ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು: ಜಿಲ್ಲೆಗೆ ಬೇಕು ಸುರಕ್ಷಿತ ‘ಮಾನ್ಸುನ್ ಟೂರಿಸಂ’

Published : 5 ಆಗಸ್ಟ್ 2024, 5:55 IST
Last Updated : 5 ಆಗಸ್ಟ್ 2024, 5:55 IST
ಫಾಲೋ ಮಾಡಿ
Comments
ಕೊಡಗು ಜಿಲ್ಲೆಯಲ್ಲಿ ಮಳೆಗಾಲದಲ್ಲಿ ‘ರೆಡ್‌ ಅಲರ್ಟ್’ ಇದ್ದಾಗ ಪ್ರವಾಸಿಗರನ್ನು ನಿಷೇಧಿಸುವ ಕ್ರಮಗಳು ಅಗತ್ಯ. ಕೇವಲ ಇದೊಂದೇ ಅಲ್ಲದೇ ಎಲ್ಲ ಜಲಪಾತಗಳೂ ಸೇರಿದಂತೆ ಪ್ರವಾಸಿ ಸ್ಥಳಗಳಲ್ಲಿ ಗರಿಷ್ಠ ಮುನ್ನಚ್ಚರಿಕೆ ವಹಿಸಬೇಕಿದೆ. ಪೊಲೀಸ್ ಭದ್ರತೆ, ಮೂಲಸೌಕರ್ಯಗಳನ್ನು ಒದಗಿಸುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಮಳೆಗಾಲದಲ್ಲಿ ಗರಿಷ್ಠ ಮುನ್ನಚ್ಚರಿಕೆಯ, ಸುರಕ್ಷಿತ ಪ್ರವಾಸೋದ್ಯಮ ಬೇಕು ಎನ್ನುವುದು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವವರ ಒತ್ತಾಯವಾಗಿದೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಜೂನ್ ತಿಂಗಳಿನಿಂದಲೂ ಸುರಿಯುತ್ತಿರುವ ಮಳೆ ಕೃಷಿ, ತೋಟಗಾರಿಕೆ ಚಟುವಟಿಕೆಗಳಿಗೆ ಇಂಬು ನೀಡಿದ್ದರೆ, ಪ್ರವಾಸೋದ್ಯಮ ವಲಯವನ್ನು ಮಂಕಾಗಿಸಿದೆ. ಇದೇ ವಲಯವನ್ನು ನಂಬಿಕೊಂಡಿರುವ ಜನರಿಗೂ ನಷ್ಟ ತರಿಸಿದೆ. ಮಳೆ ಯಾವಾಗ ನಿಲ್ಲುವುದೋ ಎಂದು ಚಾತಕ ಪಕ್ಷಿಗಳಂತೆ ಅವರು ಕಾಯುವಂತಾಗಿದೆ.

ಜಿಲ್ಲೆಯಲ್ಲಿ ಸುಮಾರು 300ಕ್ಕೂ ಅಧಿಕ ಹೋಟೆಲ್‌ ಹಾಗೂ ರೆಸಾರ್ಟ್‌ಗಳಿವೆ. ಇಲ್ಲಿ ಸುಮಾರು 10 ಸಾವಿರ ಮಂದಿ ನೇರವಾಗಿ ಉದ್ಯೋಗದಲ್ಲಿದ್ದಾರೆ. ಸುಮಾರು 4 ಸಾವಿರಕ್ಕೂ ಅಧಿಕ ಹೋಂಸ್ಟೇಗಳಿವೆ. ಒಟ್ಟಾರೆ ಇವುಗಳ ಮೇಲೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸುಮಾರು 1.5 ಲಕ್ಷ ಮಂದಿ ಅವಲಂಬಿಸಿದ್ದಾರೆ ಎಂದು ಕೊಡಗು ಜಿಲ್ಲಾ ಹೋಟೆಲ್‌, ರೆಸಾರ್ಟ್ಸ್‌ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ ಅಧ್ಯಕ್ಷ ನಾಗೇಂದ್ರಪ್ರಸಾದ್ ಹೇಳುತ್ತಾರೆ.

ಮಳೆಯ ಪ್ರಮಾಣ ಕಡಿಮೆ ಇದ್ದಲ್ಲಿ ಪ್ರವಾಸಿಗರು ಬರುತ್ತಿದ್ದರು. ಆದರೆ, ಈಗ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಶೇ 10ರಿಂದ 20ರಷ್ಟು ಮಾತ್ರವೇ ಭರ್ತಿಯಾಗುತ್ತಿದ್ದು, ಉಳಿದಂತೆ ಎಲ್ಲೆಡೆ ಖಾಲಿ ಖಾಲಿ ರೂಂಗಳೇ ಇವೆ. ರೆಸಾರ್ಟ್‌ಗಳು ಭಣಗುಡುತ್ತಿವೆ. ಕೆಲವು ಹೋಟೆಲ್‌ನವರಿಗಂತೂ ಉದ್ಯೋಗಿಗಳಿಗೆ ಸಂಬಳ ಕೊಡುವುದೂ ಸೇರಿದಂತೆ ಹೋಟೆಲ್‌ಗಳ ನಿತ್ಯದ ನಿರ್ವಹಣೆಯೇ ಕಷ್ಟಸಾಧ್ಯವಾಗಿದೆ ಎಂದು ಅವರು ತಮ್ಮ ಮಳೆಗಾಲದ ಕಷ್ಟಗಳನ್ನು ಬಿಡಿಸಿಡುತ್ತಾರೆ.

ವಾಸ್ತವದಲ್ಲಿ ಕೊಡಗಿನಲ್ಲಿ ಮಳೆಯೇ ಪ್ರಧಾನ. ಬೇರೆಲ್ಲೂ ಸಿಗದಂತಹ ಮಳೆಯ ಅನುಭವವನ್ನು ಈ ಜಿಲ್ಲೆ ನೀಡುತ್ತದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಕೆಲವಾರು ಜಿಲ್ಲೆಗಳಲ್ಲೂ ಮಳೆ ವಿಪರೀತ ಎನ್ನುವಷ್ಟೂ ಇದ್ದರೂ ಕೊಡಗಿನ ಮಳೆಯ ಅಂದವೇ ಬೇರೆ. ಅದರ ಮಧುರಾನುಭೂತಿಯೇ ಬೇರೆ.

ಹತ್ತಿಯ ಉಂಡೆಗಳಂತೆ ಬೆಟ್ಟಗಳನ್ನು ಮುತ್ತುವ ಮೋಡಗಳು, ಕೆಲವೊಮ್ಮೆ ಇಡೀ ಬೆಟ್ಟಶ್ರೇಣಿಯೇ ಮಂಜು ಹೊದ್ದು ಮಲಗಿದಂತಹ ದೃಶ್ಯಗಳು, ಎಲ್ಲಿ ನೋಡಿದರಲ್ಲಿ ಹಸಿರಿನಿಂದಲೇ ಕಂಗೊಳಿಸುವ ಗಿರಿ, ಕಂದರಗಳು, ಧುಮ್ಮಿಕ್ಕುವ ಅಸಂಖ್ಯಾತ ಜಲಧಾರೆಗಳು ಇವೆಲ್ಲವೂ ‘ಕರ್ನಾಟಕದ ಕಾಶ್ಮೀರ’ ಎನಿಸಿಕೊಂಡಿರುವ ಕೊಡಗಿನಲ್ಲಿ ಬಿಟ್ಟರೆ ಬೇರೆಲ್ಲೂ ಸಿಗದು. ಇಂತಹ ಅನನ್ಯವಾದ ಹಾಗೂ ವಿಸ್ಮಯವಾದ ಅನುಭವವನ್ನು ಪ್ರವಾಸಿಗರು ಕಂಡು ಅನುಭವಿಸುವಂತೆ ಮಾಡಲು ಸರ್ಕಾರಕ್ಕೊಂದು ದೂರದೃಷ್ಟಿ ಹಾಗೂ ಇಚ್ಛಾಶಕ್ತಿ ಬೇಕಿದೆ.

ಇಲ್ಲಿ ಮಳೆಗಾಲದಲ್ಲಷ್ಟೇ ಕಾಣಸಿಗುವ ಅತ್ಯಮೋಘವಾದ ಜಲಪಾತಗಳ ಸುರಕ್ಷಿತ ವೀಕ್ಷಣೆಗೆ ಅನುವು ಮಾಡಿಕೊಡಬೇಕು ಎಂದು ಪ್ರವಾಸೋದ್ಯಮದ ವಲಯದಲ್ಲಿ ದುಡಿಯುವ ಅನೇಕ ಮಂದಿ ಒತ್ತಾಯಿಸುತ್ತಾರೆ. ಮೊದಲು ಪ್ರವಾಸಿ ಸ್ಥಳದಲ್ಲಿ ಸುರಕ್ಷಿತವಾದ ಕ್ರಮಗಳನ್ನು ಕೈಗೊಳ್ಳಬೇಕು. ನಂತರ, ಪ್ರವಾಸಿಗರನ್ನು ಬನ್ನಿ ಎಂದು ಕರೆದರೆ ಯಾವುದೇ ಅನಾಹುತಗಳು ಸಂಭವಿಸುವುದಿಲ್ಲ ಎಂದು ಹೇಳುತ್ತಾರೆ.

ಮಳೆ ನೋಡಲೆಂದೇ, ಮಳೆಯನ್ನು ಅನುಭವಿಸಲೆಂದೇ ಬರುವ ಪ್ರವಾಸಿಗರಿಗೂ ಅವಕಾಶ ಮಾಡಿಕೊಡಬೇಕು. ರೆಸಾರ್ಟ್, ಹೋಟೆಲ್‌ನವರು ತಮ್ಮಲ್ಲಿ ಸೂಕ್ತ ಸುರಕ್ಷಿತ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ.

ಇನ್ನು ಮಳೆಗಾಲದಲ್ಲಷ್ಟೇ ಇಲ್ಲಿ ಸಿಗುವ ಅಪರೂಪದ ಖಾದ್ಯಗಳನ್ನು ಬ್ರ್ಯಾಂಡಿಗ್ ಮಾಡಬೇಕಿದೆ. ಕೊಡಗಿನ ಜೇನು, ಕೊಡಗಿನ ಕಿತ್ತಲೆಯಂತೆ ಮಳೆಗಾಲದಲ್ಲಿ ದೊರೆಯುವ ಜೀವಂತ ಏಡಿ, ಕಳಲೆ, ಮರಕೆಸ ಮೊದಲಾದ ತಿನಿಸುಗಳನ್ನು ಬ್ರ್ಯಾಂಡಿಂಗ್ ಮಾಡುವುದು, ಮಳೆ ಕಡಿಮೆಯಾದ ನಂತರ ಮಳೆಗಾಲದ ಆಹಾರ ಮೇಳ ಏರ್ಪಡಿಸುವುದೂ ಸೇರಿದಂತೆ ಅನೇಕ ಬಗೆಯ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.

ಇನ್ನು ಇಲ್ಲಷ್ಟೇ ಸಿಗುವ ರಿವರ್ ರ್‍ಯಾಫ್ಟಿಂಗ್‌ಗೆ ಹೆಚ್ಚು ಪ್ರಚಾರ ದೊರಕಿಸಿಕೊಟ್ಟರೆ ಮಳೆಗಾಲದ ಪ್ರವಾಸೋದ್ಯಮಕ್ಕೆ ಜೀವ ತುಂಬಿದಂತಾಗುತ್ತದೆ. ಇಲ್ಲಿನ ಕುಶಾಲನಗರದ ದುಬಾರೆ ಸಮೀಪ ಕಾವೇರಿ ನದಿಯಲ್ಲಿ ಹಾಗೂ ಟಿ.ಶೆಟ್ಟಿಗೇರಿಯ ಟಾಟಾ ಚಹಾ ಎಸ್ಟೇಟ್ ಸಮೀಪದ ಬರಪೊಳೆ ಸೇರಿದಂತೆ ರ‍್ಯಾಫ್ಟಿಂಗ್ ನಡೆಸುವ ಸ್ಥಳಗಳ ಮಾಹಿತಿಯನ್ನು ಪ್ರವಾಸೋದ್ಯಮ ಇಲಾಖೆ ಇನ್ನಷ್ಟು ಪ್ರಚುರಪಡಿಸಬೇಕಿದೆ. ಜತೆಗೆ, ಜಲಸಾಹಸ ಕ್ರೀಡೆಗಳಿಗೆ ಇನ್ನಷ್ಟು ಸ್ಥಳಗಳನ್ನು ಗುರುತಿಸಿ, ಅವುಗಳ ಅಭಿವೃದ್ಧಿಗೂ ಗಮನ ಕೊಡಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.

‌ನಿರೂಪಣೆ: ಕೆ.ಎಸ್.ಗಿರೀಶ

ಮಾಹಿತಿ: ಜೆ.ಸೋಮಣ್ಣ

ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಈಚೆಗೆ ನಡೆದ ಸಂಗೀತ ಕಾರಂಜಿಯನ್ನು ಕಣ್ತುಂಬಿಕೊಂಡ ಜನ
ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಈಚೆಗೆ ನಡೆದ ಸಂಗೀತ ಕಾರಂಜಿಯನ್ನು ಕಣ್ತುಂಬಿಕೊಂಡ ಜನ
ಕೊಡಗು ಜಿಲ್ಲೆಯಲ್ಲಿ ಬಿಸಿಲ ವಾತಾವರಣ ಕಂಡುಬಂದಿದ್ದು ಮಡಿಕೇರಿಯಲ್ಲಿ ಸೋಮವಾರ ಮಧ್ಯಾಹ್ನ ಮೋಡಗಳು ಚೆಲ್ಲಾಟವಾಡುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ... ಪ್ರಜಾವಾಣಿ ಚಿತ್ರ: ರಂಗಸ್ವಾಮಿ 
ಕೊಡಗು ಜಿಲ್ಲೆಯಲ್ಲಿ ಬಿಸಿಲ ವಾತಾವರಣ ಕಂಡುಬಂದಿದ್ದು ಮಡಿಕೇರಿಯಲ್ಲಿ ಸೋಮವಾರ ಮಧ್ಯಾಹ್ನ ಮೋಡಗಳು ಚೆಲ್ಲಾಟವಾಡುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ... ಪ್ರಜಾವಾಣಿ ಚಿತ್ರ: ರಂಗಸ್ವಾಮಿ 
ಸಾಮಾನ್ಯವಾಗಿ ವಾರಾಂತ್ಯದ ದಿನಗಳಲ್ಲಿ ಗಿಜಿಗುಡುತ್ತಿದ್ದ ಮಡಿಕೇರಿಯ ರಸ್ತೆಗಳು ಬಣಗುಡುತ್ತಿದ್ದ ದೃಶ್ಯ ಭಾನುವಾರ ಕಂಡು ಬಂತು ಚಿತ್ರ: ರಂಗಸ್ವಾಮಿ
ಸಾಮಾನ್ಯವಾಗಿ ವಾರಾಂತ್ಯದ ದಿನಗಳಲ್ಲಿ ಗಿಜಿಗುಡುತ್ತಿದ್ದ ಮಡಿಕೇರಿಯ ರಸ್ತೆಗಳು ಬಣಗುಡುತ್ತಿದ್ದ ದೃಶ್ಯ ಭಾನುವಾರ ಕಂಡು ಬಂತು ಚಿತ್ರ: ರಂಗಸ್ವಾಮಿ

ಸುರಕ್ಷಿತ ಪರಿಸರ ಸ್ನೇಹಿ ಪ್ರವಾಸೋದ್ಯಮ ಬೇಕು

ಕೊಡಗು ಜಿಲ್ಲೆಯಲ್ಲಿ ಸರಿಸಮಾರು 6 ತಿಂಗಳ ಕಾಲ ಪ್ರವಾಸೋದ್ಯಮ ವಲಯ ಮಂಕಾಗಿರುತ್ತದೆ. ಇದನ್ನೇ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಂಬಿಕೊಂಡು ಜಿಲ್ಲೆಯಲ್ಲಿ ಒಂದರಿಂದ ಒಂದೂವರೆ ಲಕ್ಷ ಮಂದಿ ಇದ್ದಾರೆ. ಸರ್ಕಾರ ಇನ್ನಾದರೂ ಸುರಕ್ಷಿತ ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಇಂಬು ನೀಡಬೇಕಿದೆ
ನಾಗೇಂದ್ರಪ್ರಸಾದ್, ಕೊಡಗು ಜಿಲ್ಲಾ ಹೋಟೆಲ್‌ ರೆಸಾರ್ಟ್ಸ್‌ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ ಅಧ್ಯಕ್ಷ
ಕೊಡಗು ಜಿಲ್ಲೆಯಲ್ಲಿ ಮಾನ್ಸೂನ್ ಟೂರಿಸಂಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದಕ್ಕೂ ಮೊದಲು ಎಲ್ಲ ಬಗೆಯ ಪ್ರವಾಸಿ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಒದಗಿಸಬೇಕು. ಗರಿಷ್ಠ ಮುನ್ನಚ್ಚರಿಕೆ ವಹಿಸಬೇಕು. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸರು ಈ ಬಗೆಯ ಕ್ರಮಗಳನ್ನು ಕೈಗೊಂಡರೆ ನಿಜಕ್ಕೂ ಕೊಡಗಿನ ಪ್ರವಾಸೋದ್ಯಮ ವಲಯಕ್ಕೆ ಹೆಚ್ಚಿನ ಶಕ್ತಿ ಒದಗುತ್ತದೆ.
ನವೀನ್‌ ಅಂಬೆಕಲ್, ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಕೊಡಗು ಜಿಲ್ಲಾ ಉಪಾಧ್ಯಕ್ಷರು
ಅತಿಯಾದ ಮಳೆ ಗಾಳಿಯಿಂದಾಗಿ ರೆಡ್ ಅಲರ್ಟ್ ಘೋಷಣೆಯಾದರೆ ರೆಸಾರ್ಟ್ ಮತ್ತು ಹೋಂಸ್ಟೇನವರು ಯಾವುದೇ ಬುಕಿಂಗ್ ಮಾಡಿಕೊಳ್ಳುವಂತೆ ಇಲ್ಲ. ಜತೆಗೆ ಮಳೆಗಾಲದಲ್ಲಿ ವಿದ್ಯುತ್ ಕೂಡ ಇರುವುದಿಲ್ಲ. ಆದರೆ ನಮ್ಮೊಳಗಿನ ಖರ್ಚು ಮಾತ್ರ ಎಂದಿನಂತೆ ಇರುತ್ತದೆ. ಕೆಲಸದವರಿಗೆ ವೇತನ ಕೂಡಲೇಬೇಕು. ಹೀಗಾಗಿ ಮಳೆಗಾಲದಲ್ಲಿ ನಮ್ಮ ಬವಣೆ ಹೇಳತೀರದಾಗಿದೆ.
ಅರುಣ್ ವಾಸ್, ಮಾಲೀಕರು ಗ್ರೀನ್ ವೀವ್ ಹೋಂ ಸ್ಟೆ ಚೂರಿಕಾಡ್ ಕುಟ್ಟ
ಮಳೆಗಾಲಕ್ಕೆ ರಸ್ತೆ ಎಷ್ಟೇ ಉತ್ತಮವಾಗಿದ್ದರೂ ನಿಲ್ಲುವುದಿಲ್ಲ. ಸಿಮೆಂಟ್‌ ರಸ್ತೆ ಆದರೂ ಬದಿ ಕುಸಿದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮಳೆ ನಿಂತ ಮೇಲೆ ಇದರ ದುರಸ್ತಿಗೆ ಹಣ ವ್ಯಯವಾಗುತ್ತದೆ. ಬೇಸಿಗೆಯಲ್ಲಿ ಗಳಿಸಿದ್ದೆಲ್ಲ ಮಳೆಗಾಲದಲ್ಲಿ ಕರಗಿ ಹೋಗುತ್ತದೆ. ಶಾಶ್ವತವಾದ ರಸ್ತೆಗಳನ್ನು ನಿರ್ಮಿಸಬೇಕಿದೆ.
ಸುರೇಶ್ ಚಂಗಪ್ಪ, ಜೇನುಗೂಡು ಹೋಂ ಸ್ಟೇ ಕಕ್ಕಬ್ಬೆ ವಿರಾಜಪೇಟೆ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT