ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಸವರಾಜ್ ಮಾತನಾಡಿ, ‘ಪಂಪ, ರನ್ನ, ಪೊನ್ನರು ರಚಿಸಿದ ಕಾವ್ಯಗಳು ಇಂದಿಗೂ ಜೀವಂತವಾಗಿದ್ದು, ಸಾರ್ವಕಾಲಿಕ ಸಂದೇಶ ನೀಡುತ್ತವೆ. ವಚನ ಸಾಹಿತ್ಯವು ವಿಶ್ವಮಾನ್ಯವಾಗಿದ್ದು ಸಾರ್ವತ್ರಿಕವಾಗಿ ಜನಮನ ಸೆಳೆದಿವೆ. ಭಕ್ತಿ ರಸ ಚೆಲ್ಲಿದ ದಾಸ ಸಾಹಿತ್ಯದ ಕೀರ್ತನೆಗಳು ಎಂದೆಂದೂ ಜನಪ್ರಿಯ. ಇಷ್ಟೆಲ್ಲಾ ಶ್ರೀಮಂತಿಕೆಯಿರುವ ಭಾಷೆಯನ್ನು ಇಂದು ಅಭಿಮಾನ ಶೂನ್ಯತೆಯಿಂದ ಮಾತನಾಡದೇ ಕಡೆಗಣಿಸಲಾಗುತ್ತಿದೆ. ಕನ್ನಡ ಭಾಷೆಯು ಇಂಗ್ಲಿಷ್, ಹಿಂದಿ ಭಾಷೆಗಳಿಂದಾಗಿ ನಲುಗುತ್ತಿದೆ. ಇಂಗ್ಲಿಷ್ ಉದ್ಯೋಗದ ಭಾಷೆಯಾದರೂ ಭಾವ ಅಭಿವ್ಯಕ್ತಿಗೆ ಹೃದ್ಯವಾದುದು ಕನ್ನಡವೇ’ ಎಂದರು.