ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ತೆಕ್ಕೆಗೆ ಕುಶಾಲನಗರ ಪಟ್ಟಣ ಪಂಚಾಯಿತಿ

ಅಧ್ಯಕ್ಷರಾಗಿ ಜಯಲಕ್ಷ್ಮಿಚಂದ್ರು, ಉಪಾಧ್ಯಕ್ಷೆಯಾಗಿ ಪುಟ್ಟ ಲಕ್ಷ್ಮಮ್ಮ ಅವಿರೋಧ ಆಯ್ಕೆ
Published : 26 ಸೆಪ್ಟೆಂಬರ್ 2024, 4:43 IST
Last Updated : 26 ಸೆಪ್ಟೆಂಬರ್ 2024, 4:43 IST
ಫಾಲೋ ಮಾಡಿ
Comments

ಕುಶಲನಗರ: ಇಲ್ಲಿನ ಪಟ್ಟಣ ಪಂಚಾಯಿತಿಯ 2ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ.

ಇಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜಯಲಕ್ಷ್ಮಿ ಚಂದ್ರು ನೂತನ ಅಧ್ಯಕ್ಷೆಯಾಗಿ ಹಾಗೂ ಪುಟ್ಟಲಕ್ಷ್ಮಮ್ಮ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು. ಬಿಜೆಪಿಯ ಎಲ್ಲ ಸದಸ್ಯರೂ ಸಭೆ ಬಹಿಷ್ಕರಿಸಿದರೆ, ಜೆಡಿಎಸ್‌ನ ಎಲ್ಲ ಸದಸ್ಯರೂ ಸಭೆಯಲ್ಲಿ ಭಾಗಿಯಾಗುವ ಮೂಲಕ ಎರಡೂ ಪಕ್ಷಗಳ ನಡುವಿನ ಬಿರುಕೂ ಬಹಿರಂಗೊಂಡಿತು.

ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಕಿರಣ್ ಗೌರಯ್ಯ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜಯಲಕ್ಷ್ಮಿಚಂದ್ರು ಹಾಗೂ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಪುಟ್ಟ ಲಕ್ಷ್ಮಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು.

ಬಿಜೆಪಿ ಸದಸ್ಯರು ಚುನಾವಣಾ ‌ಪ್ರಕ್ರಿಯೆ ಕಾನೂನು ಬಾಹಿರವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸದೆ ಸದಸ್ಯರಾದ ಜೈವರ್ಧನ್ ಹಾಗೂ ಅಮೃತ್ ರಾಜ್ ನೇತೃತ್ವದಲ್ಲಿ ಸಭೆ ಬಹಿಷ್ಕರಿಸಿ ಹೊರ ನಡೆದರು. ಕಾಂಗ್ರೆಸ್ ಪಕ್ಷದ 6, ಜೆಡಿಎಸ್ ಪಕ್ಷದ 4 ಹಾಗೂ ಇಬ್ಬರು ನಾಮನಿರ್ದೇಶಿತ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಎರಡೂ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಕಿರಣ್ ಗೌರಯ್ಯ ಅವರು ಅಧ್ಯಕ್ಷರಾಗಿ ಜಯಲಕ್ಷ್ಮಿ ಚಂದ್ರು, ಉಪಾಧ್ಯಕ್ಷರಾಗಿ‌ ಪುಟ್ಟ ಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.

ನೂತನ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು ಮತ್ತು ಉಪಾಧ್ಯಕ್ಷೆ ಪುಟ್ಡ ಲಕ್ಷ್ಮಮ್ಮ ಅವರಿಗೆ ಹೂಗುಚ್ಛ ನೀಡಿ ಚುನಾವಣಾಧಿಕಾರಿ ಶುಭ ಕೋರಿದರು. ಇದೇ ವೇಳೆ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಹಾಗೂ ಸಿಬ್ಬಂದಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಪುಷ್ಪ ಹಾರ‌ ಹಾಕಿ ಅಭಿನಂದಿಸಿದರು.

ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ‘ನ್ಯಾಯಾಲಯದ ಆದೇಶದಂತೆ ಪಟ್ಟಣ ಪಂಚಾಯಿತಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಕಾಂಗ್ರೆಸ್, ಜೆಡಿಎಸ್ ಸದಸ್ಯರಿಗೆ ಆಬಿನಂದನೆ ಸಲ್ಲಿಸುತ್ತೇನೆ. ಮುಂದಿನ‌ ದಿನಗಳಲ್ಲಿ ಪಟ್ಟಣ ಸರ್ವತೋಮುಖ ಅಭಿವೃದ್ಧಿಗೆ ನೂತನ ಆಡಳಿತ ಮಂಡಳಿಯೊಂದಿಗೆ ಶ್ರಮಿಸುತ್ತೇನೆ. ಪಟ್ಟಣದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು‌ ತ್ವರಿತಗತಿಯಲ್ಲಿ ಮುಗಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ಪಟ್ಟಣ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಿದ‌ ಜೆಡಿಎಸ್ ಸದಸ್ಯರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’ ಎಂದು ಇದೇ ವೇಳೆ ಅವರು ತಿಳಿಸಿದರು.

ವಿಜಯೋತ್ಸವ: ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಜಯಲಕ್ಷ್ಮಿ ಚಂದ್ರು, ಉಪಾಧ್ಯಕ್ಷೆಯಾಗಿ ಪುಟ್ಟ ಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೆಸ್ ಪಕ್ಷ ಹಿಡಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವದ ಆಚರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಅಧ್ಯಕ್ಷ, ಉಪಾಧ್ಯಕ್ಷರನ್ನು ಪಟ್ಟಣ ಪಂಚಾಯಿತಿ ಕಚೇರಿಯಿಂದ ಗಣಪತಿ ‌ದೇವಾಲಯದವರೆಗೆ ಮೆರವಣಿಗೆ ನಡೆಸುವ‌ ಮೂಲಕ ಸಂಭ್ರಮಿಸಿದರು.

ಈ ವೇಳೆ ಪಟಾಕಿ ಸಿಡಿಸಿ, ಸಿಹಿ ಹಂಚಿ, ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ದೇವಾಲಯದ ಮುಂಭಾಗ ಈಡುಗಾಯಿ ಒಡೆದರು.

ಯೋಜನಾ‌ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಸದಸ್ಯರಾದ ಖಾಲಿ ಮುಲ್ಲಾ, ಸುರೇಯಾಬಾನು, ದಿನೇಶ್, ಜಯಲಕ್ಷ್ಮಿ ನಂಜುಂಡಸ್ವಾಮಿ, ಜಗದೀಶ್, ಸುರೇಶ್, ಆನಂದ್, ನಾಮನಿರ್ದೇಶಿತ ಸದಸ್ಯರಾದ‌ ಜಗದೀಶ್, ಪದ್ಮಾವತಿ, ಶಿವಶಂಕರ, ನವೀನ್ ಕುಮಾರ್, ಎಂ.ವಿ.ಹರೀಶ್, ಪ್ರಕಾಶ್, ಮುಖಂಡರಾದ ಜೋಸೆಫ್ ವಿಕ್ಟರ್‌ ಸೋನ್ಸ್, ಶಿವಶಂಕರ, ರಮೇಶ್‌, ಶಶಿ ಪಾಲ್ಗೊಂಡಿದ್ದರು.

ಕುಶಾಲನಗರ ಪಟ್ಟಣ ಪಂಚಾಯತಿ ಅಧ್ಯಕ್ಷೆಯಾಗಿ ಜಯಲಕ್ಷ್ಮಿ ಚಂದ್ರು ಹಾಗೂ ಉಪಾಧ್ಯಕ್ಷೆ ಪುಟ್ಟ ಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾದರು.
ಕುಶಾಲನಗರ ಪಟ್ಟಣ ಪಂಚಾಯತಿ ಅಧ್ಯಕ್ಷೆಯಾಗಿ ಜಯಲಕ್ಷ್ಮಿ ಚಂದ್ರು ಹಾಗೂ ಉಪಾಧ್ಯಕ್ಷೆ ಪುಟ್ಟ ಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾದರು.
ಕುಶಾಲನಗರ ಪಟ್ಟಣ ಪಂಚಾಯತಿ ಗಣಪತಿ ದೇವಾಲಯದವರೆಗೆ ಕಾರ್ಯಕರ್ತರು ಮೆರವಣಿಗೆ ನಡೆಸಿದರು.
ಕುಶಾಲನಗರ ಪಟ್ಟಣ ಪಂಚಾಯತಿ ಗಣಪತಿ ದೇವಾಲಯದವರೆಗೆ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

ಚುನಾವಣೆ ಬಹಿಷ್ಕರಿಸಿ ಹೊರನಡೆದ ಬಿಜೆಪಿ ಸದಸ್ಯರು ಸಭೆಯಲ್ಲಿ ಭಾಗಿಯಾದ ಜೆಡಿಎಸ್‌ ಸದಸ್ಯರು ನಿರಾಯಾಸವಾಗಿ ಎರಡೂ ಸ್ಥಾನಗಳನ್ನು ಪಡೆದ ಕಾಂಗ್ರೆಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT