ಬುಧವಾರ, ಜೂಲೈ 8, 2020
27 °C
ಜಾನುವಾರುಗಳ ಮೇಲೆ ನಿರಂತರ ಹುಲಿ ದಾಳಿ: ಮತ್ತಿಗೋಡು ಸಾಕಾನೆಗಳ ಬಳಕೆ

ಪೊನ್ನಂಪೇಟೆ | ಸಿಗದ ಹುಲಿ ನೆಲೆ, ಕಾರ್ಯಾಚರಣೆ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪೊನ್ನಂಪೇಟೆ (ಕೊಡಗು): ಪೊನ್ನಂಪೇಟೆ, ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಕುರಿತ ನಿರಂತರ ಪ್ರಕರಣಗಳಿಂದಾಗಿ ಹುಲಿ ಸೆರೆಗೆ 20 ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದರೂ, ಫಲಪ್ರದವಾಗಿಲ್ಲ.

ಎರಡು ದಿನಗಳಿಂದ ಬೆಳ್ಳೂರು ಗ್ರಾಮ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಹುಲಿ ಜಾಡು ಪತ್ತೆಯಾಗಿಲ್ಲ.

‘ಭಾರತೀಯ ವನ್ಯಜೀವಿ ಸಂಸ್ಥೆಯ ವನ್ಯಜೀವಿ ತಜ್ಞ ಡಾ.ಸನತ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಹಲವು ತಜ್ಞರೂ ಇದ್ದು ವೈಜ್ಞಾನಿಕವಾಗಿ ಹುಲಿ ಸೆರೆ ಹಿಡಿಯಲು ಕಾರ್ಯತಂತ್ರ ರೂಪಿಸಲಾಗಿದೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಹುಲಿ ದಾಳಿಗೆ ಜಾನುವಾರುಗಳು ಬಲಿಯಾಗಿದ್ದ ಕುಮಟೂರು, ನಡಿಕೇರಿ, ತೂಚಮಕೇರಿ ಹಾಗೂ ಟಿ.ಶೆಟ್ಟಿಗೇರಿ ಭಾಗಗಳಲ್ಲಿ ಬೋನು ಇಟ್ಟಿದ್ದರು, ಯಶ ಸಿಕ್ಕಿರಲಿಲ್ಲ. ಹೀಗಾಗಿ, ಅರಣ್ಯ ಇಲಾಖೆಯ ಸಿಬ್ಬಂದಿಯು ಹುಲಿಯ ಇರುವಿಕೆಯನ್ನು ಪತ್ತೆಹಚ್ಚಿ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯಲು ನಿರ್ಧರಿಸಿದ್ದಾರೆ. 

ಸ್ಥಳೀಯರ ಮಾಹಿತಿ ಆಧರಿಸಿ, ಕೆಲವೆಡೆ ಕಾರ್ಯಾಚರಣೆಗೆ ಮತ್ತಿಗೋಡು ಸಾಕಾನೆಗಳನ್ನೂ ಬಳಸಲಾಗುತ್ತಿದೆ.  ಸೋಮವಾರ ಕುಮಟೂರು, ಬೆಳ್ಳೂರು ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆದಿದ್ದು, 50  ಸಿಬ್ಬಂದಿ ಪಾಲ್ಗೊಂಡಿದ್ದರು.

ರಾತ್ರೋರಾತ್ರಿ ಹುಲಿ ದಾಳಿ: ಕಳೆದ ಕೆಲವು ತಿಂಗಳಿಂದ ದಕ್ಷಿಣ ಕೊಡಗು ಭಾಗದಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ಹುಲಿ ದಾಳಿ  ನಡೆಸಿದೆ. ಹಾಲು ಮತ್ತು ಉಳುಮೆಗೆ ಸಾಕಿಕೊಂಡಿದ್ದ ಜಾನುವಾರುಗಳೂ ಸೇರಿ ನೂರಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿವೆ. ಆದಷ್ಟು ಬೇಗ ಹುಲಿ ಸೆರೆ ಹಿಡಿಯಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಅರಣ್ಯದಂಚಿನ ಗ್ರಾಮಗಳಲ್ಲಿ ಅಳವಡಿಸಿದ್ದ ಕ್ಯಾಮೆರಾಗಳಲ್ಲಿ ಕಳೆದು ತಿಂಗಳು ಹುಲಿ ಓಡಾಟ ದಾಖಲಾಗಿತ್ತು. ಆದರೆ, ಕಾರ್ಯಾಚರಣೆಗೆ ಫಲ ಸಿಗುತ್ತಿಲ್ಲ. 

ವನ್ಯಜೀವಿ ವಿಭಾಗದ ಎಸಿಎಫ್ ಶ್ರೀಪತಿ, ವಿರಾಜಪೇಟೆ ಡಿಎಫ್‍ಒ (ಪ್ರಭಾರ) ರೋಶನಿ, ಪೊನ್ನಂಪೇಟೆ ಆರ್‌ಎಫ್‌ಒ ತೀರ್ಥ ಅವರೂ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು