ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಹುಲಿ ದಾಳಿಗೆ ಮತ್ತೊಬ್ಬ ಕಾರ್ಮಿಕ ಸಾವು; ಹುಲಿ ಸೆರೆಗೆ ಸಿದ್ಧತೆ

24 ಗಂಟೆಯಲ್ಲಿ ಇಬ್ಬರ ಸಾವು, ಹುಲಿ ಸೆರೆಗೆ ಸಿದ್ಧತೆ
Last Updated 13 ಫೆಬ್ರುವರಿ 2023, 4:24 IST
ಅಕ್ಷರ ಗಾತ್ರ

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಹುಲಿ ದಾಳಿಗೆ ಸಿಲುಕಿ ಸೋಮವಾರ ಬೆಳಿಗ್ಗೆ ಕೇರಳ ಗಡಿಭಾಗ ಪಲ್ಲೇರಿ ಗ್ರಾಮದಲ್ಲಿ ಕೃಷಿ ಕಾರ್ಮಿಕ ರಾಜು (75) ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಹುಲಿ ದಾಳಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.

ಸೋಮವಾರ ಬೆಳಿಗ್ಗೆ ತನ್ನ ಮನೆಯಿಂದ ಹೊರ ಬಂದ ರಾಜು ಅವರ ಮೇಲೆ ಕಾಫಿ ತೋಟದಲ್ಲಿ ಅಡಗಿದ್ದ ಹುಲಿ ದಿಢೀರನೇ ದಾಳಿ ನಡೆಸಿ, ತಲೆ ಹಾಗೂ ಕುತ್ತಿಗೆ ಭಾಗವನ್ನು ತೀವ್ರವಾಗಿ ಗಾಯಗೊಳಿಸಿದೆ. ಇದರಿಂದ ರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ನಾಗರಹೊಳೆ ಎಸಿಎಫ್ ಗೋಪಾಲ್ ಮತ್ತು ಹುಲಿ ಕಾರ್ಯಾಚರಣೆ ಪಡೆಯ ಸಿಬ್ಬಂದಿ ತೆರಳಿದ್ದಾರೆ. ರಾಜು ಅವರನ್ನು ಕೊಂದ ಹುಲಿ ಕಾಫಿ ತೋಟದಲ್ಲಿ ಅಡಗಿರುವುದು ಗೋಚರಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸೆರೆ ಹಿಡಿಯಲು ಸಿದ್ದತೆ ನಡೆಸಿದ್ದಾರೆ.

ಭಾನುವಾರ ಸಂಜೆ ಹುಲಿ ದಾಳಿಗೆ ಚೇತನ್ (18) ಎಂಬುವವರು ಮೃತಪಟ್ಟ ಅನತಿ ದೂರದಲ್ಲಿಯೇ ಈ ಘಟನೆ ನಡೆದಿದೆ. ಮನುಷ್ಯರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಹುಲಿ ಕಾಫಿ ತೋಟದಲ್ಲಿಯೇ ಸುಳಿದಾಡುತ್ತಿದ್ದು ಕಾರ್ಮಿಕರ ಆತಂಕ ಹೆಚ್ಚಿಸಿದೆ.

ಸ್ಥಳೀಯರ ಆಕ್ರೋಶ: ದಕ್ಷಿಣ ಕೊಡಗಿನಲ್ಲಿ 5 ವರ್ಷಗಳಿಂದ ನಿರಂತರವಾಗಿ ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತಿದ್ದ ಹುಲಿಗಳು ಇದೀಗ ಮನುಷ್ಯರ ಮೇಲೆ ದಾಳಿ ನಡೆಸತೊಡಗಿವೆ. ಜಾನುವಾರುಗಳು ಖಾಲಿಯಾಗಿ ಅವುಗಳು ಸಿಗದೆ ಇರುವುದರಿಂದ ಮನುಷ್ಯರನ್ನು ಬಲಿ ತೆಗೆದುಕೊಳ್ಳಲಾರಂಭಿಸಿವೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವುಗಳ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳ ಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT