ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ನೆಲ್ಲಮಕ್ಕಡ, ಚೇಂದಂಡ ಫೈನಲ್‌ಗೆ

ಮುಗ್ಗರಿಸಿದ ಚಾಂಪಿಯನ್ ಕುಪ್ಪಂಡ ತಂಡ
Published 27 ಏಪ್ರಿಲ್ 2024, 15:41 IST
Last Updated 27 ಏಪ್ರಿಲ್ 2024, 15:41 IST
ಅಕ್ಷರ ಗಾತ್ರ

ನಾಪೋಕ್ಲು (ಕೊಡಗು): ನೆಲ್ಲಮಕ್ಕಡ ಮತ್ತು ಚೇಂದಂಡ ತಂಡಗಳು ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಕುಂಡ್ಯೋಳಂಡ ಕಪ್‌’ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಫೈನಲ್ ಪ್ರವೇಶಿಸಿದವು.

ಫೈನಲ್‌ ಪಂದ್ಯ ಭಾನುವಾರ ನಡೆಯಲಿದೆ.

ಸೆಮಿಫೈನಲ್‌ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡವು ಕುಪ್ಪಂಡ (ಕೈಕೇರಿ) ತಂಡವನ್ನು 4–2ರ ಅಂತರದಿಂದ ಮಣಿಸಿತು. ನೆಲ್ಲಮಕ್ಕಡ ತಂಡದ ಪ್ರಧಾನ ಚಂಗಪ್ಪ, ಪ್ರಧಾನ ಅಯ್ಯಪ್ಪ ಮೊದಲಿಗೆ ಒಂದೊಂದು ಗಳಿಸಿ ಮುನ್ನಡೆ ಕಾಯ್ದುಕೊಂಡರು. ಪ್ರಬಲ ಪೈಪೋಟಿ ನೀಡಿದ ಕುಪ್ಪಂಡ (ಕೈಕೇರಿ) ತಂಡವು ತನ್ನ ಆಟಗಾರ ಕುಪ್ಪಂಡ ಸೋಮಯ್ಯ ಅವರು ಗಳಿಸಿದ ಸತತ 2 ಗೋಲುಗಳ ನೆರವಿನಿಂದ ಸಮಬಲ ಸಾಧಿಸಿತು. ಬಳಿಕ, ನೆಲ್ಲಮಕ್ಕಡ ತಂಡದ ಸೋಮಯ್ಯ ಹಾಗೂ ನೆಲ್ಲಮಕ್ಕಡ ಅಯ್ಯಪ್ಪ ಗಳಿಸಿದ ಒಂದೊಂದು ಗೋಲುಗಳ ನೆರವಿನಿಂದ ತಂಡವು ಜಯದ ನಗೆ ಬೀರಿತು. ಕಳೆದ ಬಾರಿಯ ಚಾಂಪಿಯನ್ ಕುಪ್ಪಂಡ (ಕೈಕೇರಿ) ತಂಡವು ನಿರಾಶೆಯಿಂದ ಟೂರ್ನಿಯಿಂದ ಹೊರಬಿತ್ತು.

ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಚೇಂದಂಡ ತಂಡವು ಕುಲ್ಲೇಟಿರ ವಿರುದ್ಧ 3–1 ಅಂತರದಿಂದ ಜಯ ಸಾಧಿಸಿತು. ಚೇಂದಂಡ ತಂಡದ ಮೋಕ್ಷಿತ್ ಉತ್ತಪ್ಪ ಗೋಲು ಗಳಿಸಿ ಆರಂಭದಲ್ಲೇ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ನಿಖಿನ್ ತಿಮ್ಮಯ್ಯ ಸತತ 2 ಗೋಲುಗಳನ್ನು ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು. ಕುಲ್ಲೇಟಿರ ತಂಡದ ಶುಭಂ ಒಂದು ಗೋಲು ಗಳಿಸಿದರು. ಇದರೊಂದಿಗೆ, ಹೋದ ವರ್ಷ ಅಂತಿಮ ಹಂತ ತಲುಪಿದ್ದ ಕುಲ್ಲೇಟಿರ ತಂಡ ಈ ಬಾರಿ  ಸೆಮಿಫೈನಲ್‌ ಹಂತದಲ್ಲೇ ಮುಗ್ಗರಿಸಿತು.

ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯಲ್ಲಿ ನಡೆದ ದಪ್ಪ ಮೀಸೆಯ ಸ್ಪರ್ಧೆಯಲ್ಲಿ ಪಾಲ್ಗೊಂಡ ಕೊಡವ ಪುರುಷರು
ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಶನಿವಾರ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯಲ್ಲಿ ನಡೆದ ದಪ್ಪ ಮೀಸೆಯ ಸ್ಪರ್ಧೆಯಲ್ಲಿ ಪಾಲ್ಗೊಂಡ ಕೊಡವ ಪುರುಷರು

ಹೈಕೋರ್ಟ್ ನ್ಯಾಯಮೂರ್ತಿ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಸೆಮಿಫೈನಲ್‌ ಪಂದ್ಯದ ಸಭಾ ಕಾರ್ಯಕ್ರಮ ಉದ್ಘಾಟಿಸಿ, ‘ಕೊಡವ ಜನಾಂಗದಲ್ಲಿ ಹಾಕಿಯು ರಕ್ತಗತವಾಗಿದೆ. ಇಂದು ಕೊಡವ ಜನಾಂಗದವರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಶಿಸ್ತು ಮತ್ತು ಬದ್ಧತೆಯಿಂದ ಇದೆಲ್ಲವೂ ಸಾಧ್ಯವಾಗುತ್ತಿದೆ’ ಎಂದು ಹೇಳಿದರು.

ಕೊಡಗು ಜಿಲ್ಲೆಯ ನಾಪೋಕ್ಲುವಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಶನಿವಾರ ನಡೆದ ಉದ್ದ ಜಡೆಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು
ಕೊಡಗು ಜಿಲ್ಲೆಯ ನಾಪೋಕ್ಲುವಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಶನಿವಾರ ನಡೆದ ಉದ್ದ ಜಡೆಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು

ಒಲಿಂಪಿಯನ್ ಬಾಳೆಯಡ ಕೆ.ಸುಬ್ರಮಣಿ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ, ಡಾ.ಕಲಿಯಾಟಂಡ ಚಿಣ್ಣಪ್ಪ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಾಚಮಂಡ ಎ.ಕಾರ್ಯಪ್ಪ ಭಾಗವಹಿಸಿದ್ದರು.

ಪುರುಷರಿಗಾಗಿ ನಡೆದ ದಪ್ಪ ಮೀಸೆಯ ಸ್ಪರ್ಧೆ ಮತ್ತು ಮಹಿಳೆಯರಿಗೆ ನಡೆದ ಉದ್ದ ಜಡೆಯ ಸ್ಪರ್ಧೆ ಗಮನ ಸೆಳೆಯಿತು. ಇದಕ್ಕೂ ಮುನ್ನ ಕಕ್ಕಬ್ಬೆ ಪಟ್ಟಣದಿಂದ ನಾಪೋಕ್ಲುವರೆಗೆ ನಡೆದ ರಿಲೆ ಸ್ಪರ್ಧೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT