ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | ಸಿಗದ ಅಪ್ಪನ ಸುಳಿವು: ಮಕ್ಕಳ ಕಣ್ಣೀರು

ಶೋಧ ಕಾರ್ಯ ವೇಳೆ ಮನೆಯಿದ್ದ ಸ್ಥಳದಲ್ಲಿ ‘ಸಮಾಧಿ ನಿರ್ಣಯ’ ಕೃತಿ ಪತ್ತೆ
Last Updated 11 ಆಗಸ್ಟ್ 2020, 1:22 IST
ಅಕ್ಷರ ಗಾತ್ರ

ಮಡಿಕೇರಿ: ಆಸ್ಟ್ರೇಲಿಯಾದಿಂದ ಕೊಡಗಿಗೆ ಸೋಮವಾರ ಬಂದಿರುವ ಅರ್ಚಕ ನಾರಾಯಣ ಆಚಾರ್‌ ಅವರ ಪುತ್ರಿಯರಾದ ಶಾರದಾ ಹಾಗೂ ನಮಿತಾ ಅವರು ತಂದೆ–ತಾಯಿ ನೆನೆದು ಕಣ್ಣೀರು ಸುರಿಸಿದರು. ದುಃಖ ತಡೆಯಲಾರದೆ ಬಿಕ್ಕಿಬಿಕ್ಕಿ ಅತ್ತರು.

ವಿದೇಶದಲ್ಲಿದ್ದ ಪುತ್ರಿಯರಿಗೆ ಮಂಗಳೂರಿನ ಸಂಬಂಧಿಕರು ಬೆಟ್ಟ ಕುಸಿತದಿಂದಾಗಿ ಪೋಷಕರು ಕಣ್ಮರೆಯಾದ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲಿಂದ ಹೊರಟಿದ್ದ ಅವರು ಬ್ರಹ್ಮಗಿರಿಯ ಬೆಟ್ಟ ಕುಸಿತದ ಸ್ಥಳಕ್ಕೆ ತಲುಪಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಶಾಸಕ ಕೆ.ಜಿ.ಬೋಪಯ್ಯ ದುರಂತದ ಬಗ್ಗೆ ಮಾಹಿತಿ ನೀಡಿ, ಸಮಾಧಾನ ಪಡಿಸಲು ಯತ್ನಿಸಿದರು. ಆದರೂ, ಇಬ್ಬರ ಕಣ್ಣಾಲಿಗಳು ಪದೇಪದೇ ತೇವಗೊಳ್ಳುತ್ತಲೇ ಇದ್ದವು.

ಚಿಕ್ಕಂದಿನಲ್ಲಿ ಆಡಿ ಬೆಳೆದಿದ್ದ ಮನೆಯ ಕುರುಹೂ ಅವರಿಗೆ ಸಿಗಲಿಲ್ಲ. ಇದು ಅವರಲ್ಲಿ ಮತ್ತಷ್ಟು ನೋವು ತರಿಸಿತು. ಶೋಧದ ವೇಳೆ ಸಿಕ್ಕಿರುವ ಪೂಜಾ ಸಾಮಗ್ರಿ,ಅಪ್ಪನ ಬಟ್ಟೆಗಳನ್ನು ಕಂಡಾಗಲೂ ದುಃಖ ಉಮ್ಮಳಿಸಿ ಬಂತು.

‘ತಂದೆಗೆ ಕರೆ ಮಾಡಿ, ಆರೋಗ್ಯ ವಿಚಾರಿಸುತ್ತಿದ್ದೆವು. ಮಳೆ ಹೆಚ್ಚಾಗಿರುವ ಮಾಹಿತಿ ನೀಡಿದ್ದರು’ ಎಂದು ಪುತ್ರಿಯರು ಕಣ್ಣೀರು ಹಾಕಿದರು.

ಆಸ್ಟ್ರೇಲಿಯಾದಿಂದ ಕೊಡಗಿಗೆ ಸೋಮವಾರ ಬಂದಿರುವ ಅರ್ಚಕ ನಾರಾಯಣ ಆಚಾರ್‌ ಅವರ ಪುತ್ರಿಯರಾದ ಶಾರದಾ ಹಾಗೂ ನಮಿತಾ ಅವರು ತಂದೆ–ತಾಯಿ ನೆನೆದು ಕಣ್ಣೀರು ಸುರಿಸಿದರು. ದುಃಖ ತಡೆಯಲಾರದೆ ಬಿಕ್ಕಿಬಿಕ್ಕಿ ಅತ್ತರು. ಸ್ಥಳದಲ್ಲಿ ‘ಸಮಾಧಿ ನಿರ್ಣಯ’ ಎಂಬ ಕೃತಿ ಪತ್ತೆಯಾಗಿದೆ. ಇದನ್ನು ನಾರಾಯಣ ಆಚಾರ್‌ ಓದುತ್ತಿದ್ದರೇ ಎಂಬ ಪ್ರಶ್ನೆ ಮೂಡಿದೆ.

ಕಾರ್ಯಾಚರಣೆ ಆರಂಭವಾಗಿ ಮೂರು ದಿನ ಕಳೆದರೂ ನಾಲ್ವರ ಸುಳಿವು ಸಿಕ್ಕಿಲ್ಲ. ಮನೆಯ ಅವಶೇಷಗಳು ಮಾತ್ರ ರಕ್ಷಣಾ ತಂಡಕ್ಕೆ ಸಿಗುತ್ತಿವೆ. ಮನೆಯಿದ್ದ ಸ್ಥಳದಲ್ಲಿ ಮೂರು ಹಿಟಾಚಿ ಯಂತ್ರಗಳಿಂದ ಮಣ್ಣು ತೆರವು ಕಾರ್ಯ ಪ್ರಗತಿಯಲ್ಲಿದೆ.

‘ರಕ್ಷಣಾ ಪಡೆಯ ಜೊತೆಗೆ ಶ್ವಾನ ದಳವನ್ನೂ ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ. ಅವಶೇಷಗಳು ಸಿಕ್ಕರೂ ಕಣ್ಮರೆಯಾದವರ ಸುಳಿವು ಮಾತ್ರ ಪತ್ತೆಯಾಗುತ್ತಿಲ್ಲ.ಮನೆಯಿದ್ದ ಸ್ಥಳದಲ್ಲಿ ಕಾರ್ಯಾಚರಣೆಗೆ ಮೊದಲ ಆದ್ಯತೆ ನೀಡಲಾಗುವುದು.ಅಡಿಪಾಯದವರೆಗೂ ಮಣ್ಣು ತೆರವು ಮಾಡುತ್ತೇವೆ. ಇಲ್ಲಿ ಸುಳಿವು ಸಿಗದಿದ್ದರೆ ಹಸುಗಳ ಕಳೇಬರ ದೊರೆತ ತಳಭಾಗದಲ್ಲಿ ಶೋಧ ನಡೆಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ವಿವರಿಸಿದರು.

ಸ್ವಚ್ಛತಾ ಕಾರ್ಯ: ಉಕ್ಕೇರಿದ್ದ ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಹಾಗೂ ಹಳ್ಳ– ಕೊಳ್ಳಗಳು ಈಗ ಶಾಂತವಾಗಿವೆ. ಪ್ರವಾಹ ಇಳಿದಿದೆ. ಜಲಾವೃತಗೊಂಡಿದ್ದ ಕುಶಾಲನಗರದ ಸಾಯಿ, ಕುವೆಂಪು ಹಾಗೂ ಇಂದಿರಾ ಬಡಾವಣೆಗಳಲ್ಲಿ ನೀರು ಖಾಲಿಯಾಗಿದೆ. ಜನರು ಮನೆಯತ್ತ ಧಾವಿಸಿದ್ದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.

ಕಾರು ಚಾಲಕನಿಗೆ ಕೋವಿಡ್
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಾರಾಯಣ ಆಚಾರ್‌ ಪುತ್ರಿಯರನ್ನು ಕರೆತಂದ ಕಾರು ಚಾಲಕನಿಗೆ, ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಾರಿನಲ್ಲಿ ಪ್ರಯಾಣಿಸಿದ ಎಲ್ಲರನ್ನೂ ಭಾಗಮಂಡಲದಲ್ಲಿ ತಪಾಸಣೆಗೆ ಒಳಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT