ಮಂಗಳವಾರ, ಅಕ್ಟೋಬರ್ 20, 2020
22 °C
ಹೆಬ್ಬಟ್ಟಗೇರಿ, ಹಟ್ಟಿಹೊಳೆಯಲ್ಲಿ ಪ್ರದರ್ಶನ; ಸ್ಥಳೀಯರಲ್ಲಿ ಧೈರ್ಯ ತುಂಬುವ ಪ್ರಯತ್ನ

ಮುಂಗಾರು ಮಳೆ: ‘ನಾವಿದ್ದೇವೆ…ಆತಂಕ ಬಿಡಿ', ರಕ್ಷಣಾ ಪಡೆ ಅಣಕು ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಮುಂಗಾರು ಮಳೆಯ ವೇಳೆ ಕಳೆದ ವರ್ಷದಂತೆಯೇ ದುರಂತ ಸಂಭವಿಸಿದರೆ ಅದನ್ನು ಎದುರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಅದರ ಭಾಗವಾಗಿ ಬುಧವಾರ ಎರಡು ಸ್ಥಳದಲ್ಲಿ ರಕ್ಷಣಾ ಕಾರ್ಯದ ಅಣಕು ಪ್ರದರ್ಶನ ನಡೆಸಲಾಯಿತು. 

ಜಿಲ್ಲೆಗೆ ಬಂದಿರುವ ರಕ್ಷಣಾ ಪಡೆಗಳು ಸ್ಥಳೀಯ ಪೊಲೀಸರೊಂದಿಗೆ ಕೈಜೋಡಿಸಿದ್ದು, ‘ಯಾವುದಕ್ಕೂ ಹೆದರಬೇಡಿ, ನಾವಿದ್ದೇವೆ...’ ಎನ್ನುವ ಅಭಯ ನೀಡುತ್ತಿದ್ದಾರೆ. 

ಕಳೆದ ಆಗಸ್ಟ್‌ನಲ್ಲಿ ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿದ್ದ ಹೆಬ್ಬಟ್ಟಗೇರಿ ಹಾಗೂ ಹಟ್ಟಿಹೊಳೆಯಲ್ಲಿ ವಿವಿಧ ರಕ್ಷಣಾ ಪಡೆಗಳು ದುರಂತದ ಸನ್ನಿವೇಶವನ್ನು ಮರುಸೃಷ್ಟಿಸಿ ಸಂಕಷ್ಟದಲ್ಲಿ ಸಿಲುಕಿದ್ದವರನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಕರೆ ತಂದರು.  

ಜಿಲ್ಲಾಡಳಿತದ ನೇತೃತ್ವದಲ್ಲಿ ಎನ್‌ಡಿಆರ್‌ಎಫ್, ಕ್ವಿಕ್ ರೆಸ್ಪಾನ್ಸ್ ಟೀಂ, ಅಗ್ನಿಶಾಮಕ ದಳದ ಸಿಬ್ಬಂದಿ ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಗ್ರಾಮಸ್ಥರಿಗೆ ಭೂಕುಸಿತ ಹಾಗೂ ಪ್ರವಾಹದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯುತ್ತೇ ಎಂಬ ಸಮಗ್ರ ಚಿತ್ರಣವನ್ನು ರಕ್ಷಣಾ ಪಡೆಯ ಸಿಬ್ಬಂದಿ ಕಣ್ಮುಂದೆಯೇ ಕಟ್ಟಿಕೊಟ್ಟರು. ಅದಕ್ಕೆ ವಾಕಿಟಾಕಿ, ಮೈಕ್‌, ಕ್ಯಾಮೆರಾ ಹಾಗೂ ರಕ್ಷಣಾ ಸಾಮಗ್ರಿಗಳನ್ನು ಬಳಕೆ ಮಾಡಿಕೊಳ್ಳಲಾಯಿತು. ನೂರಾರು ಮಂದಿ ಈ ಸನ್ನಿವೇಶವನ್ನು ವೀಕ್ಷಿಸಿ ‘ಅಬ್ಬಾ...’ ಎಂದು ಉದ್ಗರಿಸಿದರು.  ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಣ್ಣಿನಲ್ಲಿ ಹೂತು ಹೋಗಿದ್ದವರನ್ನು ರಕ್ಷಿಸಿದರು. ಜತೆಗೆ, ಪಾತಾಳದಲ್ಲಿದ್ದ ವ್ಯಕ್ತಿಯನ್ನು ಹಗ್ಗದ ಸಹಾಯದಿಂದ ಮೇಲಕ್ಕೆ ತರುವ ಸಾಹಸ ತೋರಿದರು. 50 ಅಡಿ ಆಳಕ್ಕೆ ಹಗ್ಗದ ಸಹಾಯದಿಂದ ತೆರಳಿ ಸಂತ್ರಸ್ತರನ್ನು ರಕ್ಷಣೆ ಮಾಡಲಾಯಿತು. ತುರ್ತು ಸ್ಪಂದನಾ ಪಡೆಯವರು ಹೈಟೆಕ್ ಯಂತ್ರೋಪಕರಣ ಬಳಸಿ ಸಂಕಷ್ಟದಲ್ಲಿದ್ದವರ ರಕ್ಷಣೆ ಮಾಡಿದ್ದು ವಿಶೇಷ. ಇದೆಲ್ಲವೂ ಅಣಕು ದೃಶ್ಯಗಳು...


ರಕ್ಷಣಾ ಕಾರ್ಯದ ಅಣಕು ಪ್ರದರ್ಶನ

ಕಳೆದ ವರ್ಷದ ಜಿಲ್ಲೆ ಹಲವೆಡೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಈ ತಂಡವೇ ಮತ್ತೇ ಕೊಡಗಿನತ್ತ ಧಾವಿಸಿದೆ. ಎಲ್ಲದಕ್ಕೂ ನಾವು ಸಿದ್ಧ ಎನ್ನುತ್ತಿದೆ. ಅದೇ ರೀತಿ ಪ್ರಕೃತಿ ಈ ಬಾರಿ ಮುನಿಯದಿರಲಿ ಎಂದೂ ರಕ್ಷಣಾ ಪಡೆಯ ಸಿಬ್ಬಂದಿ ಹಾರೈಸುತ್ತಿದ್ದಾರೆ. 

ಎನ್‌ಡಿಆರ್‌ಎಫ್‌ ಸಿಬ್ಬಂದಿ ಮಣ್ಣಲ್ಲಿ ಹೂತ್ತಿದ್ದವರನ್ನು, ಮೈಮೇಲೆ ಮರ ಬಿದ್ದವರನ್ನು ಸುರಕ್ಷಿತವಾಗಿ ಹೊರ ತಂದು ಆಸ್ಪತ್ರೆಗೆ ಸಾಗಿಸುವ ದೃಶ್ಯ ಕಟ್ಟಿಕೊಟ್ಟರು. 

ಲಿಫ್ಟಿಂಗ್ ಬ್ಯಾಗ್, ಸ್ವಯಂ ಚಾಲಿತ ಬೋಟ್, ಟ್ರೀ ಕಟ್ಟರ್‌, ಕಾಂಕ್ರೀಟ್‌ ಕಟ್ಟರ್, ಲೈಫ್ ಜಾಕೆಟ್ ಸೇರಿದಂತೆ ಇನ್ನಿತರ ರಕ್ಷಣಾ ಸಾಮಗ್ರಿಗಳನ್ನು ಇದೇ ವೇಳೆ ಪ್ರದರ್ಶಿಸಲಾಯಿತು. ಇದೇ ಮೊದಲ ಬಾರಿಗೆ ಸ್ವಯಂ ಚಾಲಿತ ಬೋಟ್ ಜಿಲ್ಲೆಗೆ ತರಲಾಗಿದೆ. ಕಳೆದ ವರ್ಷ ಪ್ರವಾಹದಲ್ಲಿ ರಕ್ಷಣಾ ಸಿಬ್ಬಂದಿ ಮತ್ತೊಂದು ಬದಿಗೆ ತೆರಳಿ ಸಂತ್ರಸ್ತರನ್ನು ರಕ್ಷಿಸಿದರು. ಆದರೆ, ಈ ಬಾರಿ ಬೋಟ್ ಮೂಲಕ ಹಗ್ಗ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಮುಂಗಾರು ಮಳೆ ಎದುರಿಸಲು ಜಿಲ್ಲಾಡಳಿತ ಸರ್ವ ರೀತಿಯಲ್ಲಿಯೂ ಸಜ್ಜಾಗಿದೆ. ಮೂರು ತಿಂಗಳು ಎನ್‌ಡಿಆರ್‌ಎಫ್ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಲಿದೆ. ಜೂನ್ 6ರಿಂದ ಮುಂಗಾರು ಪ್ರವೇಶಿಸುವ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಹೈಅಲರ್ಟ್ ಇದೆ. ಯಾವುದೇ ಅನಾಹುತ ಸಂಭವಿಸದಂತೆ ಜಿಲ್ಲಾಡಳಿತ ಜಾಗೃತೆ ವಹಿಸಿದೆ. ಅಣಕು ಪ್ರದರ್ಶನ ಮೂಲಕ ಸ್ಥೈರ್ಯ ತುಂಬಿದ್ದೇವೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಲಕ್ಷ್ಮೀಪ್ರಿಯ, ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್‌, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು