ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧುಮ್ಮಿಕ್ಕುವ ಜಲಧಾರೆ: ಎಚ್ಚರ ವಹಿಸದೇ ಅಪಾಯಕ್ಕೆ ಸಿಲುಕುವ ಪ್ರವಾಸಿಗರು

ಜಲಪಾತದ ಸೊಬಗನ್ನು ಸವಿಯಲು ಬರುವ ಅಸಂಖ್ಯಾತ ಜನ
Last Updated 12 ಜುಲೈ 2019, 19:30 IST
ಅಕ್ಷರ ಗಾತ್ರ

ಸೋಮವಾರಪೇಟೆ: ಮಳೆಗಾಲದಲ್ಲಿ ಧುಮ್ಮಿಕ್ಕುವ ಹತ್ತಾರು ಜಲಪಾತಗಳು ಕೊಡಗಿನಲ್ಲಿವೆ. ಅದರಲ್ಲಿ ಮಲ್ಲಳ್ಳಿ ಜಲಪಾತವೂ ಒಂದು. ನಿಸರ್ಗ ರಮಣೀಯತೆಯನ್ನು ತನ್ನ ಒಡಲಲ್ಲಿ ಇರಿಸಿಕೊಂಡಿರುವ ಪುಷ್ಪಗಿರಿ ಬೆಟ್ಟದ ತಪ್ಪಲಿನಲ್ಲಿ ಹುಟ್ಟುವ ಕುಮಾರಧಾರಾ ನದಿ ಮಲ್ಲಳ್ಳಿ ಗ್ರಾಮದ ಕಲ್ಲು ಬಂಡೆಯಿಂದ 200 ಅಡಿ ಕೆಳಭಾಗಕ್ಕೆ ಭೋರ್ಗರೆಯುತ್ತಾ ಧುಮ್ಮಿಕ್ಕಿ ಜಲಧಾರೆಯಾಗಿ ಪ್ರವಹಿಸುವ ದೃಶ್ಯ ಸುಂದರವಾಗಿದೆ.

ಹಚ್ಚ ಹಸಿರಿನ ಗಿರಿಕಂದರ, ಪ್ರಕೃತಿಯ ಸೊಬಗಿನ ಎರಡು ಬೆಟ್ಟಗಳ ತಳದಲ್ಲಿ ಧುಮ್ಮಿಕುವ ಜಲಧಾರೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ದಿನನಿತ್ಯ ನೂರಾರು ಪ್ರವಾಸಿಗರನ್ನು ತನ್ನತ್ತ ಕೈಬೀಸಿ, ಕರೆದು ಮನ ತಣಿಸುವ ನೈಸರ್ಗಿಕ ಜಲಧಾರೆ ಮಲ್ಲಳ್ಳಿ ಜಲಪಾತಕ್ಕೆ ಪ್ರವಾಸಿಗರ ದಂಡು ಲಗ್ಗೆ ಇಡುತ್ತಿದ್ದಾರೆ. ಅಪಾಯ ಲೆಕ್ಕಿಸದೇ ಸಂಭ್ರಮಿಸುತ್ತಿದ್ದಾಗ ಕೆಲವು ಸಂದರ್ಭ ಏಕಾಏಕಿ ಅಪಾಯಕ್ಕೂ ಸಿಲುಕುತ್ತಿದ್ದಾರೆ.

ಪುಷ್ಪಗಿರಿ ತಪ್ಪಲಿನಲ್ಲಿ ಹುಟ್ಟುವ ಕುಮಾರಧಾರಾ ನದಿ ಮಲ್ಲಳ್ಳಿ ಗ್ರಾಮದ ಕಲ್ಲು ಬಂಡೆಯಿಂದ 390 ಅಡಿ ಎತ್ತರದಿಂದ ಧುಮ್ಮಿಕ್ಕಿ ಜಲಧಾರೆ ಆಗಿ ಪ್ರವಹಿಸುತ್ತದೆ. ಮೊದಲ ಹಂತದ 200 ಅಡಿ ಎತ್ತರದಿಂದ ಕೆಳಕ್ಕೆ ಧುಮ್ಮಿಕ್ಕಿ ನಂತರ 90 ಅಡಿ ಎತ್ತರದಿಂದ ಕೆಳಕ್ಕೆ ಬೀಳುತ್ತದೆ. ಮುಂದೆ ನದಿಹರಿದು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಮೂಲಕ ನೇತ್ರಾವತಿ ನದಿ ಸೇರುತ್ತದೆ.

ಇಲ್ಲಿಗೆ ರಾಜ್ಯ ಸೇರಿದಂತೆ ಅಂತರ ರಾಜ್ಯಗಳಿಂದಲೂ ಸಾಕಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಜಲಪಾತದ ಸೊಬಗನ್ನು ಸವಿದು, ಎಂಜಾಯ್ ಮಾಡಲು ಮುಂದಾಗುವುದರಿಂದ ವರ್ಷಕ್ಕೆ ಒಂದೆರಡು ಜೀವಹಾನಿಯೂ ಆಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ, ಮೇಲಿನಿಂದ ಜಲಪಾತದ ಬುಡದವರೆಗೂ ತಂತಿಬಲೆಯನ್ನು ಅಳವಡಿಸಿ, ಮುಂಜಾಗ್ರತೆ ವಹಿಸುವಂತೆ ಜಾಗ್ರತಾ ಫಲಕಗಳನ್ನು ಅಳವಡಿಸಿದೆ.

ಯಾರೂ ನೀರಿಗೆ ಇಳಿಯಬಾರದು ಎಂದು ಸೂಚನೆಯನ್ನು ನೀಡಿದೆ. ಬೆಳಗ್ಗಿನಿಂದ ಎರಡು ಜನರ ಕಾವಲುಗಾರರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಇವುಗಳನ್ನೆಲ್ಲಾ ಮೀರಿ ಪ್ರವಾಸಿಗರು ಬಲೆಯನ್ನು ಹತ್ತಿ ನೀರಿಗೆ ಇಳಿಯುವ ದುಸ್ಸಾಹಸ ಮಾಡುತ್ತಿರುವುದರಿಂದ ನೀರಿನ ಹರಿವಿನಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಜಲಪಾತದ ಮೇಲ್ಭಾಗದಲ್ಲಿ ಮಿನಿವಿದ್ಯುತ್ ನಿರ್ಮಾಣ ಮಾಡುತ್ತಿದ್ದು, ಕೆಲವು ಸಂದರ್ಭ ನೀರನ್ನು ಸಂಗ್ರಹಿಸಿ ಜಲಪಾತಕ್ಕೆ ಬಿಡುವುದರಿಂದ ಹೆಚ್ಚಿನ ನೀರಿನ ಹರಿವು ಹೆಚ್ಚಾಗಿರುತ್ತದೆ. ಇದನ್ನು ತಿಳಿಯದ ಪ್ರವಾಸಿಗರು ನೀರಿಗೆ ಇಳಿದು ಬಂಡೆಯ ಮೇಲೆ ಕುಳಿತು ಜಲಕ್ರೀಡೆಯಲ್ಲಿ ತೊಡಗುತ್ತಾರೆ. ಏಕಾಏಕಿ ನೀರು ಬಂದಾಗ ಅಪಾಯಕ್ಕೆ ಸಿಲುಕುತ್ತಿದ್ದಾರೆ.

ಜೂನ್ ಎರಡನೇ ವಾರದಲ್ಲಿ ಸಂಜೆ 5ರ ನಂತರ ಕಾವಲುಗಾರರು ಹಿಂದಿರುಗಿದ ನಂತರ ತಾಲ್ಲೂಕಿನ ತೊರೆನೂರಿನ ಗ್ರಾಮದ ಕೆಲವು ಯುವಕರು ಇದೇರೀತಿ ಅಪಾಯಕ್ಕೆ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಇದೇ ವಿಡಿಯೊವನ್ನು 20 ದಿನಗಳ ನಂತರ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರಿಂದ ಒಂದು ದಿನ ಸಾರ್ವಜನಿಕರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಪ್ರವಾಸೋದ್ಯಮ ಇಲಾಖೆ ಎಷ್ಟೇ ಜಾಗೃತಿ ವಹಿಸಿದರೂ, ಪ್ರವಾಸಿಗರ ಮೋಜು– ಮಸ್ತಿಯಿಂದ ಪ್ರಾಣಾಪಾಯ ತಡೆಯಲು ವಿಫಲವಾಗುತ್ತಿದೆ.

ಕೆಲವು ಯುವಜನರ ಆಟದಿಂದ ಜಲಪಾತಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇನ್ನಾದರೂ ಪ್ರವಾಸಿಗರು ಸೂಚನೆಗಳನ್ನು ಓದಿ ಜಲಪಾತದ ಬಳಿಗೆ ತೆರಳುವಂತೆ ಸ್ಥಳೀಯರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT