ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಬ್ಯಾಂಕ್ ಆಫ್ ಬರೋಡ ತಂಡಕ್ಕೆ ಪ್ರಶಸ್ತಿ

ಸೋಮವಾರಪೇಟೆ: ರಾಜ್ಯಮಟ್ಟದ ಕಬಡ್ಡಿ ಟೂರ್ನಿ
Last Updated 11 ಫೆಬ್ರುವರಿ 2020, 13:39 IST
ಅಕ್ಷರ ಗಾತ್ರ

ಸೋಮವಾರಪೇಟೆ: ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿ ಬೆಂಗಳೂರಿನ ಬ್ಯಾಂಕ್ ಆಫ್ ಬರೋಡ , ಬೆಂಗಳೂರಿನ ಸಿಟಿ ಟೀಮ್ ವಿರುದ್ಧ 34-26 ಅಂಕಗಳ ಅಂತರಲದಲ್ಲಿ ಮಣಿಸುವ ಮೂಲಕ ಪ್ರಶಸ್ತಿಯೊಂದಿಗೆ ₹1 ಲಕ್ಷ ತನ್ನದಾಗಿಸಿಕೊಂಡಿತು.

ತಾಲ್ಲೂಕು ಒಕ್ಕಲಿಗರ ಯುವ ವೇದಿಕೆ ಮತ್ತು ರಾಜ್ಯ ಹಾಗೂ ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ರೋಚಕ ಫೈನಲ್ ಪಂದ್ಯದಲ್ಲಿ ಬಲಿಷ್ಠ ತಂಡ ಬೆಂಗಳೂರು ಸಿಟಿ ಟೀಮ್ ವಿರುದ್ಧ ಉತ್ತಮವಾಗಿ ಆಡುವ ಮೂಲಕ ಗೆಲವು ಸಾಧಿಸಿತು. ರನ್ನರ್ ಅಫ್ ತಂಡ ₹60 ಸಾವಿರ ನಗದು ಹಾಗೂ ಟ್ರೋಫಿಯನ್ನು ಪಡೆಯಿತು. ಎಸ್.ಡಿ.ಎಂ. ಉಜಿರೆ ತಂಡ ತೃತೀಯ, ಬೆಂಗಳೂರಿನ ಕಸ್ಟಮ್ಸ್ ಮತ್ತು ಜಿ.ಎಸ್.ಟಿ. ತಂಡ ಚತುರ್ಥ ಬಹುಮಾನ ಪಡೆಯಿತು.

ಬ್ಯಾಂಕ್ ಆಫ್ ಬರೋಡ ತಂಡದಲ್ಲಿ ರತನ್ ಕೂತಿ, ಪ್ರಶಾಂತ್ ರೈ, ಸುಖೇಶ್ ಹೆಗ್ಗಡೆ, ಸಚಿನ್ ಸುವರ್ಣ, ಸುನಿಲ್ ಗಮನ ಸೆಳೆದರು. ಬೆಂಗಳೂರು ಸಿಟಿ ತಂಡದಲ್ಲಿ ಹಾಲಪ್ಪ, ಸಂತೋಷ್, ಪವನ್, ಮನೋಜ್ ಅತ್ಯುತ್ತಮ ಆಟ ಪ್ರದರ್ಶಿಸಿ, ವೀಕ್ಷಣೆಗೆ ಆಗಮಿಸಿದ ಜನರನ್ನು ತುದಿಗಾಲಿನಲ್ಲಿ ನಿಂತು ವೀಕ್ಷಿಸುವಂತೆ ಮಾಡಿದರು.

ಮೊದಲ ಸೆಮಿಫೈನಲ್‌ನಲ್ಲಿ ಬ್ಯಾಂಕ್ ಆಫ್ ಬರೋಡ ತಂಡ, ಎಸ್.ಡಿ.ಎಂ., ಉಜಿರೆ ತಂಡವನ್ನು 31-18 ಅಂಕಗಳ ಅಂತರದಲ್ಲಿ ಸೋಲಿಸಿ ಅಂತಿಮ ಸುತ್ತು ಪ್ರವೇಶಿಸಿತ್ತು. ಎರಡನೇ ಪಂದ್ಯಲ್ಲಿ ಬೆಂಗಳೂರು ಸಿಟಿ ತಂಡ ಕಸ್ಟಮ್ಸ್ ತಂಡವನ್ನು 37-21 ಅಂಕಗಳ ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಸುತ್ತಿಗೆ ಅಡಿಯಿಟ್ಟಿತು.

ಅಂತಿಮ ಪಂದ್ಯಾಟಕ್ಕೆ ಅರ್ಜುನ್ ಪ್ರಶಸ್ತಿ ವಿಜೇತ ಮತ್ತು ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ. ರಮೇಶ್ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಗ್ರಾಮೀಣ ಕಬಡ್ಡಿ ಇಂದು ಸವಿರಾರು ಜನರ ಜೋವನೋಪಾಯಕ್ಕೆ ಬುನಾದಿಯಾಗಿದೆ. ಸೋಮವಾರಪೇಟೆಯಂತಹ ಗ್ರಾಮೀಣ ಪ್ರದೇಶದಲ್ಲಿ ಕಬಡ್ಡಿಯನ್ನು ನೋಡಲು ಮಕ್ಕಳು ಮಹಿಳೆಯರಾದಿಯಾಗಿ ಸಾವಿರಾರು ಜನರು ರಾತ್ರಿಯಿಡಿ ಕುಳಿತು ವೀಕ್ಷಣೆ ಮಾಡುತ್ತಿರುವುದು ಸಂತಸವಾಗಿದೆ. ಇಲ್ಲಿ ಕಬಡ್ಡಿಗೆ ಭವಿಷ್ಯವಿದೆ. ಆಸಕ್ತಿಯಿರುವ ಪ್ರತಿಯೊಬ್ಬರನ್ನು ಈ ಕ್ರೀಡೆಗೆ ಕಳುಹಿಸಿಕೊಡಿ. ಒಕ್ಕಲಿಗರ ಯುವ ವೇದಿಕೆಯವರು ಮುಂದೆ ರಾಷ್ಟ್ರೀಯ ಮಟ್ಟದ ಕಬಡ್ಡಿ ಟೂರ್ನಿ ಆಯೋಜಿಸಲು ಮುಂದಾದಲ್ಲಿ ನಮ್ಮ ಕಡೆಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಟೂರ್ನಿಯಲ್ಲಿ ಬ್ಯಾಂಕ್ ಆಫ್ ಬರೋಡದ ರತನ್ ಕೂತಿ ಬೆಸ್ಟ್ ರೈಡರ್, ಬೆಂಗಳೂರು ಸಿಟಿ ಟೀಮ್ ನ ಮನೋಜ್ ಬೆಸ್ಟ್ ಕ್ಯಾಚರ್, ಬೆಸ್ಟ್ ಆಲ್ ರೌಂಡರ್ ಸಿಟಿ ಟೀಮ್ ನ ಪ್ರಶಾಂತ್ ರೈ ಪ್ರಶಸ್ತಿ ಪಡೆದರು.

ಉದಯೋನ್ಮುಖ ಆಟಗಾರರಾಗಿ ಉಜಿರೆ ತಂಡದ ಮನೀಶ್ ಹೊರಹೊಮ್ಮಿದರು.

ಸಮಾರೋಪ ಸಮಾರಂಭದಲ್ಲಿ ಮಹಾತ್ಮಗಾಂದಿ ಟ್ರಸ್ಟ್ ಅವಧೂತರಾದ ವಿನಯ್ ಗುರೂಜಿ, ಒಕ್ಕಲಿಗರ ಯುವವೇದಿಕೆಯ ಅಧ್ಯಕ್ಷ ಬಿ.ಜೆ. ದೀಪಕ್, ದಾನಿಗಳಾದ ಹರಪಳ್ಳಿ ರವೀಂದ್ರ, ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ, ಮಂಜೂರು ತಮ್ಮಣ್ಣಿ, ಯಶವಂತ್ ಬೆಳ್ಳಿಗೌಡ ಇದ್ದರು.

ಇದೇ ಸಂದರ್ಭ ಬಿ.ಸಿ.ರಮೇಶ್ ಅವರನ್ನು ಸನ್ಮಾನಿಸಿಲಾಯಿತು. ಪ್ರೊ. ಕಬಡ್ಡಿ ಆಟಗಾರರಾದ ಪ್ರಶಾಂತ್ ರೈ, ಸುಖೇಶ್ ಹೆಗ್ಡೆ, ಆನಂದ್, ಪ್ರಪಂಚನ್, ನಿತೇಶ್, ಪವನ್, ಸಂತೋಷ್. ಅವಿನಾಶ್, ಸುನಿಲ್, ಸಚಿನ್ ವಿಟ್ಲ, ಅಥ್ಲೇಟ್ ಕೂತಿ ಗ್ರಾಮದ ಟಿ.ಎಂ. ರಾಶಿ ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT