ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆ: ಬಸ್‌ನಿಲ್ದಾಣಕ್ಕೆ ಮೊರೆ ಇಟ್ಟ ಜನತೆ

ಬಸ್‌ನಿಲ್ದಾಣ ನಿರ್ಮಿಸಲು ಜನರ ಒತ್ತಾಯ, ಮಳೆಯಲ್ಲಿ ನೆನೆಯುತ್ತಲೇ ಹತ್ತಬೇಕಿದೆ ಬಸ್‌
Published 21 ಜುಲೈ 2023, 7:37 IST
Last Updated 21 ಜುಲೈ 2023, 7:37 IST
ಅಕ್ಷರ ಗಾತ್ರ

ಶರಣ್ ಎಚ್.ಎಸ್.

ಶನಿವಾರಸಂತೆ: ಇಲ್ಲಿನ ಹೋಬಳಿ ಕೇಂದ್ರದಲ್ಲಿ ಜನರು ಬಸ್‌ ಹತ್ತಬೇಕಾದರೆ ಒಂದು ಮಳೆಯಲ್ಲಿ ನೆನೆಯಬೇಕು, ಇಲ್ಲವೇ ಬಿಸಿಲಿನಲ್ಲಿ ಒಣಗಬೇಕು. ಇನ್ನೂ ಇಂತಹ ಸ್ಥಿತಿಯಲ್ಲಿಯೇ ಹೋಬಳಿಯ ಪ್ರಯಾಣಿಕರಿದ್ದಾರೆ.

ಶನಿವಾರಸಂತೆಯ ಕೆ.ಆರ್.ಸಿ ವೃತ್ತದಲ್ಲಿ ಚಂಗಡಹಳ್ಳಿ, ಕೂಡುರಸ್ತೆ ಕಡೆಗೆ ಹೋಗುವಂತಹ ಪ್ರಯಾಣಿಕರು ಈಗ ಇರುವ ಬಸ್‌ ನಿಲ್ದಾಣವನ್ನು ಉಪಯೋಗಿಸುತ್ತಿದ್ದಾರೆ. ಸೋಮವಾರಪೇಟೆ, ಕೊಡ್ಲಿಪೇಟೆ, ಅರಕಲಗೂಡು, ಕುಶಾಲನಗರ, ಬೆಂಗಳೂರು, ಹಾಸನ ಕಡೆಗೆ ಹೋಗುವಂತಹ ಪ್ರಯಾಣಿಕರು ಬಸ್‌ಗಾಗಿ ಅಂಗಡಿಗಳ ಎದುರು ನಿಲ್ಲುತ್ತಿದ್ದಾರೆ. ಮಳೆಗಾಲದಲ್ಲಿ ಪ್ರಯಾಣಿಕರಿಗಾಗುವ ತೊಂದರೆ ಹೇಳತೀರದಾಗಿದೆ. ಇದರ ಜೊತೆಗೆ, ವರ್ತಕರು ಅಂಗಡಿಗಳಿಗೆ ಗ್ರಾಹಕರು ಬರುವುದಿಲ್ಲ, ಅಂಗಡಿ ಬಳಿ ನಿಲ್ಲಬೇಡಿ ಎಂದು ಹೇಳುತ್ತಿದ್ದಾರೆ. ಇನ್ನೂ ದೂರದ ಊರುಗಳಿಗೆ ಹೋಗುವ ಪ್ರಯಾಣಿಕರು ಹೆಚ್ಚು ಸರಕುಗಳನ್ನು ತೆಗೆದುಕೊಂಡು ಬಂದರೆ ಮಳೆಯಲ್ಲಿ ನೆನಸಿಕೊಂಡು ಇಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೋಬಳಿ ಕೇಂದ್ರದಲ್ಲಿಯೇ ಈ ರೀತಿಯ ದುಸ್ಥಿತಿ ಕಂಡು ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಬಂದರೆ ಸೂಕ್ತ ವ್ಯವಸ್ಥೆ ಇಲ್ಲದೆ ಪರಿತಪಿಸುತ್ತಿದ್ದಾರೆ. ಇಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಪ್ರಯಾಣಿಕರು ಹೈರಣಾಗಿದ್ದಾರೆ.

ಕೆ.ಆರ್.ಸಿ ವೃತ್ತದಲ್ಲಿ ಹೈ ಮಾಸ್ಕ್ ದೀಪ ಕೆಟ್ಟು ಹೋಗಿ 5 ತಿಂಗಳು ಕಳೆದಿದೆ. ಇದರ ದುರಸ್ತಿಗೆ ಶನಿವಾರಸಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ ಅವರನ್ನು ಕೇಳಿದರೆ ‘ಹೈ ಮಾಸ್ಕ್ ದೀಪ ಸರಿಪಡಿಸಲು ಸ್ಥಳೀಯರಿಂದ ಸಾಧ್ಯವಿಲ್ಲ. ಬೆಂಗಳೂರಿನಿಂದ ತಾಂತ್ರಿಕ ತಜ್ಞರು ಬರಬೇಕು. ಇದಕ್ಕೆ ಹೆಚ್ಚು ವೆಚ್ಚವಾಗುತ್ತದೆ’ ಎಂದು ಕೈಚೆಲ್ಲುತ್ತಾರೆ.

ಶನಿವಾರದ ಸಂತೆ ದಿನ ವಾಹನ ದಟ್ಟಣೆ ಅಧಿಕ ಇರುತ್ತದೆ. ಆ ಸಮಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸಂಚಾರದಟ್ಟಣೆ ಉಂಟಾಗುತ್ತದೆ. ಬಸ್ ಚಾಲಕರು ಅಡ್ಡಾದಿಡ್ಡಿ ಬಸ್ ನಿಲ್ಲಿಸಿಕೊಂಡು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಾರೆ. ಕೆಲವೊಂದು ಬಸ್‌ ಚಾಲಕರ ಅಜಾಗರೂಕತೆಯಿಂದ ಪ್ರಯಾಣಿಕರು ಬಸ್ ಹತ್ತುವ ವೇಳೆ ಕೆಳಗೆ ಬಿದ್ದ ನಿದರ್ಶನಗಳೂ ಇವೆ. ಶಾಲಾ ಕಾಲೇಜು ಮಕ್ಕಳು ಬಸ್‌ ತಂಗುದಾಣ ಇಲ್ಲದೆ ರಸ್ತೆಯಲ್ಲೇ ನಿಂತುಕೊಳ್ಳುವುದರಿಂದ ಇತರೆ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಅತಿ ಹೆಚ್ಚು ಸಂಚರಿಸುತ್ತಿದ್ದರೂ ಇಲ್ಲಿಯವರೆಗೆ ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದಿಂದ ಸಂಚಾರ ನಿಯಂತ್ರಕ ಅಧಿಕಾರಿಯನ್ನೂ ನೇಮಿಸಿಲ್ಲ. ಇದರಿಂದ ಪ್ರಯಾಣಿಕರು ತಮ್ಮ ಊರುಗಳಿಗೆ ಹೋಗುವ ಬಸ್ ಯಾವ ಸಮಯಕ್ಕೆ ಬರುತ್ತದೆ ಎಂದು ವರ್ತಕರನ್ನು ಕೇಳುವಂತಾಗಿದೆ.

ಶಾಸಕ ಡಾ.ಮಂತರ್‌ಗೌಡ ಅವರು ಜೂನ್ ತಿಂಗಳಲ್ಲಿ ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ‘ಇನ್ನು 6 ತಿಂಗಳಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಭರವಸೆ ನೀಡಿದ್ದರು. ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ.ಬಿ.ಸಿ.ಸತೀಶ ಅವರು ಬಿದರೂರು ಗ್ರಾಮದಲ್ಲಿ ಒಟ್ಟು 0.65 ಎಕರೆ ಜಾಗವನ್ನು ಶನಿವಾರಸಂತೆ ಸಾರ್ವಜನಿಕ ಬಸ್ ನಿಲ್ದಾಣಕ್ಕೆ ಕಾಯ್ದಿರಿಸಿದ್ದರು.

ಈಗ ಬಸ್ ನಿಲ್ದಾಣಕ್ಕೆ ನಿಗದಿಯಾಗಿರುವ ಜಾಗದಲ್ಲಿ ಕೂಡಲೇ ಭೂಮಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ವಡ್ಡರಕೊಪ್ಪದ ನಿವಾಸಿ ಧರ್ಮಚಾರಿ ಪ್ರತಿಕ್ರಿಯಿಸಿ, ‘ಶನಿವಾರಸಂತೆಯಲ್ಲಿ ಸೂಕ್ತವಾದ ಬಸ್‌ ನಿಲ್ದಾಣ ಇಲ್ಲ. ಇಲ್ಲಿಗೆ ಬರುವ ಪ್ರಯಾಣಿಕರಿಗೆ ಬಸ್ಸಿಗಾಗಿ ಎಲ್ಲಿ ನಿಲ್ಲಬೇಕು ಎಂಬ ಗೊಂದಲ ಇದೆ. ಕೂಡಲೇ ಶಾಸಕರು ಶನಿವಾರಸಂತೆಗೆ ನೂತನ ಬಸ್‌ನಿಲ್ದಾಣ ನಿರ್ಮಾಣ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

ಶನಿವಾರಸಂತೆಯಲ್ಲಿ ಬಸ್‌ಗಾಗಿ ಪ್ರಯಾಣಿಕರು ಅಂಗಡಿಗಳ ಮುಂದೆ ನಿಂತಿರುವುದು
ಶನಿವಾರಸಂತೆಯಲ್ಲಿ ಬಸ್‌ಗಾಗಿ ಪ್ರಯಾಣಿಕರು ಅಂಗಡಿಗಳ ಮುಂದೆ ನಿಂತಿರುವುದು

ಸಂಚಾರ ನಿಯಂತ್ರಣ ಅಧಿಕಾರಿಯೂ ಇಲ್ಲಿಲ್ಲ ಬಸ್‌ ವೇಳೆಯನ್ನು ವರ್ತಕರೇ ಕೇಳುವ ಸ್ಥಿತಿ ಭರವಸೆ ಈಡೇರಿಸುವಂತೆ ಶಾಸಕರಲ್ಲಿ ಜನರ ಮನವಿ

ನಮ್ಮ ಅಂಗಡಿಯ ಮುಂದೆ ಪ್ರಯಾಣಿಕರು ಬಸ್‌ಗಾಗಿ ನಿಲ್ಲುತ್ತಾರೆ. ವೃದ್ಧರಿಗಾಗಿ ಕುಳಿತುಕೊಳ್ಳಲು ಒಂದು ಬೆಂಚು ವ್ಯವಸ್ಥೆ ಮಾಡಿದ್ದೇವೆ. ಪ್ರಯಾಣಿಕರು ಬಂದು ಈ ಜಾಗದಲ್ಲಿ ಕುಳಿತುಕೊಳ್ಳುತ್ತಾರೆ. ಬಸ್‌ ನಿಲ್ದಾಣವಾದರೆ ಎಲ್ಲರಿಗೂ ಕುಳಿತುಕೊಳ್ಳುವ ಅನುಕೂಲವಾಗುತ್ತದೆ.
ಟಿ.ಎ.ದರ್ಶನ್ ಶನಿವಾರಸಂತೆಯ ವರ್ತಕ.
ಶನಿವಾರಸಂತೆ ಬಸ್ ನಿಲ್ದಾಣದ ಕಾಮಗಾರಿಯ ನಕಾಶೆ ಹಾಗೂ ಅಂದಾಜು ವೆಚ್ಚದ ಬಗ್ಗೆ ಶೀಘ್ರದಲ್ಲಿ ಸಂಬಂದಪಟ್ಟ ಇಲಾಖೆಯ ಎಂಜಿನಿಯರ್ ಜೊತೆ ಚರ್ಚಿಸಿ ನಿಲ್ದಾಣದ ಕಾಮಗಾರಿ ಆರಂಭಿಸಲಾಗುವುದು
ಡಾ.ಮಂತರ್‌ಗೌಡ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT