಮಂಜಿನ ನಗರಿ’ ರಸ್ತೆಯಲ್ಲಿ ಗುಂಡಿ ಹಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ನಗರದ ರಸ್ತೆಗಳಲ್ಲಿ ಗುಂಡಿಗಳು ಕಾಣಿಸಿಕೊಳ್ಳುತ್ತಿವೆ. ಗುಂಡಿ ಬಿದ್ದ ರಸ್ತೆಯಲ್ಲಿ ವಾಹನ ಸವಾರು ಮಾಡುವುದೇ ಸವಾಲು ಆಗಿದೆ. ಪಾದಚಾರಿಗಳಿಗೂ ಸಮಸ್ಯೆಯಾಗಿದೆ.

ಗುಂಡಿಗಳಿಂದ ಕೂಡಿರುವ ನಗರದ ರಸ್ತೆಗಳನ್ನು ತಕ್ಷಣ ದುರಸ್ತಿ ಪಡಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್‌ ನಗರ ಘಟಕದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ತೆರಳುವ ರೆಸ್‍ಕೋರ್ಸ್ ರಸ್ತೆಯ ಗುಂಡಿಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಬಾಳೆಗಿಡ ನೆಟ್ಟು ನಗರಸಭೆಯನ್ನು ‘ನರಕಸಭೆ’ ಎಂದು ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

‘ನಗರದ ಮುಖ್ಯ ರಸ್ತೆಗಳು ಹೊಂಡ ಗುಂಡಿಗಳಿಂದ ಕೂಡಿದ್ದು, ಕೆರೆಗಳಂತಾಗಿವೆ. ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಂಚರಿಸಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಆಪಾದಿಸಿದರು.

ಲಾಕ್‍ಡೌನ್ ಅವಧಿಯಲ್ಲಿ ರಸ್ತೆ ಕಾಮಗಾರಿ ನಡೆಸಲು ಸಾಕಷ್ಟು ಕಾಲಾವಕಾಶವಿತ್ತು. ಅಂತರ ಕಾಯ್ದುಕೊಳ್ಳುವ ಮೂಲಕ ಕಾರ್ಮಿಕರಿಗೆ ಬೇಕಾದ ಸೌಲಭ್ಯವನ್ನು ಕಲ್ಪಿಸಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬಹುದಿತ್ತು. ಆದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಗರದ ರಸ್ತೆಗಳ ಬಗ್ಗೆ ಕಾಳಜಿಯೇ ವಹಿಸುತ್ತಿಲ್ಲ ಎಂದು ಆಪಾದನೆ ಮಾಡಿದರು.

ಅಲ್ಪಸಂಖ್ಯಾತರ ಘಟಕದ ನಗರ ಅಧ್ಯಕ್ಷ ಕಲೀಲ್ ಭಾಷಾ ಮಾತನಾಡಿ, ಕರ್ನಾಟಕದ ಕಾಶ್ಮೀರವೆಂದೇ ಪ್ರಖ್ಯಾತವಾಗಿರುವ ಈ ಸುಂದರ ಕೊಡಗಿನ ಪ್ರಮುಖ ರಸ್ತೆಗಳೇ ಹದಗೆಟ್ಟಿದ್ದು, ಪ್ರವಾಸಿಗರೆದುರು ತಲೆ ತಗ್ಗಿಸುವಂತ್ತಾಗಿದೆ ಎಂದರು.

ನಗರದ ಕೇಂದ್ರ ಬಿಂದುವಾಗಿದ್ದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ 2018ರಲ್ಲಿ ಗುಡ್ಡ ಕುಸಿದು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಎರಡು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ನಗರದ ಮೀನು ಮಾರುಕಟ್ಟೆಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಸುಖೇಶ್ ಚಂಗಪ್ಪ, ಜಿಲ್ಲಾ ಕಾರ್ಯದರ್ಶಿ ಸುನಿಲ್, ಸಂಘಟನಾ ಕಾರ್ಯದರ್ಶಿ ಬಿ.ಪಿ.ಗಣೇಶ್, ಪ್ರಮುಖ ಕೆ.ಪಿ.ಗಣೇಶ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಬಲ್ಲಚಂಡ ಗೌತಮ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ನಗರ ಮಹಿಳಾ ಅಧ್ಯಕ್ಷೆ ಸುನಂದಾ, ಉಪಾಧ್ಯಕ್ಷೆ ಎನ್.ಸಿ.ಮಮತಾ, ಪ್ರಧಾನ ಕಾರ್ಯದರ್ಶಿ ಜೆಸಿಂತಾ ಶ್ರೀಧರ್, ರಾಜೇಶ್ವರಿ, ಲತಾ, ಬಿ.ಎಲ್.ಮೋಹನ್, ಫಾರುಕ್, ಶರೀನ್, ಪ್ರವೀಣ್ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು