ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಸಿದ್ದಾಪುರದಲ್ಲಿ ನಿಷೇಧಾಜ್ಞೆ ಜಾರಿ

Published 19 ಏಪ್ರಿಲ್ 2024, 9:13 IST
Last Updated 19 ಏಪ್ರಿಲ್ 2024, 9:13 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ವಾಲ್ನೂರು ಗ್ರಾಮದ ಸಮೀಪ ಮತಯಾಚನೆ ಮುಗಿಸಿ ರಸ್ತೆ ಬದಿ ನಿಂತಿದ್ದ ಬಿಜೆಪಿ ಕಾರ್ಯಕರ್ತರಿಗೆ ಗುರುವಾರ ರಾತ್ರಿ ಕಾರೊಂದು ಡಿಕ್ಕಿ ಹೊಡೆದು ರಾಮಪ್ಪ ಎಂಬುವವರು ಮೃತಪಟ್ಟ ಪ್ರಕರಣಕ್ಕೆ ಬಿಜೆಪಿ ನಾಯಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದಾಪುರ ಗ್ರಾಮಕ್ಕೆ ಶುಕ್ರವಾರ ನೂರಾರು ಕಾರ್ಯಕರ್ತರು ಬಂದಿದ್ದು ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಪಘಾತದಲ್ಲಿ ಮೃತಪಟ್ಟ ರಾಮಪ್ಪ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನೂರಾರು ಕಾರ್ಯಕರ್ತರು ರಸ್ತೆ ತಡೆ ನಡೆಸಿದ್ದರಿಂದ ವಾಹನ ಸವಾರರು ಪರದಾಡಿದರು.

ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಮನವಿ ಮಾಡಿದರೂ ಪ್ರತಿಭಟನೆ ವಾಪಸ್ಸಾತಿಗೆ ಒಪ್ಪಲಿಲ್ಲ. ಮೃತರ ಕುಟುಂಬದವರಿಗೆ‌₹25 ಲಕ್ಷ ಪರಿಹಾರ ನೀಡಬೇಕು, ಅಪಘಾತ ನಡೆಸಿದ ವಾಹನದಲ್ಲಿದ್ದ ಎಲ್ಲರನ್ನೂ ಬಂಧಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಸಿದ್ದಾಪುರ, ವಾಲ್ನೂರು, ಅರೆಕಾಡು, ನೆಲ್ಲಿಹುದಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ 10 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಗ್ರಾಮದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಗುರುವಾರ ರಾತ್ರಿ ಮನೆ‌ಮನೆ ಮತ ಪ್ರಚಾರ ಮುಗಿಸಿ ರಸ್ತೆಬದಿ‌ ನಿಂತಿದ್ದ ಬಿಜೆಪಿ ಕಾರ್ಯಕರ್ತರಿಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಬಿಜೆಪಿ ಕಾರ್ಯಕರ್ತ ರಾಮಪ್ಪ (60) ಮೃತಪಟ್ಟಿದ್ದರು. ಚಂದ್ರರಾಜು ಮತ್ತು ರತೀಶ ಎಂಬ ಕಾರ್ಯಕರ್ತರು ಗಾಯಗೊಂಡಿದ್ದರು. ‌ಘಟನೆಗೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಎಂದು ಗುರುತಿಸಿ ಉದ್ದೇಶಪೂರ್ವಕವಾಗಿ ಕಾರು ಹರಿಸಲಾಯಿತು ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

ಬದುಕುವ ಗ್ಯಾರಂಟಿ ಕೊಡಿ: ಸಿ.ಟಿ

ರವಿ

ಸಿದ್ದಾಪುರಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಸಿ.ಟಿ.ರವಿ, 'ಸರ್ಕಾರ ನಮಗೆ ಬದುಕುವ ಗ್ಯಾರಂಟಿ ಕೊಡಬೇಕು' ಎಂದು‌ ಒತ್ತಾಯಿಸಿದರು.

'ಕೇಸರಿ ಸಾಲು ಹಾಕಿಕೊಂಡು ಪ್ರಚಾರ ಮಾಡುತ್ತಿರುವುದನ್ನು ನೋಡಿ ದುರುದ್ದೇಶದಿಂದಲ್ಲೇ ಹತ್ಯೆ ಮಾಡಲಾಗಿದೆ. ಈ ಕುರಿತು ಗೃಹ ಸಚಿವರು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಹುಬ್ಬಳ್ಳಿಯಲ್ಲಿಯೂ ಯುವತಿಯ ಕೊಲೆ ನಡೆದಿದೆ. ಕೇರಳದಿಂದ ಕರ್ನಾಟಕಕ್ಕೆ‌ ಲವ್ ಜಿಹಾದ್ ಪ್ರವೇಶ ಪಡೆದಿದೆ. ಹೀಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರದ ಚರ್ಮ ಕೋಣನ ಚರ್ಮಕ್ಕಿಂತಲೂ ದಪ್ಪ ಇದೆ ಎಂದು‌ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT